ಬಂಧನ ಭೀತಿಯಲ್ಲಿ ಊರನ್ನೇ ತೊರೆದ ಗ್ರಾಮಸ್ಥರು!

ಚನ್ನಪಟ್ಟಣ: ತಾಲೂಕಿನ ಶ್ರೀನಿವಾಸಪುರ (ಸಾದರಹಳ್ಳಿ ಸೈಟ್) ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಮರ್ಯಾದೆಗೆ ಅಂಜಿ ಕೌಸಲ್ಯಾ ಮತ್ತು ಲೋಕೇಶ್ ದಂಪತಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮದ ಕೆಲವರು ಪೊಲೀಸರ ಬಂಧನಕ್ಕೆ ಹೆದರಿ ಊರು ತೊರೆದಿರುವುದು ಬೆಳಕಿಗೆ ಬಂದಿದೆ.

ಜೂ.11ರಂದು ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅದೇ ಗ್ರಾಮದ ಮುತ್ತಾಲಮ್ಮ ದೇವಾಲಯದ ಅರ್ಚಕ ತ್ಯಾಗರಾಜು ಎಂಬಾತನ ಜತೆ ಕೌಸಲ್ಯಾಗೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಇಬ್ಬರೂ ಗ್ರಾಮದಿಂದ ನಾಪತ್ತೆಯಾಗಿ ವಾರದ ನಂತರ ಕೌಸಲ್ಯಾಳನ್ನು ಗ್ರಾಮಕ್ಕೆ ಕರೆತಂದು ಬಿಟ್ಟಿದ್ದ. ಇದರಿಂದ ಆತಂಕಕ್ಕೆ ಒಳಗಾಗಿದ್ದ ಆಕೆಯ ಪತಿ ಲೋಕೇಶ್, ತ್ಯಾಗರಾಜುವಿನಿಂದ ದೂರವಿರುವಂತೆ ಪತ್ನಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ. ಇದರಿಂದ ಕುಪಿತನಾದ ತ್ಯಾಗರಾಜು ತಾನು ಕೌಸಲ್ಯಾ ಜತೆಯಿದ್ದ ಖಾಸಗಿ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಇದರಿಂದ ಅವಮಾನ ತಡೆಯಲಾಗದೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತ್ಯಾಗರಾಜು ಮನೆ, ಕಾರು, ಬೈಕ್, ಟ್ರಾ್ಯಕ್ಟರ್​ಗೆ ಗ್ರಾಮಸ್ಥರು ಬೆಂಕಿ ಹಚ್ಚಿದ್ದರು.

ಪರಾರಿಯಾಗಿದ್ದ ತ್ಯಾಗರಾಜು ಮೈಸೂರಿನಲ್ಲಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ. ಘಟನೆಗೆ ಸಂಬಂಧಿಸಿದಂತೆ ತ್ಯಾಗರಾಜು ಹಾಗೂ ಆತನ ಕುಟುಂಬದ 6 ಜನರ ವಿರುದ್ಧ ದೂರು ದಾಖಲಾಗಿತ್ತು. ಅವರೆಲ್ಲರನ್ನೂ ಬಂಧಿಸಿರುವ ಅಕ್ಕೂರು ಪೊಲೀಸರು ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ. ಆರೋಪಿ ತ್ಯಾಗರಾಜು ಗ್ರಾಮದ 40 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ.

ಪೊಲೀಸರ ಕಾವಲು: ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಇಂದಿಗೂ ಗ್ರಾಮದಲ್ಲಿ ಪೊಲೀಸರ ಕಾವಲು ಮುಂದುವರಿದಿದೆ. ತ್ಯಾಗರಾಜು ಬಂಧನವಾಗುತ್ತಲೇ ಇತ್ತ ಗ್ರಾಮದ 100ಕ್ಕೂ ಹೆಚ್ಚು ಮಂದಿ ಗ್ರಾಮ ತೊರೆದಿದ್ದಾರೆ. ಬೆಂಕಿ ಹಚ್ಚಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿರುವುದರಿಂದ ಬಂಧನದ ಭೀತಿಯಲ್ಲಿ ಹಲವರು ಮನೆಗಳಿಗೆ ಬೀಗ ಜಡಿದಿದ್ದಾರೆ. ಕೃಷಿ ಚಟುವಟಿಕೆ ಕೈಬಿಟ್ಟು, ಸಾಕು ಪ್ರಾಣಿಗಳನ್ನು ಅಕ್ಕಪಕ್ಕದ ನೆಂಟರಿಷ್ಟರಿಗೆ ಒಪ್ಪಿಸಿ ಊರು ಖಾಲಿ ಮಾಡಿದ್ದಾರೆ. ಇಡೀ ಗ್ರಾಮವೇ ಬಿಕೋ ಎನ್ನುತ್ತಿದೆ. ಮಕ್ಕಳನ್ನು ಶಾಲೆ ಬಿಡಿಸಿ ಸಂಬಂಧಿಕರ ಮನೆಗಳಲ್ಲಿ ಬಿಟ್ಟಿದ್ದಾರೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೂ ಕುತ್ತು ಬಿದ್ದಿದೆ. ಜತೆಗೆ ರಾಜೀ ಸಂಧಾನಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದೆ.

ಪ್ರಕರಣ ಸಂಬಂಧ ಮೃತ ದಂಪತಿ ಕುಟುಂಬದವರು 6 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿಗಳ ಬಂಧನವಾಗಿದೆ. ಆರೋಪಿ ಕೂಡ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಮಂದಿ ವಿರುದ್ದ ದೂರು ದಾಖಲು ಮಾಡಿದ್ದಾನೆ. ಆದರೆ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಅಪರಾಧ ಎಸಗಿರುವವರು ಬಂಧನ ಭೀತಿಯಲ್ಲಿ ಊರು ಬಿಟ್ಟಿದ್ದಾರೆ. ಇನ್ನೂ ಕೆಲವರು ಭಯದಿಂದ ಊರು ಬಿಟ್ಟಿದ್ದಾರೆ. ಬೆಂಕಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಬಂಧಿಸಿಲ್ಲ.

| ಮಲ್ಲೇಶ್ ಚನ್ನಪಟ್ಟಣ ಡಿವೈಎಸ್ಪಿ

Leave a Reply

Your email address will not be published. Required fields are marked *