ಬಂಧವೇ ಬೆಳೆಯದ ಸಂಬಂಧ

ಮದುವೆಯಾಗಿ ಮೂರು ವರ್ಷಗಳು. ಮನೆಯಲ್ಲಿ ನಾವಿಬ್ಬರೇ ಇರುವುದು. ಇಬ್ಬರಿಗೂ ಒಳ್ಳೆಯ ಕೆಲಸ. ಕೈತುಂಬ ಸಂಬಳ. ಅವಳಿಂದ ನಾನು ಒಂದು ನಯಾಪೈಸೆಯನ್ನೂ ಕೇಳಿಲ್ಲ. ನನ್ನ ಹೆಂಡತಿ ಈ ಮೂರು ವರ್ಷಗಳಲ್ಲಿ ಸುಮಾರು ನೂರು ಸಲ ತವರಿಗೆ ಹೋಗಿರುತ್ತಾಳೆ. ಅವಳದ್ದು ತೀರಾ ಸ್ವತಂತ್ರ ಸ್ವಭಾವ. ಒಬ್ಬಳೇ ಮಗಳಾಗಿರುವುದರಿಂದ ಅತಿ ಮುದ್ದು ಮಾಡಿದ್ದಾರೆ. ಅವಳ ತಂದೆ ತಾಯಿಯರೇ ಅವಳಿಗೆ ಹೆದರುತ್ತಾರೆ. ಕಳೆದ ವರ್ಷ ತವರಿಗೆ ಹೋಗಿ ಮನೆಗೆ ಬರದೇ ಇದ್ದಾಗ ಪಂಚಾಯಿತಿ ಮಾಡಿಸಿದೆವು. ಆಗ ಮತ್ತೆ ಬಂದಳು. ಈಗ ಆರು ತಿಂಗಳಾಯಿತು. ನನ್ನ ಜೊತೆ ದಿನಕ್ಕೆ ಒಂದೋ ಎರಡೋ ಮಾತಾಡುತ್ತಾಳೆ. ಮನೆ ಕೆಲಸ ಎಲ್ಲ ನಾನೇ ಮಾಡುತ್ತೇನೆ. ಅವಳು ಯಾವಾಗಲೋ ಬರುತ್ತಾಳೆ, ಯಾವಾಗಲೋ ಹೋಗುತ್ತಾಳೆ. ಕೇಳಿದರೆ ‘ಹೆಂಗಸರಿಗೆ ಬೆಲೆ ಕೊಡುವುದನ್ನು ಕಲಿ’ ಎನ್ನುತ್ತಾಳೆ. ನಮ್ಮಿಬ್ಬರಲ್ಲಿ ಈಗ ದೈಹಿಕ ಸಂಬಂಧವೂ ಇಲ್ಲ. ಈಗ ಡಿವೋರ್ಸಿಗೆ ಹಾಕಿದರೆ ಕೇಸು ನನ್ನ ಕಡೆ ಆಗುತ್ತದೆಯೇ ದಯವಿಟ್ಟು ತಿಳಿಸಿ.

ನೀವು ತಿಳಿಸಿರುವ ಹಿನ್ನೆಲೆಯಲ್ಲಿ ನೋಡಿದಾಗ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಪ್ರಕರಣ ಸಲ್ಲಿಸಿದರೆ, ನೀವು ಪತ್ನಿಯ ವರ್ತನೆ ಯಾವ ರೀತಿಯಲ್ಲಿ ಮಾನಸಿಕ ಕ್ರೂರತೆ ಆಗುತ್ತಿದೆ ಎನ್ನುವುದನ್ನು ಸಾಬೀತು ಪಡಿಸಬೇಕು. ದಿನನಿತ್ಯದ ವ್ಯವಹಾರದಲ್ಲಿ ಆಗುವ ಏರುಪೇರುಗಳನ್ನು ಕ್ರೂರತೆ ಎಂದು ನ್ಯಾಯಾಲಯ ಸ್ವೀಕರಿಸುವುದು ಕಷ್ಟ. ಅದಕ್ಕೆ ಬದಲಾಗಿ ನೀವಿಬ್ಬರೂ ಕೂಡಲೇ ಯಾರಾದರೂ ಮ್ಯಾರೇಜ್ ಕೌನ್ಸೆಲರ್ ಹತ್ತಿರ ಹೋಗಿ. ನಿಮ್ಮ ಪತ್ನಿ ಬರದೇ ಹೋದರೆ ನೀವು ಒಬ್ಬರೇ ಆದರೂ ಹೋಗಿ. ಅವರಿಂದ ಸಲಹೆ ಪಡೆಯಿರಿ. ನಿಮ್ಮಿಬ್ಬರ ನಡುವೆ ಇರುವ ಭಿನ್ನಾಭಿಪ್ರಾಯಕ್ಕೆ ಕಾರಣ ಕಂಡುಕೊಳ್ಳಲು ಅವರು ಸಹಾಯ ಮಾಡುತ್ತಾರೆ. ಹಾಗೆಯೇ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಲು ಸೂಕ್ತ ಮಾರ್ಗವನ್ನೂ ಸೂಚಿಸುತ್ತಾರೆ. ಅದು ಫಲಿತವಾಗದೆ ಹೋದರೆ ನಂತರ ವಿಚ್ಛೇದನದ ಬಗ್ಗೆ ಯೋಚಿಸಿ. ದಾಂಪತ್ಯ ಜೀವನದ ಸಮಸ್ಯೆಗಳಿಗೆ ಮೊದಲ ಪರಿಹಾರವೇ ವಿಚ್ಛೇದನ ಎಂದು ಯೋಚಿಸುವುದು ಒಳ್ಳೆಯದಲ್ಲ.

(ಪ್ರತಿಕ್ರಿಯಿಸಿ: [email protected]) (ಲೇಖಕರು ಹೈಕೋರ್ಟ್ ಹಿರಿಯ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು) (ಸೂಚನೆ: ದಯವಿಟ್ಟು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕಳಿಸಬೇಡಿ.)

Leave a Reply

Your email address will not be published. Required fields are marked *