ಬಂದಿದೆ ಸಂಕ್ರಾಂತಿ ತಂದಿದೆ ಸಂಭ್ರಮ..

ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡುವ ಸಂಕ್ರಮಣ ಈಗ ಬಂದಿದೆ. ಹಬ್ಬದ ಸಂಭ್ರಮಕ್ಕೆ ನಗರ ಹಳ್ಳಿಗಳೆಂಬ ಭೇದವಿಲ್ಲ. ಆಚರಣೆಯಲ್ಲಿ ಸ್ವಲ್ಪ ವ್ಯತ್ಯಾಸವಾಗ ಬಹುದಷ್ಟೇ. ಅಂತಹ ಸಡಗರದ ಹಬ್ಬ ಸಂಕ್ರಾಂತಿ. ವರುಷ ವರುಷ ಬಂದರೂ ಹೊಸತಾಗಿಯೇ ಇರುವ ಈ ಹಬ್ಬ ಸಮೃದ್ಧಿಯ ಸಂಕೇತ. ಹೀಗಾಗಿ ಸಂಕ್ರಾಂತಿ ಹಬ್ಬವೆಂದರೆ ಹಳ್ಳಿಯಿರಲಿ, ನಗರವಿರಲಿ ಎಲ್ಲರಿಗೂ ಸಂಭ್ರಮ.

ಈ ದಿನವನ್ನು ಸುಗ್ಗಿ ಹಬ್ಬ ಎಂದೇ ಹೇಳಲಾಗುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಚರಿಸಲ್ಪಡುವ ಈ ಹಬ್ಬಕ್ಕೆ ವೇದಗಳ ಕಾಲದಿಂದಲೂ ಬಹಳ ಮಹತ್ವವಿದೆ. ಜ್ಯೋತಿಷದ ಪ್ರಕಾರ ಪ್ರತ್ಯಕ್ಷ ದೇವರೆಂದು ಪರಿಗಣಿಸುವ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವ ದಿನದಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯ ದೇವ ದಕ್ಷಿಣಾಭಿಮುಖದಿಂದ ಉತ್ತರಾಭಿಮುಖವಾಗಿ ಚಲಿಸಲು ಆರಂಭಿಸುತ್ತಾನೆ. ಈ ವೇಳೆ ಬೆಳಕು ಹೆಚ್ಚುತ್ತದೆ. ಸೂರ್ಯ ಧನುರ್ ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎಂದು ಹೇಳಲಾಗುತ್ತದೆ.

ಬಸವನಗುಡಿಯ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಯಂದು ಬಹಳ ವಿಶೇಷವಾದ ಪೂಜೆಗಳು ನಡೆಯುತ್ತವೆ. ಸಂಕ್ರಾಂತಿಯ ದಿನ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬೀಳುವ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆ ದಿನ ಭಕ್ತಸಾಗರವೇ ಸೇರಿರುತ್ತದೆ. ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಲ್ಲುವ ಜನ ಈ ವಿಸ್ಮಯವನ್ನು ಕಣ್ಣಾರೆ ಕಾಣಲು ಕಾಯುತ್ತಾರೆ. ಈ ಬಾರಿ ಭಾನುವಾರ (ಜ.14) ಸಂಜೆಯೇ ದೇವಸ್ಥಾನದಲ್ಲಿ ಸೂರ್ಯ ರಶ್ಮಿಯ ದರ್ಶನವಾಗಲಿದೆ. ಅಂದು ಮಧ್ಯಾಹ್ನ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪ್ರವೇಶಿಸುತ್ತಿದ್ದು, ಸಂಜೆ ಸೂರ್ಯ ರಶ್ಮಿ ಗವಿಗಂಗಾಧರೇಶ್ವರನ ಮೇಲೆ ಬೀಳಲಿದೆ. ಆದರೆ, ಸಂಕ್ರಾಂತಿ ಹಬ್ಬದ ಆಚರಣೆ ಜ.15ರಂದೇ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ತಿಳಿಸಿದ್ದಾರೆ.

ಹೇಗಿರುತ್ತದೆ ಆಚರಣೆ?

