ಫ್ಲೈಓವರ್​ನಲ್ಲೇ ನಿಧಾನ ಸಂಚಾರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಮೊದಲಿಗೆ ಫ್ಲೈಓವರ್ ನಿರ್ಮಾಣ ಮಾಡಿದ ಕೀರ್ತಿ ಬಿಆರ್​ಟಿಎಸ್ ಕಂಪನಿಗೆ ಸಲ್ಲುತ್ತದೆ. ಆದರೆ ಫ್ಲೈ ಓವರ್ ರಸ್ತೆಯನ್ನು ಚೆನ್ನಾಗಿ ಮಾಡಿಲ್ಲ ಎಂಬ ಅಪಕೀರ್ತಿಯೂ ಬಿಆರ್​ಟಿಎಸ್ ಕಂಪನಿಗೇ ಸಲ್ಲುತ್ತದೆ!

ಹುಬ್ಬಳ್ಳಿಯ ಉಣಕಲ್ಲ ಕ್ರಾಸ್ ಬಳಿ ಫ್ಲೈ ಓವರ್ ನಿರ್ವಿುಸಲಾಗಿದೆ. ಇಲ್ಲಿ ವಾಹನ ಓಡಿಸಿದ ಯಾರೂ ಇದೊಂದು ಅತ್ಯುತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ಎಂದು ಹೇಳಲು ಸಾಧ್ಯವಿಲ್ಲ. ಫ್ಲೈಓವರ್​ನ ಕಾಂಕ್ರೀಟ್​ನಲ್ಲಿ ಈಗಲೇ ಹೊಂಡ ಬೀಳಲಾರಂಭಿಸಿದೆ. ಇಳಿಜಾರಿನ ಈ ಫ್ಲೈಓವರ್​ನಲ್ಲಿ ವಾಹನಗಳಷ್ಟೇ ಅಲ್ಲ; ಮಳೆ ಬಂದಾಗ ನೀರೂ ಓಡುತ್ತದೆ. ಕೆಲವು ಕಡೆ ನೀರು ನಿಲ್ಲುವಂತೆಯೂ ಇದೆ. ಇದ್ಯಾವ ಮಾದರಿ ಕೆಲಸವೊ? ಕಾಮಗಾರಿ ನಡೆಯುವಾಗ ಸೈಟ್ ಇಂಜಿನಿಯರ್​ಗಳು ಎಲ್ಲಿದ್ದರೊ? ಕೆಲಸ ಮುಗಿದ ಮೇಲೆ ಶೀಘ್ರದಲ್ಲಿ ಫ್ಲೈ ಓವರ್​ಗೆ ಕಾಂಕ್ರೀಟ್ ತೇಪೆ ಹಾಕಲು ಮತ್ತೊಂದು ಅಂದಾಜುಪತ್ರ ತಯಾರಿಸುವ ಉದ್ದೇಶವಿದೆಯೊ ಏನೊ?!

ಇದೇನಾ ‘ಮಾದರಿ ಬಿಆರ್​ಟಿಎಸ್’ ಎಂದು ಕೇಳೋಣ ಎಂದು ಯಾರಾದರೂ ಅಂದುಕೊಂಡರೆ, ನಿರ್ಮಾಣ ಕಾಲದಲ್ಲಿದ್ದ ವ್ಯವಸ್ಥಾಪಕ ನಿರ್ದೇಶಕರು ವರ್ಗವಾಗಿ ಹೋಗಿದ್ದಾರೆ. ಎಂ.ಡಿ. ಹುದ್ದೆ ಖಾಲಿ ಇದ್ದು, ಪ್ರಭಾರಿಯಾಗಿ ವಾಕರಸಾ ಸಂಸ್ಥೆ ಎಂ.ಡಿ. ಇದ್ದಾರೆ. ಅವರು ಇತ್ತೀಚೆಗಷ್ಟೇ ಬಂದಿದ್ದಾರೆ.</p><p>ಈಗ ಬಿಆರ್​ಟಿಎಸ್ ಚಿಗರಿ ಬಸ್ ‘ಕಾಯಂ ಪ್ರಾಯೋಗಿಕ’ ಸಂಚಾರ ನಡೆದಿದೆ. ಬೇರೆ ವಾಹನಗಳೂ ಫ್ಲೈ ಓವರ್​ನಲ್ಲಿ ಸಂಚರಿಸುತ್ತಿವೆ. ಫ್ಲೈಓವರ್​ನ ಉಣಕಲ್ ಕೆರೆ ಸಮೀಪದ ತುರಿಯಲ್ಲಿ ಬಿದ್ದಿರುವ ಜಲ್ಲಿ ರಾಶಿ ಅಪಘಾತಕ್ಕೆ ದಾರಿ ಮಾಡಿಕೊಡುವಂತಿದೆ. ಜಲ್ಲಿ ತೆಗೆಸಲೂ ‘ಮಾದರಿ ಬಿಆರ್​ಟಿಎಸ್’ ಅಧಿಕಾರಿಗಳಿಗೆ ಸಮಯವಿದ್ದಂತಿಲ್ಲ.

