ಬಂಜಾರ ಮತಗಳ ಮೇಲೆ ಕಣ್ಣು

>ಬಾಬುರಾವ ಯಡ್ರಾಮಿ ಕಲಬುರಗಿ
ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಬಂಜಾರ ಮತಗಳು ಈ ಹಿಂದಿಗಿಂತ ಈ ಸಲ ಹೆಚ್ಚು ನಿರ್ಣಾಯಕವಾಗಲಿವೆ. ಹೀಗಾಗಿ ಕಾಂಗ್ರೆಸ್-ಬಿಜೆಪಿ ಈ ಸಮುದಾಯದತ್ತ ಇನ್ನಿಲ್ಲದ ಗಮನ ಕೇಂದ್ರೀಕೃತಗೊಳಿಸಿದ್ದು, ತಂತ್ರ-ಪ್ರತಿತಂತ್ರ ರೂಪಿಸಲು ಚಾಣಕ್ಯರು ಸ್ಕೆಚ್ ಹಾಕುತ್ತಿದ್ದಾರೆ.

ಒಂದು ಹಂತದಲ್ಲಿ ಬಂಜಾರಿಗರ ಮೇಲೆ ಕಾಂಗ್ರೆಸ್ ಮತ್ತು ದಲಿತರ ಮೇಲೆ ಬಿಜೆಪಿ ಹೆಚ್ಚು ನಿಗಾ ಇಡುವ ಮೂಲಕ ದಲಿತರ ಮತಗಳನ್ನು ಗಿಟ್ಟಿಸಿಕೊಳ್ಳಲು ಹಣಾಹಣಿ ನಡೆಸಿವೆ. ದಲಿತರಲ್ಲೇ ಸ್ಪರ್ಶ ದಲಿತರು ಎಂದು ಕರೆಸಿಕೊಳ್ಳುವ ಲಂಬಾಣಿ ಮತದಾರರು ಕ್ಷೇತ್ರದಲ್ಲಿ ಸುಮಾರು 2.50 ಲಕ್ಷ ಇರುವ ಅಂದಾಜಿದ್ದು, ಇವರತ್ತ ಎಲ್ಲರ ಕಣ್ಣು ನೆಟ್ಟಿದೆ. ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಹಿಂದೆಯೂ ಎರಡು ಸಲ ಬಂಜಾರ ಸಮುದಾಯದ ಅಭ್ಯರ್ಥಿಯನ್ನೇ ಬಿಜೆಪಿ ಕಣಕ್ಕಿಳಿಸಿತ್ತು.

ಆದರೆ ಹಿಂದಿಗಿಂತಲೂ ಈ ಸಲ ವಿಭಿನ್ನ ವಾತಾವರಣವಿದೆ. ಡಾ.ಉಮೇಶ ಜಾಧವ್ ಬಂಜಾರ ಸಮುದಾಯಕ್ಕೆ ಸೇರಿದವರು ಎಂಬುದು ಬಿಜೆಪಿಗೆ ಪ್ಲಸ್ ಪಾಯಿಂಟ್. ಹೀಗಾಗಿ ಆ ಸಮುದಾಯದವರನ್ನು ಸೆಳೆಯಲು ಕಾಂಗ್ರೆಸ್ ಇನ್ನಿಲ್ಲದ ತಂತ್ರ ರೂಪಿಸುವ ಮೂಲಕ ಮತ ಗಳಿಕೆಗೆ ಯೋಜನೆ ಹಾಕಿಕೊಂಡಿದೆ.

ಮುತ್ಸದ್ಧಿ ಮಲ್ಲಿಕಾರ್ಜುನ ಖರ್ಗೆ ದಲಿತ ಬಲಗೈ ಸಮುದಾಯಕ್ಕೆ ಸೇರಿದ್ದರೂ ಯಾವತ್ತೂ ದಲಿತ ನಾಯಕ ಎಂದು ಹೇಳಿಕೊಂಡಿಲ್ಲ. ಆದರೆ ಚುನಾವಣೆ ಅಂದ್ಮೇಲೆ ಜಾತಿ ರಾಜಕಾರಣಕ್ಕೆ ಒಂದಿಷ್ಟು ಹೆಚ್ಚಿನ ಮಹತ್ವ ಇರುವುದರಿಂದ ಆ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಲೆಕ್ಕಾಚಾರ ಜೋರಾಗಿದೆ.