ಎಳ್ಳು-ಬೆಲ್ಲ ಹಂಚಿ ತಿನ್ನುವ ಸಂಕ್ರಾಂತಿಯಂದು ರೈತರು ತಾವು ಬೆಳೆದ ಬೆಳೆಯನ್ನು ರಾಶಿ ಹಾಕಿ ಪೂಜೆ ಮಾಡುತ್ತಾರೆ. ಸಾಮಾನ್ಯವಾಗಿ ಸಂಕ್ರಾಂತಿ ಸಂದರ್ಭದಲ್ಲಿ ಚಳಿ ಹೆಚ್ಚಾಗಿರುತ್ತದೆ. ಹಾಗಾಗಿ, ಎಳ್ಳು ತಿನ್ನುವುದರಿಂದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬಹುದು. ಹಾಗೇ, ದೇಹದಲ್ಲಿ ಎಣ್ಣೆ ಅಂಶವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದು ಇದರ ಹಿಂದಿನ ಉದ್ದೇಶ. ಈ ಹಬ್ಬ ಕೇವಲ ರೈತರ ಹಬ್ಬವಾಗಿರದೆ ಬೆಂಗಳೂರಿನಂತಹ ಮಹಾನಗರದಲ್ಲೂ ಸಂಕ್ರಾಂತಿ ಯನ್ನು ವಿಜೃಂಭಣೆಯಿಂದಲೇ ಆಚರಿಸಲಾಗುತ್ತದೆ. ಗ್ರಾಮೀಣ ಭಾಗದಂತೆಯೇ ನಗರದಲ್ಲೂ ಕಿಚ್ಚು ಹಾಯಿಸುವ ಪದ್ಧತಿ ಕೆಲವೆಡೆ ಇದೆ. ತಮಿಳುನಾಡಿನಲ್ಲಿ ಪೊಂಗಲ್ ಎಂದು ಆಚರಿಸುವ ಸಂಕ್ರಾಂತಿ ಹಬ್ಬದಂದು ಬೆಂಗಳೂರಿನಲ್ಲೂ ಮನೆಗಳಲ್ಲಿ ಸಿಹಿ ಪೊಂಗಲ್ ಅಥವಾ ಹುಗ್ಗಿ ಮಾಡುವ ರೂಢಿಯಿದೆ. ಎಲ್ಲೆಲ್ಲಿ ಸಂಕ್ರಾಂತಿ ಆಚರಿಸಿ ಕಿಚ್ಚು ಹಾಯಿಸುತ್ತಾರೋ ಅಲ್ಲೆಲ್ಲ ಒಲೆ ಹೂಡಿ

ಸೌದೆ ಉರುವಲು ಬಳಸಿ ಮಡಕೆ, ಪಾತ್ರೆಗಳಲ್ಲಿ ಪೊಂಗಲ್ ಸಿದ್ಧಪಡಿಸಿ ಹಂಚಲಾಗುತ್ತದೆ. ಹೊಸ ಬಟ್ಟೆ ತೊಟ್ಟು ಗೋವಿಗೇ ಭಕ್ತಿಯಿಂದ ನಮಸ್ಕರಿಸಿ, ಸಿಹಿ ಅಡುಗೆ ಮಾಡಿ, ಅಕ್ಕಪಕ್ಕದವರಿಗೆ ಎಳ್ಳು-ಬೆಲ್ಲ ಹಂಚುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ.

ಗಾಳಿಪಟ ವಿತರಣೆ

ರಾಶಿ ಪೂಜೆಯ ನಂತರ ಲಾಲ್ ಬಾಗ್ ಪ್ರಾಕೃತಿಕ ವಿಶಾಲ ಕಲ್ಲಿನ ಬಂಡೆಯ ಮೇಲೆ ಗಾಳಿಪಟದ ಜತೆ ಚಿಣ್ಣರ ಚಿನ್ನಾಟ ನಡೆಯಲಿದೆ. ಅಂದು ರಿಯಾಯಿತಿ ದರದಲ್ಲಿ ಮಕ್ಕಳಿಗೆ ಗಾಳಿಪಟ ವಿತರಿಸಲಾಗುವುದು. ಹಸಿರು ತುಂಬಿರುವ ಲಾಲ್ ಬಾಗ್ ತೋಟದಲ್ಲಿ ವಿವಿಧ ಬಗೆಯ ಪುಷ್ಪಗಳು, ಬಗೆ ಬಗೆಯ ಕಾಯಿಪಲ್ಲೆಗಳು, ಅಲಂಕಾರಿಕ ಹೂ ಸಸಿಗಳು ಪ್ರದರ್ಶನಗೊಳ್ಳಲಿರುವ ಈ ಸಮಯದಲ್ಲಿ ನಾಡಿನ ಹಲವಾರು ಜನಪ್ರಿಯ ಜಾನಪದ ಕಲೆಗಳ ಪ್ರದರ್ಶನವೂ ಸುಗ್ಗಿ-ಹುಗ್ಗಿಯಲ್ಲಿ ಸೇರಲಿದೆ.