ಅತ್ತಿಂದಿತ್ತ ಹೋಗೋದ್ ಹೇಗೆ: ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಎದುರಿನ ಕೋಟಿ ರೂ. ವೆಚ್ಚದ ಬಿಆರ್​ಟಿಎಸ್ ನಿಲುಗಡೆ ಕಟ್ಟೆ ‘ಭಾರಿ ವೈಜ್ಞಾನಿಕತೆ’ಯಿಂದ ಕೂಡಿದೆ. ಎಷ್ಟರ ಮಟ್ಟಿಗೆ ಎಂದರೆ, ಪ್ರಯಾಣಿಕರು ಬಸ್ ನಿಲ್ದಾಣದಿಂದ ಅಲ್ಲಿಗೆ ಹೋಗಲು ದಾರಿ ಯಾವುದೆಂದು ಗೊತ್ತಾಗದೇ, ಉಳಿದ ವಾಹನಗಳ ಮಧ್ಯೆ ತೂರಿಕೊಂಡು ಹೋಗಲಾಗದೇ ಪರದಾಡಬೇಕಿದೆ.

3-4 ತಿಂಗಳು ಅಲ್ಲಿ ಜನರು ತೊಂದರೆ ಸಹಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಹಳೆ ಬಸ್ ನಿಲ್ದಾಣದಿಂದ ಬಿಆರ್​ಟಿಎಸ್ ನಿಲ್ದಾಣಕ್ಕೆ ಒಂದು ಅಂಡರ್​ಪಾಸ್ ನಿರ್ವಿುಸಿದ್ದರೆ ಅಧಿಕಾರಿಗಳಿಗೆ ಪುಣ್ಯ ಬರುತ್ತಿತ್ತು! ವೈಜ್ಞಾನಿಕ, ಮಾದರಿ ಎಂಬ ಶಬ್ದಗಳನ್ನು ಪುಂಖಾನುಪುಂಖವಾಗಿ ಉದುರಿಸಿ ಗಾಳಿ ಗೋಪುರ ತೋರಿಸಿದ ಬಿಆರ್​ಟಿಎಸ್​ನವರು, ಅವರ ಕನ್ಸಲ್ಟಂಟ್​ಗಳು ಎಷ್ಟು ಅವೈಜ್ಞಾನಿಕ ಮತ್ತು ಅವಾಸ್ತವಿಕವಾಗಿ ಯೋಚಿಸಿದ್ದಾರೆ ಎನ್ನಲು ಇಲ್ಲಿಯ ಎಡವಟ್ಟು ವ್ಯವಸ್ಥೆಯೇ ದೊಡ್ಡ ಸಾಕ್ಷಿಯಾಗಿದೆ.

ಸಾವಿರಾರು ಕೋಟಿ ಖರ್ಚು ಮಾಡಿದರೂ ನೆಮ್ಮದಿಯ ಪ್ರಯಾಣ ಇಲ್ಲದ ರಸ್ತೆಯಂತಾಯಿತು ಎಂಬ ಕೊರಗು ಜನರದ್ದಾಗಿದೆ. ಇಂತಹ ಸಮಸ್ಯೆಗಳು ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಂಡು ಬರುತ್ತವೆ. ಬಸ್ ಶೆಲ್ಟರ್​ಗಳ ಬಳಿ ಅಂಡರ್ ಪಾಸ್ ನಿರ್ಮಾಣ ನಿಜಕ್ಕೂ ಅಗತ್ಯವಿದೆ.

ತಿರುವು ಮುರುವು: ಎಂಟು ಪಥದ ರಸ್ತೆಗಳ ಪೈಕಿ ಮಧ್ಯದಲ್ಲಿ ನಾಲ್ಕು ಪಥ ಬಿಆರ್​ಟಿಎಸ್​ಗೆ ಮೀಸಲಾಗಿದೆ. ಅಕ್ಕಪಕ್ಕದ ಎರಡೂ ರಸ್ತೆಗಳಲ್ಲಿ ಒಂದು ಹೋಗುವುದು, ಇನ್ನೊಂದೆಡೆ ಬರುವುದು. ಇಲ್ಲಿ ಒಮ್ಮುಖ ಸಂಚಾರ ಇರಲಿದೆ. ಜಂಕ್ಷನ್​ಗಳಲ್ಲಿ ಮಾತ್ರ ವಾಹನಗಳಿಗೆ ತಿರುವು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಹುಬ್ಬಳ್ಳಿ ಹಾಗೂ ಧಾರವಾಡ ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಯಾಗಿದೆ. ಹುಬ್ಬಳ್ಳಿಯ ವಿದ್ಯಾನಗರ ಕಾಡಸಿದ್ದೇಶ್ವರ ಕಾಲೇಜ್ ಬಳಿಯ (ಲೋಕಪ್ಪನ ಹಕ್ಕಲ) ರಸ್ತೆಯಿಂದ ಧಾರವಾಡ ಕಡೆ ಹೋಗಬೇಕಾದರೆ ತಿರುವು ಪಡೆಯಲು ಕಿಮ್್ಸ ಎದುರಿನ ಜಂಕ್ಷನ್​ಗೆ ಬರಬೇಕು. ಆದರೆ, ಅಷ್ಟೊಂದು ದೂರ ಬರಲು ಯಾರೂ ಮನಸ್ಸು ಮಾಡುತ್ತಿಲ್ಲ. ಸದ್ಯ ಎಲ್ಲರೂ ಏಕಮುಖ ಸಂಚಾರ ರಸ್ತೆಯಲ್ಲೇ ಎದುರು ಹೋಗಿ ಕಾಡಸಿದ್ದೇಶ್ವರ ಕಾಲೇಜ್ ಬಳಿ ತಿರುವು ಪಡೆಯುತ್ತಿದ್ದಾರೆ. ಇಂತಹ ಸಮಸ್ಯೆ ತಲೆದೋರುತ್ತಿರುವುದು ಒಂದು ಕಡೆ ಮಾತ್ರವೇ?