ಬಜೆಟ್​ಗಾಗಿ ಅಭಿಪ್ರಾಯ ಕ್ರೋಡೀಕರಣ

ಧಾರವಾಡ: ಹು-ಧಾ ಮಹಾನಗರ ಪಾಲಿಕೆ ಚುನಾವಣಾ ಹೊಸ್ತಿಲಲ್ಲಿದ್ದು, ಕೊನೆಯ ಬಜೆಟ್ ಮಂಡನೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘ- ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಣೆ ಸಭೆ ಗುರುವಾರ ಜರುಗಿತು.

ನಗರದ ಪಾಲಿಕೆ ಕಟ್ಟಡದ ಸಭಾಂಗಣದಲ್ಲಿ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಬಡಿಗೇರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಕ್ರೋಡೀಕರಣ ಮಾಡಲಾಯಿತು. ಆದರೆ ಸಾರ್ವಜನಿಕರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಕಡಿಮೆ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಉಪಯುಕ್ತ ಸಲಹೆಗಳನ್ನು ನೀಡಿದರು.

ಧಾರವಾಡ ಸಂಪಿಗೆನಗರದ ಲಕ್ಷ್ಮೀಕಾಂತ ಬೀಳಗಿ ಮಾತನಾಡಿ, ಕರ ಸಂಗ್ರಹಣೆ ವರ್ಷಕ್ಕೊಮ್ಮೆ ಮಾಡಲಾಗುತ್ತಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಹಾಗಾಗಿ ಪಾಲಿಕೆ ಕರ ಸಂಗ್ರಹಣೆಯಲ್ಲಿ ಹಿಂದೆ ಬಿದ್ದಿದೆ. ವಿದ್ಯುತ್ ಬಿಲ್ ಸಂಗ್ರಹಣೆ ಮಾಡುವಂತೆ ಪ್ರತಿ ತಿಂಗಳು ಅಥವಾ 2-3 ತಿಂಗಳಿಗೊಮ್ಮೆ ಸಂಗ್ರಹಣೆ ಮಾಡಬೇಕು. ಸದಸ್ಯರು ಆಯಾ ವಾರ್ಡ್​ಗಳಿಗೆ ಮಂತ್ರಿ ಇದ್ದಂತೆ. ಕನಿಷ್ಠ ತಿಂಗಳಿಗೊಮ್ಮೆ ಕರ ಸಂಗ್ರಹಣೆ ಕುರಿತು ಜಾಗೃತಿ ಸಭೆ ಆಯೋಜಿಸಬೇಕು. ಹು-ಧಾ ಅವಳಿನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾಗಬೇಕು. ಧಾರವಾಡ- ಹುಬ್ಬಳ್ಳಿ ನಗರಕ್ಕೆ ಸ್ವಾಗತ ಕಮಾನು ನಿರ್ವಿುಸುವ ಯೋಜನೆ ಬಜೆಟ್​ನಲ್ಲಿರಲಿ ಎಂದು ಸೂಚಿಸಿದರು.

ಹುಬ್ಬಳ್ಳಿಯ 37ನೇ ವಾರ್ಡ್​ನ ಜಗದೀಶನಗರ ನಿವಾಸಿಗಳು ಮಾತನಾಡಿ, ವಿಮಾನ ನಿಲ್ದಾಣಕ್ಕಾಗಿ ಈ ಪ್ರದೇಶದ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಾಗಾಗಿ ಸುತ್ತಲೂ ರಸ್ತೆ ಇಲ್ಲದೇ ಪ್ರದೇಶ ನಡುಗಡ್ಡೆಯಾದಂತಾಗಿದೆ. ಸರಿಯಾದ ರಸ್ತೆ ನಿರ್ವಣಕ್ಕೆ ಬಜೆಟ್​ನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅವಳಿ ನಗರದ ಎಲ್ಲ ವಾರ್ಡ್​ಗಳಲ್ಲಿ ಪ್ರದೇಶದ ವಿವರ, ವಾರ್ಡ್ ಸಂಖ್ಯೆ, ಪಾಲಿಕೆ ಸದಸ್ಯ, ಶಾಸಕ- ಸಂಸದರ ವಿವರವುಳ್ಳ ಫಲಕಗಳನ್ನು ಅಳವಡಿಸುವುದು ಸೇರಿದಂತೆ ಇತರ ಅಭಿಪ್ರಾಯಗಳನ್ನು ಸಾರ್ವಜನಿಕರು ಸಭೆಗೆ ತಿಳಿಸಿದರು.

ಮಾಜಿ ಮೇಯರ್​ಗಳಾದ ಪೂರ್ಣಾ ಪಾಟೀಲ, ಮಂಜುಳಾ ಅಕ್ಕೂರ, ಸದಸ್ಯರಾದ ಲಕ್ಷ್ಮಣ ಗಂಡಗಾಳೇಕರ, ವಿಜಯಾನಂದ ಶೆಟ್ಟಿ, ಶಿವಣ್ಣ ಬಡವಣ್ಣವರ, ಬಸಪ್ಪ ಮುತ್ತಳ್ಳಿ, ಮುಖ್ಯ ಲೆಕ್ಕಾಧಿಕಾರಿ ಎಸ್. ಮಾಲತೇಶ ಹಾಗೂ ಪಾಲಿಕೆ ಅಧಿಕಾರಿಗಳಿದ್ದರು.

ಧಾರವಾಡದಲ್ಲಿ ನಡೆದ ಸಭೆಯಲ್ಲಿ ಉತ್ತಮ ಅಭಿಪ್ರಾಯಗಳು ಕೇಳಿಬಂದಿವೆ. ಅನುದಾನಕ್ಕಾಗಿ ಸರ್ಕಾರಕ್ಕೆ ಕೈಯೊಡ್ಡುವ ಬದಲು ಪಾಲಿಕೆಯ ಕರ ಸಂಗ್ರಹಣೆಗೆ ಒತ್ತು ನೀಡುವ ಉತ್ತಮ ಸಲಹೆ ಬಂದಿದೆ. ಆದಾಯ ಹೆಚ್ಚಳಕ್ಕೆ ಒತ್ತು ನೀಡಲಾಗುವುದು. ವಿವಿಧ ಸ್ಥಾಯಿ ಸಮಿತಿಗಳ ಹಾಗೂ ಹುಬ್ಬಳ್ಳಿಯ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಇದೇ ತಿಂಗಳು 28 ಅಥವಾ 29ರಂದು ಜನೋಪಯೋಗಿ ಬಜೆಟ್ ಮಂಡಿಸಲಾಗುವುದು.

| ರಾಮಣ್ಣ ಬಡಿಗೇರ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