ಬಂಜಾರರಿಗೆ ಸಿಗಲಿ ಸಾಮಾಜಿಕ ಅಸ್ತಿತ್ವ

ಶಿವಮೊಗ್ಗ: ಸೇವಾಲಾಲರು ಸಾಮಾನ್ಯ ಮನುಷ್ಯನಾಗಿ ಜನ್ಮತಾಳಿ ಅಖಂಡ ಬ್ರಹ್ಮಚಾರಿಯಾಗಿ ಬಹುಸಮುದಾಯಗಳ ಸೇವೆ ಮಾಡಿ ದೈವತ್ವ ಪ್ರಾಪ್ತಿ ಮಾಡಿಕೊಂಡ ಅಸಾಮಾನ್ಯ ಪುರುಷ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ ಅಭಿಪ್ರಾಯಪಟ್ಟರು.

ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕಾ ವಿವಿಯಲ್ಲಿ ಏರ್ಪಡಿಸಿದ್ದ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿ, ರಾಜ್ಯದ 68 ಬುಡಕಟ್ಟುಗಳಲ್ಲಿ ಲಂಬಾಣಿ ಅಲೆಮಾರಿ ಬುಡಕಟ್ಟು ಅತ್ಯಂತ ಪ್ರಾಚೀನವಾದುದು. ಇಂದಿಗೂ ಸಾಮಾಜಿಕ ಅಸ್ತಿತ್ವ ಹಾಗೂ ಸ್ಥಾನಮಾನ ಪಡೆಯುವಲ್ಲಿ ಇದು ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಹಾಗೂ ತೋಟಗಾರಿಕೆ ವಿವಿಯ ಶಿಕ್ಷಣ ನಿರ್ದೇಶಕ ಡಾ.ಎಂ.ಮಂಜುನಾಥ್ ಮಾತನಾಡಿ, ರಾಜಸ್ಥಾನದ ಮೂಲದವರಾದ ಬಂಜಾರರು ಪ್ರಾಮಾಣಿಕತೆ ಹಾಗೂ ಧೈರ್ಯಕ್ಕೆ ಹೆಸರುವಾಸಿ. ನಿಜಾಮರ ಆಳ್ವಿಕೆ ಕಾಲದಲ್ಲಿ ಸೇವಾಲಾಲರ ಸಾಹಸ ಮೆಚ್ಚಿ ಹೈದರಾಬಾದ್​ನಲ್ಲಿ ಬಂಜಾರ ಹಿಲ್ಸ್ ಎಂಬ ಜಾಗವನ್ನು ಉಡುಗೊರೆಯಾಗಿ ನೀಡಿರುವುದು ಐತಿಹಾಸಿಕವಾಗಿ ದಾಖಲಾಗಿದೆ ಎಂದರು.

ಪ್ರಾಧ್ಯಾಪಕ ಬಿ.ಹೇಮ್ಲಾನಾಯ್್ಕ ಮಾತನಾಡಿ, ಸೇವಾಲಾಲರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಜನಿಸಿದ್ದು 18ನೇ ಶತಮಾನದ ಶ್ರೇಷ್ಠ ಸಮಾಜ ಸುಧಾರಕರಾಗಿದ್ದರು. ನ್ಯಾಯ, ನೀತಿ, ಧರ್ಮ, ಅಹಿಂಸೆಯ ಪರಿಪಾಲಕರಾಗಿದ್ದರು ಎಂದು ಹೇಳಿದರು.

ಕುಲಸಚಿವ ಡಾ. ಪಿ.ನಾರಾಯಣಸ್ವಾಮಿ ಮಾತನಾಡಿ, ಬಂಜಾರ ಸಮುದಾಯ ಅತ್ಯಂತ ಶ್ರೀಮಂತ ಸಂಸ್ಕೃತಿ ಹೊಂದಿದೆ. ಈ ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು. ಸಮಾಜ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಎಸ್.ಪಿ.ನಟರಾಜ್, ಕೃಷಿ ವಿಭಾಗದ ಡೀನ್ ಡಾ. ಚಿದಾನಂದಪ್ಪ, ವಿಸ್ತರಣಾ ನಿರ್ದೇಶಕ ಡಾ. ಟಿ.ಎಚ್.ಗೌಡ, ಪ್ರಾಧ್ಯಾಪಕ ಡಾ. ಗಜೇಂದ್ರನಾಯ್್ಕ ಡಾ.ಗಣೇಶ್ ನಾಯ್್ಕ ಇತರರಿದ್ದರು.