ಎಳ್ಳು-ಬೆಲ್ಲಕ್ಕೆ ಡಿಮ್ಯಾಂಡ್

ಸಂಕ್ರಾಂತಿಯಂದು ಎಲ್ಲರೂ ಮನೆಯಲ್ಲಿ ಎಳ್ಳು ಬೆಲ್ಲದ ಮಿಶ್ರಣ ಮಾಡಿ ತಿನ್ನುವುದು ರೂಢಿ. ಚಳಿಗಾಲಕ್ಕೆ ದೇಹಕ್ಕೆ ಬಹಳ ಉಪಯುಕ್ತವಾದ ಎಳ್ಳು, ಕಡಲೆ, ಕೊಬ್ಬರಿ, ಬೆಲ್ಲದ ತುಂಡುಗಳನ್ನು ಸೇರಿಸಿ ಮಿಶ್ರಣ ಮಾಡುವುದರಿಂದ ವೈಜ್ಞಾನಿಕವಾಗಿಯೂ ಇದು ಬಹಳ ಆರೋಗ್ಯಕಾರಿ ಯಾದುದು. ಈಗಾಗಲೇ ಒಂದು ವಾರದಿಂದ ಅಂಗಡಿ ಗಳಲ್ಲಿ ಎಳ್ಳು-ಬೆಲ್ಲದ ಮಾರಾಟ ಜೋರಾಗಿದ್ದು, ಬೇಕಾದ ಗಾತ್ರದ ಪೊಟ್ಟಣಗಳಲ್ಲಿ ಲಭ್ಯವಿದೆ. ಮಿಶ್ರಣ ಮಾಡಿರುವ ಎಳ್ಳು ಬೆಲ್ಲ ಹಾಗೂ ಬೆಲ್ಲ, ಕೊಬ್ಬರಿ, ಎಳ್ಳು, ಹುರಿಗಡಲೆಯ ಪ್ಯಾಕೆಟ್​ಗಳು 20 ರೂ.ಗಳಿಂದ 300 ರೂ. ಪ್ಯಾಕೆಟ್​ವರೆಗೆ ವಿವಿಧ ಗಾತ್ರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಕಿಚ್ಚು ಹಾಯಿಸುವ ಸಂಪ್ರದಾಯ

ಹಳ್ಳಿಗಳಲ್ಲಿ ಗೋವು ಗಳನ್ನು ಕಿಚ್ಚು ಹಾಯಿಸು ವಿಕೆ ಇರುತ್ತದೆ. ಅದೇ ರೀತಿ ಬೆಂಗಳೂರಿನಲ್ಲೂ ಹಲವು ಸಂಸ್ಥೆಗಳು ತಮ್ಮ ಬಡಾವಣೆಗಳಲ್ಲಿ ಕಿಚ್ಚು ಹಾಯಿಸುವ ಮೂಲಕ ಸಾಂಪ್ರದಾಯಿಕವಾಗಿ ಸಂಕ್ರಾಂತಿಯನ್ನು ಆಚರಿಸುತ್ತವೆ ಚಾಮರಾಜಪೇಟೆ, ಶ್ರೀನಗರ, ಕತ್ರಿಗುಪ್ಪೆ ಮುಂತಾದ ಕಡೆಗಳಲ್ಲಿ ಕಿಚ್ಚು ಹಾಯಿಸುವ ಪದ್ಧತಿಯಿದೆ.

ಗವಿ ಗಂಗಾಧರನ ಮೇಲೆ ಸೂರ್ಯ ರಶ್ಮಿ

ಬಸವನಗುಡಿಯ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಯಂದು ಬಹಳ ವಿಶೇಷವಾದ ಪೂಜೆಗಳು ನಡೆಯುತ್ತವೆ. ಸಂಕ್ರಾಂತಿಯ ದಿನ ಸೂರ್ಯನ ರಶ್ಮಿ ಶಿವಲಿಂಗದ ಮೇಲೆ ಬೀಳುವ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಆ ದಿನ ಭಕ್ತಸಾಗರವೇ ಸೇರಿರುತ್ತದೆ. ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಲ್ಲುವ ಜನ ಈ ವಿಸ್ಮಯವನ್ನು ಕಣ್ಣಾರೆ ಕಾಣಲು ಕಾಯುತ್ತಾರೆ. ಈ ಬಾರಿ ಭಾನುವಾರ (ಜ.14) ಸಂಜೆಯೇ ದೇವಸ್ಥಾನದಲ್ಲಿ ಸೂರ್ಯ ರಶ್ಮಿಯ ದರ್ಶನವಾಗಲಿದೆ. ಅಂದು ಮಧ್ಯಾಹ್ನ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪ್ರವೇಶಿಸುತ್ತಿದ್ದು, ಸಂಜೆ ಸೂರ್ಯ ರಶ್ಮಿ ಗವಿಗಂಗಾಧರೇಶ್ವರನ ಮೇಲೆ ಬೀಳಲಿದೆ. ಆದರೆ, ಸಂಕ್ರಾಂತಿ ಹಬ್ಬದ ಆಚರಣೆ ಜ.15ರಂದೇ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *