ಫೈನಲ್ಗೆ ಲಗ್ಗೆಯಿಟ್ಟ ರೌಜ್ ಸ್ಟಾರ್ಸ್

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಇಲ್ಲಿನ ಸೈಯದ್ ಅಹ್ಮದ್ ಹುಸೇನಿ ಟರ್ಫ್​ ಮೈದಾನದಲ್ಲಿ ಆಯೋಜಿಸಿರುವ ಕೆಬಿಎನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಾಮೆಂಟ್-2019ರ ಕ್ವಾಲಿಫೈಯರ್-1 ಪಂದ್ಯದಲ್ಲಿ ರೌಜ್ ಸ್ಟಾರ್ಸ್ ಗೆಲುವು ಸಾಧಿಸುವ ಮೂಲಕ ಫೈನಲ್ಗೆ ಎಂಟ್ರಿ ಹೊಡೆದಿದೆ. ಸೋಲನುಭವಿಸಿದ ಮಾರ್ಕೆಟ್ ಸೂಪರ್ ಕಿಂಗ್ಸ್ ಕ್ವಾಲಿಫೈಯರ್-2ನಲ್ಲಿ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮಾರ್ಕೆಟ್ ಸೂಪರ್ ಕಿಂಗ್ಸ್ 19.3 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 116 ರನ್ಗಳಿಸಿತು. ಆಸೀಫ್ ಸಿಕಂದರ್ (40 ರನ್), ಶೇಖ್ ಖಾಲಿದ್ (22 ರನ್), ಖೂಷ್ರೋ ಅಹ್ಮದ್ ಅಲಿ ಅನ್ಸಾರಿ (19 ರನ್) ಉತ್ತಮ ಬ್ಯಾಟಿಂಗ್ ಮಾಡಿದರು. ಬರೋಬ್ಬರಿ 8 ಬ್ಯಾಟ್ಸಮನ್ಗಳು ಒಂದಂಕ್ಕಿ ಮೊತ್ತ ದಾಟುವಷ್ಟರಲ್ಲೇ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು. ರೌಜ್ ಸ್ಟಾರ್ಸ್ ಪರ ಬೌಲಿಂಗ್ನಲ್ಲಿ ಎಂಡಿ ಮುನೀರ್ (4 ವಿಕೆಟ್), ಎಂಡಿ ಮೋಸಿನ್, ವಾಜೆದ್ ಅಹ್ಮದ್ ತಲಾ 2 ವಿಕೆಟ್ ಪಡೆದು ಮಿಂಚಿದರು.

117 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ರೌಜ್ ಸ್ಟಾರ್ಸ್ 17.1 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 122 ರನ್ಗಳಿಸಿ ಗೆಲುವಿನ ನಗೆ ಬೀರಿತು. ನಾಯಕ ಅಲಿ ಹುಸೇನ್ (ಅಜೇಯ 51 ರನ್) ಭರ್ಜರಿ ಅರ್ಧಶತಕ ಗಳಿಸಿದರೆ, ಯೂನುಸ್ (32 ರನ್) ಉತ್ತಮ ಸಾಥ್ ನೀಡಿದರು. ಇದರೊಂದಿಗೆ ತಂಡವನ್ನು ಫೈನಲ್ಗೆ ತಲುಪಿಸುವಲ್ಲಿ ಶ್ರಮಿಸಿದರು. ಮಾರ್ಕೆಟ್​ ಸೂಪರ್ ಕಿಂಗ್ಸ್ ಪರ ಬೌಲಿಂಗ್ ಜುಬೇರ್ ಅಹ್ಮದ್ 2 ವಿಕೆಟ್ ಪಡೆದರು.

ಅಲಿ ಹುಸೇನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.