‘ಫೇಸ್’ಗೆ ಮರುಳಾಗಿ ಮೋಸದಾಟಕ್ಕೆ ‘ಬುಕ್’ಆದ..!

ರೋಣ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್ ಹಾಗೂ ವಾಟ್ಸಾಪ್​ಗಳಲ್ಲಿ ನಯವಂಚಕರ ಸಂಖ್ಯೆ ಹೆಚ್ಚುತ್ತಿದೆ. ನಿತ್ಯವೂ ಅಸಂಖ್ಯಾತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದೆಷ್ಟೋ ಪ್ರಕರಣಗಳು ಮುಚ್ಚಿ ಹೋಗುತ್ತಿವೆ. ಹೀಗಿದ್ದರೂ ಮೋಸ ಮಾಡುವವರು ಹಾಗೂ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಫೇಸ್​ಬುಕ್ಕಿನಲ್ಲಿ ಸುಂದರ ಯುವತಿಯ ಫೋಟೋ ನೋಡಿ ಮರುಳಾಗಿ, ಪ್ರೀತಿಯ ಜಾಲಕ್ಕೆ ಬಿದ್ದ ಯುವಕನೊಬ್ಬ 13 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ. ಆತ ಗದಗ ಜಿಲ್ಲೆಯ ರೋಣ ತಾಲೂಕಿನ ಹುಲ್ಲೂರ ಗ್ರಾಮದ ಪ್ರತಿಭಾವಂತ ಯುವಕ. ಪುಣೆಯ ಎಕ್ಸೆಂಚರ್ ಕಂಪನಿಯಲ್ಲಿ ಅಪ್ಲಿಕೇಶನ್ ಡೆವಲಪ್​ವೆುಂಟ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಾನೆ. 2016 ರ ಜುಲೈ ತಿಂಗಳಲ್ಲಿ ಬೆಂಗಳೂರು ಮೂಲದ ಯುವತಿ ಸವಿತಾ (ಹೆಸರು ಬದಲಾಯಿಸಿದೆ) ಎಂಬ ನಾಮದ ಮೂಲಕ ಪರಿಚಯಿಸಿಕೊಂಡಿದ್ದಾಳೆ. ಈಕೆ ಎಂಥಹ ಖತರನಾಕ್ ಹೆಣ್ಣುಮಗಳು ಅಂದರೆ ಮತ್ತೊಂದು ಫೇಸ್​ಬುಕ್ ಖಾತೆ ತೆರೆದು ಈತನನ್ನು ಪರಿಚಯಿಸಿಕೊಂಡಿದ್ದಾಳೆ. ಈ ನಕಲಿ ಖಾತೆಗೆ ಸುಂದರ ಯುವತಿಯೊಬ್ಬಳ ಫೋಟೋ ಹಾಕಿದ್ದಾಳೆ. ಅಷ್ಟೇ ಅಲ್ಲದೇ, ಬೆಂಗಳೂರು ಮೂಲದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಎಂದು ತಿಳಿಸಿ ಯುವಕನೊಂದಿಗೆ ನಿತ್ಯವೂ ಚಾಟಿಂಗ್​ನಲ್ಲಿ ತೊಡಗಿದ್ದಾಳೆ. ದಿನ ಕಳೆದಂತೆ ಫೇಸ್​ಬುಕ್ ಚಾಟಿಂಗ್ ಯುವಕನಲ್ಲಿ ಪ್ರೀತಿ, ಪ್ರಣಯದ ಹುಚ್ಚು ಎಬ್ಬಿಸಿದೆ. ಯುವತಿಯ ಫೇಸ್​ಬುಕ್ ಸಂದೇಶವನ್ನು ನಂಬುತ್ತಾ ಹೋದ ಯುವಕ ವಿವಾಹವಾಗುವಂತೆ ಕೇಳಿಕೊಂಡಿದ್ದಾನೆ. ಯುವಕನ ವಿವಾಹದ ಬೇಡಿಕೆಯನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡ ಯುವತಿ ತನ್ನ ತಾಯಿಗೆ ಹೃದಯ ಸಂಬಂಧಿ ಕಾಯಿಲೆಯಿದೆ. ಹೀಗಾಗಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆ ಕೊಡಿಸಬೇಕಿದೆ ಅಂತ ವೈದ್ಯಕೀಯ ಸನ್ನಿವೇಶ ಸೃಷ್ಟಿಮಾಡಿ ಯುವಕನಿಂದ ಹಂತ ಹಂತವಾಗಿ 13 ಲಕ್ಷ ರೂ. ದೋಚಿದ್ದಾಳೆ.
ಮೋಸ ಹೋಗಿರುವ ಯುವಕ ಇದೀಗ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

Leave a Reply

Your email address will not be published. Required fields are marked *