ಬಿಜೆಪಿ ಜತೆಗೆ ಬಂಜಾರ ಜನರು ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಈಗಷ್ಟೆ ಮಾಜಿ ಸಚಿವ ಬಾಬುರಾವ ಚವ್ಹಾಣ್, ಲಂಬಾಣಿ ಜನರ ನಾಯಕ ಸುಭಾಷ ರಾಠೋಡ ಬಿಜೆಪಿಯಿಂದ ಹೊರ ಬಂದಿದ್ದಾರೆ. ಈಗ ರಾಠೋಡ ಸೇರ್ಪಡೆಯಿಂದ ಒಂದಿಷ್ಟು ಲಾಭ ಕಾಂಗ್ರೆಸ್ಗೆ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಲಂಬಾಣಿ ಸಮುದಾಯದವರೇ ನಮ್ಮ ಅಭ್ಯರ್ಥಿ ಆಗಿದ್ದರಿಂದ ಸಮಾಜದ ಶೇ.90 ಮತಗಳು ತಮಗೆ ಬರಲಿವೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿಯವರಿದ್ದಾರೆ. ಅದರೊಟ್ಟಿಗೆ ತಮ್ಮ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಹತ್ತು ಹಲವು ಪ್ರಯತ್ನಗಳನ್ನು ಕೇಸರಿ ಪಡೆ ಮಾಡುತ್ತಿದೆ. ಹೀಗಾಗಿ ಉಭಯ ಪಕ್ಷಗಳ ಮುಖಂಡರು ಬಂಜಾರ ಮತಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕೃತಗೊಳಿಸಿದ್ದು ವಿಶೇಷ.

ಬಿಜೆಪಿಗೆ ರಾಜೀನಾಮೆ ನೀಡಿದ್ದು, ಯಾವ ಪಕ್ಷ ಸೇರಬೇಕು ಎಂಬುದನ್ನು ನಿರ್ಧರಿಸಿಲ್ಲ, ಯಾರ ಪರವಾಗಿ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ನಿರ್ಧರಿಸಿಲ್ಲ. ಕೊಂಚ ವಿಶ್ರಾಂತಿ ಬಳಿಕ ತಮ್ಮವರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ.
| ಬಾಬುರಾವ ಚವ್ಹಾಣ್ ಮಾಜಿ ಸಚಿವ

ಬಂಜಾರ ಸಮುದಾಯದವರು ಬಿಜೆಪಿ ಪರವಾಗಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಸಿಗಲಿದ್ದು, ದಾಖಲೆಗಳ ಮತಗಳ ಅಂತರದಿಂದ ಡಾ.ಉಮೇಶ ಜಾಧವ್ ಗೆಲುವು ಸಾಧಿಸಲಿದ್ದಾರೆ.
| ವಾಲ್ಮೀಕಿ ನಾಯಕ ಮಾಜಿ ಶಾಸಕ

ಲಂಬಾಣಿ ಸಮುದಾಯದ ಅಭ್ಯರ್ಥಿ ಇದ್ದಾರೆ ಎಂಬ ಕಾರಣಕ್ಕೆ ಬಂಜಾರ ಮತಗಳು ಒಂದೇ ಪಕ್ಷಕ್ಕೆ ಹೋಗುವುದಿಲ್ಲ. ಇಲ್ಲದ ಸುಳ್ಳು ವದಂತಿ ಹರಡಿಸುವ ಮೂಲಕ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೂ ಹೆಚ್ಚಿನ ಮತಗಳು ಬರಲಿವೆ. ಮಲ್ಲಿಕಾರ್ಜುನ ಖರ್ಗೆ ಗೆಲ್ಲುತ್ತಾರೆ.
| ಸುಭಾಷ ರಾಠೋಡ್ ಕಾಂಗ್ರೆಸ್ ನಾಯಕ

Leave a Reply

Your email address will not be published. Required fields are marked *