ಬಂಕಾಪುರ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ

ಬಂಕಾಪುರ: ಅತ್ಯುತ್ತಮ ಸೇವೆ ನೀಡುವ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಯೋಜನೆಯಡಿ ಕೊಡಮಾಡುವ ಕಾಯಕಲ್ಪ ಪ್ರಶಸ್ತಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಭಾಜನವಾಗಿದೆ. ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 12ನೇ ಸ್ಥಾನ ಪಡೆದಿದೆ.

ಸ್ವಚ್ಛತೆ, ಶೌಚಗೃಹ ವ್ಯವಸ್ಥೆ, ರೋಗಿಗಳ ಆರೈಕೆ, ಸಿಬ್ಬಂದಿ ಸ್ಪಂದನೆ, ಕುಡಿಯುವ ನೀರು, ಉದ್ಯಾನ ಮತ್ತಿತರ ವಿಭಾಗಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಸರ್ಕಾರಿ ಆಸ್ಪತ್ರೆಗಳಿಗೆ ಕೇಂದ್ರ ಸರ್ಕಾರ ನೀಡುವ ಕಾಯಕಲ್ಪ ಪ್ರಶಸ್ತಿಗೆ ರಾಜ್ಯದ 45 ಜಿಲ್ಲಾಸ್ಪತ್ರೆಗಳು, 350 ತಾಲೂಕು ಆಸ್ಪತ್ರೆ, ಸಮುದಾಯ ಮತ್ತು ಪ್ರಾಥಮಿಕ ಆಸ್ಪತ್ರೆಗಳು ಸ್ಪರ್ಧಿಸಿದ್ದವು. ಇವುಗಳಲ್ಲಿ ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರ 92.80 ಅಂಕ ಪಡೆದು ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 12ನೇ ಸ್ಥಾನ ಪಡೆದು ನಗದು ಬಹುಮಾನಕ್ಕೆ ಪಾತ್ರವಾಗಿದೆ.

ಆರೋಗ್ಯ ಇಲಾಖೆ 3 ಸದಸ್ಯರಿರುವ 27 ಬಾಹ್ಯ ಮೌಲ್ಯಮಾಪನ ತಂಡವನ್ನು ರಚಿಸಿತ್ತು. ಈ ಮೂಲಕ ರಾಜ್ಯದಲ್ಲಿನ ಜಿಲ್ಲಾ, ತಾಲೂಕು, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸರ್ವೆ ನಡೆಸಿತ್ತು.

ಪ್ರಶಸ್ತಿ ಪ್ರಕಟಣೆ ಪೂರ್ವದಲ್ಲಿ ಆರೋಗ್ಯ ಕೇಂದ್ರದ ಉತ್ತಮ ನಿರ್ವಹಣೆ, ಸ್ವಚ್ಛತೆ ಕುರಿತು ‘ವಿಜಯವಾಣಿ’ ಫೆ. 6ರಂದು ‘ಮಾದರಿಯಾಗಿದೆ ಈ ಆರೋಗ್ಯ ಕೇಂದ್ರ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈಗ ಆರೋಗ್ಯ ಕೇಂದ್ರ ಪ್ರಶಸ್ತಿಗೆ ಭಾಜನರಾಗಿದ್ದರಿಂದ ಕೇಂದ್ರದ ವೈದ್ಯರಾದ ಡಾ. ಮನೋಜಕುಮಾರ ನಾಯಕ, ಡಾ. ಅನಿಲ ಹೊಸಳ್ಳಿ, ಡಾ. ಎಸ್. ವಸ್ತ್ರದ, ಗೀತಾ ಪಾಟೀಲ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ, ಆರೋಗ್ಯ ಕೇಂದ್ರದ ಬಗೆಗೆ ಬೆಳಕು ಚೆಲ್ಲಿದ ಪತ್ರಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.