ಬಂದವರ ಓಣಿ ಬಿಕ್ಕಟ್ಟು ತಾತ್ಕಾಲಿಕ ಶಮನ

ಬಸವಕಲ್ಯಾಣ: ಐತಿಹಾಸಿಕ ಬಂದವರ ಓಣಿಯಲ್ಲಿ ಲಿಂಗ ಮತ್ತು ಭಾವಚಿತ್ರ ತೆರವುಗೊಳಿಸಿ ಅಕ್ಕಮಹಾದೇವಿ ಭಾವಚಿತ್ರ ಅಳವಡಿಸಿದ್ದ ವಿಷಯದಲ್ಲಿ ಎದುರಾಗಿದ್ದ ಬಿಕ್ಕಟ್ಟು ಅಧಿಕಾರಿ-ಜನಪ್ರತಿನಿಧಿ ಹಾಗೂ ಪ್ರಮುಖರ ಮಧ್ಯಸ್ಥಿಕೆಯಿಂದ ತಾತ್ಕಾಲಿಕವಾಗಿ ಶಮನವಾಗಿದೆ.
ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಎಸಿ ಗ್ಯಾನೇಂದ್ರಕುಮಾರ ಗಂಗವಾರ ಅಧ್ಯಕ್ಷತೆ, ಶಾಸಕ ಬಿ.ನಾರಾಯಣರಾವ ನೇತೃತ್ವದಲ್ಲಿ ಗುರುವಾರ ಕರೆದಿದ್ದ ಎರಡೂ ಕಡೆಯ ಪ್ರಮುಖರ ಸಭೆಯಲ್ಲಿ ಶರಣರ ಪವಿತ್ರವಾದ ಭೂಮಿ ಕಲ್ಯಾಣದಲ್ಲಿ ಯಾವುದೇ ಕಾರಣಕ್ಕೂ ಗೊಂದಲ, ವಿವಾದಕ್ಕೆ ಆಸ್ಪದ ನೀಡಬಾರದು. ಎಲ್ಲ ಸಮಸ್ಯೆ ಸೌಹಾರ್ದದಿಂದ ಬಗೆಹರಿಸಲು ಸಹಮತ ವ್ಯಕ್ತವಾಯಿತು. ಲಿಂಗ ಮತ್ತು ಭಾವಚಿತ್ರ ತೆರವು, ಭಾವಚಿತ್ರ ಅಳವಡಿಸಿರುವ ವಿಷಯ ನಿವೃತ್ತ ಬಿಕೆಡಿಬಿ ವಿಶೇಷಾಧಿಕಾರಿ ಎಸ್.ಎಂ. ಜಾಮದಾರ್ ಹಾಗೂ ಬೀದರ್ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು. ಅವರ ನಿರ್ದೇಶನಕ್ಕೆ ಎರಡೂ ಕಡೆಯುವರು ಒಪ್ಪಲು ನಿರ್ಧರಿಸಿದರು.
ಓಣಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿನ ಲಿಂಗ ಮತ್ತು ಭಾವಚಿತ್ರ ತೆರವುಗೊಳಿಸಲಾಗಿದೆ. ಅಕ್ಕಮಹಾದೇವಿ ಭಾವಚಿತ್ರ ತೆಗೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯವರು ಮನವಿ ಮಾಡಿದರು. ಬಿಕೆಡಿಬಿಯಿಂದ ಅಭಿವೃದ್ಧಿ ಕಂಡಿರುವ ಬಂದವರ ಓಣಿ ಶರಣ ಸ್ಮಾರಕ ಸಂರಕ್ಷಿಸಬೇಕು ಎಂದು ಲಿಂಗಾಯತ ಸಮಾಜದ ಪ್ರಮುಖರು ಕೋರಿದರು. ಎಲ್ಲರ ಅಭಿಪ್ರಾಯ ಆಲಿಸಿದ ಶಾಸಕ ನಾರಾಯಣರಾವ, ಅಕ್ಕಮಹಾದೇವಿ ಭಾವಚಿತ್ರಕ್ಕೆ ಯಾರದೇ ವಿರೋಧ ಇಲ್ಲ. ಆದರೆ ಅಳವಡಿಸಿದ ಪದ್ಧತಿ ತಪ್ಪು ಎಂದರು.
ಬಸವಕಲ್ಯಾಣ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿಸುವ ದಿನಗಳು ಸಮೀಪಿಸಿವೆ. ಅನುಭವ ಮಂಟಪ ಕಾರ್ಯಕ್ಕೆ ಶೀಘ್ರ ಚಾಲನೆ ಸಿಗಲಿದೆ. ವಿವಾದ ಬೇಡ. ಜಾಮದಾರ್ ಹೇಳುವಂತೆ ಕೇಳೋಣ ಎಂದಾಗ, ಸಭೆ ಒಮ್ಮತದ ಒಪ್ಪಿಗೆ ಸೂಚಿಸಿತು.
ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ, ತಹಸೀಲ್ದಾರ್ ಸಾವಿತ್ರಿ ಶರಣು ಸಲಗರ, ಪ್ರಮುಖರಾದ ಅನೀಲಕುಮಾರ ರಗಟೆ, ಡಾ.ಎಸ್.ಬಿ.ದುರ್ಗ, ಗೋವಿಂದ ಚಾಮಾಲೆ, ಮಲ್ಲಿಕಾರ್ಜುನ ಬೊಕ್ಕೆ, ರಾಮಣ್ಣ ಮಂಠಾಳ, ನಾಗಣ್ಣ ಚಾಮಾಲೆ, ದಿಗಂಬರ ಬೊಕ್ಕೆ, ಕಾಶಪ್ಪ ಸಕ್ಕರಬಾವಿ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ ಇತರರಿದ್ದರು.

Leave a Reply

Your email address will not be published. Required fields are marked *