ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನ ತಾಲೂಕುಗಳಲ್ಲಿ ಕಾಫಿ ಕೃಷಿ ಮಾಡುತ್ತಿರುವ ಬೆಳೆಗಾರರು ಒಂಟಿ ಮನೆಗಳಲ್ಲಿ ವಾಸ ಮಾಡುತ್ತಿದ್ದು, ತಮ್ಮ ಪ್ರಾಣ ಹಾಗೂ ಆಸ್ತಿ ರಕ್ಷಣೆಗಲ್ಲದೆ ಧಾರ್ಮಿಕ ಸಂಪ್ರದಾಯದ ಆಚರಣೆಗಳಿಗೆ ಬಂದೂಕುಗಳನ್ನು ಹೊಂದಿದ್ದಾರೆ. ಈ ಹಿನ್ನೆಯಲ್ಲಿ ನಾಗರೀಕ ಬಂದೂಕು ತರಬೇತಿ ಪಡೆದವರಿಗೆ ಬಂದೂಕು ಪರವಾನಗಿ ನೀಡಬೇಕು ಎಂದು ಒತ್ತಾಯಿಸಿ ಮೂಡಿಗೆರೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಅವರು ಎಸ್‌ಪಿ ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿ ಬಿ.ಆರ್.ಬಾಲಕೃಷ್ಣ, ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಿಂದ ಬಂದೂಕು ಪರವಾನಗಿ ಪಡೆಯಲು ನಾಗರೀಕ ಬಂದೂಕು ತರಬೇತಿ ಹೊಂದುವುದು ಖಡ್ಡಾಯವಾಗಿರುತ್ತದೆ ಎಂಬ ಆದೇಶದ ಅನ್ವಯ ಬೆಳೆಗಾರರಿಗೆ ಬಂದೂಕು ಪರವಾನಗಿ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಕೆಲವು ವರ್ಷಗಳಿಂದ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಮಹಿಳಾ ಬೆಳೆಗಾರರು ಸೇರಿದಂತೆ ಬೆಳೆಗಾರರು ತರಬೇತಿ ಪಡೆದಿದ್ದಾರೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ತಮ್ಮ ಇಲಾಖೆಯಿಂದ ಪ್ರಮಾಣ ಪತ್ರವನ್ನು ನೀಡಲಾಗಿದೆ. ಆದರೆ ಬಂದೂಕು ಪರವಾನಗಿ ನೀಡಲು ಪೊಲೀಸ್ ಇಲಾಖೆ ಬಹುತೇಕ ಬೆಳೆಗಾರರಿಗೆ ಪರವಾನಗಿ ನೀಡಲು ನಿರಾಕರಿಸಿದ್ದಾರೆ ಎಂದು ದೂರಿದರು.
ಸ್ಥಳೀಯ ಠಾಣಾಧಿಕಾರಿಗಳು ಹಾಗೂ ಮೇಲಾಧಿಕಾರಿಗಳಿಂದ ನಿರಪೇಕ್ಷಣಾ ಪತ್ರ ಇದ್ದರೂ ಕೂಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಿಂದ ಬಂದೂಕು ಪರವಾನಗಿಯನ್ನು ನೀಡುವಂತೆ ಬೆಳೆಗಾರರು ನೀಡಿದ ಮನವಿಯನ್ನು ತಿರಸ್ಕರಿಲಾಗುತ್ತಿದೆ ಎಂದು ತಿಳಿಸಿದರು.
ಈ ಸಂಬAಧ ಗಮನ ಹರಿಸಿ ತರಬೇತಿ ಪಡೆದ ಅರ್ಹ ಕಾಫಿ ಬೆಳೆಗಾರರಿಗೆ ಬಂದೂಕು ಹೊಂದಲು ಅವಕಾಶ ಮಾಡಿಕೊಡಬೇಕು. ಬಂದೂಕು ಹೊಂದಲು ಆಸಕ್ತಿ ಇರುವ ಬೆಳೆಗಾರರು ಸಾವಿರಾರು ರೂಪಾಯಿ ಖರ್ಚು ಮಾಡಿ, ವಾರಗಟ್ಟಲೇ ತರಬೇತಿ ಪಡೆದು ಪ್ರಮಾಣ ಪತ್ರವನ್ನು ಪಡೆದವರಿಗೆ ಪರವಾನಗಿ ನಿರಾಕರಿಸಿದರೆ ತರಬೇತಿ ನಿಷ್ಪçಯೋಜಕವಾಗುತ್ತದೆ ಎಂದು ಹೇಳಿದರು.