ಫೈನಲ್​ಗೇರಿದ ರ್ಯಾಪ್ಟರ್ಸ್

|ರಘುನಾಥ್ ಡಿ.ಪಿ.

ಬೆಂಗಳೂರು: ಆರಂಭಿಕ ಹಿನ್ನಡೆ ನಡುವೆಯೂ ಭರ್ಜರಿ ನಿರ್ವಹಣೆ ತೋರಿದ ಹಾಲಿ ರನ್ನರ್​ಅಪ್ ಬೆಂಗಳೂರು ರ್ಯಾಪ್ಟರ್ಸ್ ತಂಡ 4ನೇ ಆವೃತ್ತಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಪ್ರಶಸ್ತಿ ಸುತ್ತಿಗೇರಲು ಯಶಸ್ವಿಯಾಯಿತು. ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಲೀಗ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕೆ. ಶ್ರೀಕಾಂತ್ ಸಾರಥ್ಯದ ಬೆಂಗಳೂರು ತಂಡ 4-2ರಿಂದ ಕನ್ನಡತಿ ಅಶ್ವಿನಿ ಪೊನ್ನಪ್ಪ ಒಳಗೊಂಡ ಅವಧ್ ವಾರಿಯರ್ಸ್ ತಂಡವನ್ನು ಮಣಿಸಿತು. ಈ ಮೂಲಕ ಬೆಂಗಳೂರು ತಂಡ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತು. ಶನಿವಾರ ನಡೆಯಲಿರುವ ಹೈದರಾಬಾದ್ ಹಂಟರ್ಸ್ ಹಾಗೂ ಮುಂಬೈ ರಾಕೆಟ್ಸ್ ನಡುವಿನ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಜಯ ದಾಖಲಿಸಿದ ತಂಡದ ವಿರುದ್ಧ ಭಾನುವಾರ ಬೆಂಗಳೂರು ತಂಡ ಪ್ರಶಸ್ತಿಗಾಗಿ ಹೋರಾಡಲಿದೆ.

ಸ್ಟಾರ್ ಆಟಗಾರರಾದ ಸಾಯಿ ಪ್ರಣೀತ್ ಹಾಗೂ ನಾಯಕ ಶ್ರೀಕಾಂತ್ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಜಯ ದಾಖಲಿಸುವ ಮೂಲಕ ಬೆಂಗಳೂರು ತಂಡ ಸಮಬಲ ಸಾಧಿಸಲು ನೆರವಾದರು. ಬಳಿಕ ಪುರುಷರ ಡಬಲ್ಸ್ ವಿಭಾಗವನ್ನು ಟ್ರಂಪ್ ಘೊಷಣೆಯೊಂದಿಗೆ ಕಣಕ್ಕಿಳಿದ ರ್ಯಾಪ್ಟರ್ಸ್ ತಂಡದ ಅನುಭವಿ ಜೋಡಿ ಹೆಂದ್ರ ಸೆತಿಯಾನ್-ಮೊಹಮದ್ ಅಹಸಾನ್ ಜಯ ದಾಖಲಿಸಿ ಬೀಗಿತು.

ಅಶ್ವಿನಿ ಜೋಡಿಗೆ ಸುಲಭ ಜಯ

ಮೊದಲ ಮುಖಾಮುಖಿಯಾದ ಮಿಶ್ರ ಡಬಲ್ಸ್ ವಿಭಾಗವನ್ನು ಟ್ರಂಪ್ ಘೊಷಣೆಯೊಂದಿಗೆ ಆಡಿದ ಅವಧ್ ವಾರಿಯರ್ಸ್ ತಂಡದ ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಮಥಾಯಿಸ್ ಕ್ರಿಶ್ಚಿಯನ್ಸೆನ್ ಜೋಡಿ ಎದುರು ಬೆಂಗಳೂರು ರ್ಯಾಪ್ಟರ್ಸ್ ತಂಡದ ಲೌರೆನ್ ಸ್ಮಿತ್ ಹಾಗೂ ಮಾರ್ಕಸ್ ಎಲ್ಲಿಸ್ ಜೋಡಿ 15-7, 15-10ರಿಂದ ಶರಣಾಯಿತು.

Leave a Reply

Your email address will not be published. Required fields are marked *