ಫೆ.5ರಿಂದ 36ನೇ ವೇದಾಂತ ಪರಿಷತ್

ಚಿಕ್ಕೋಡಿ: ತಾಲೂಕಿನ ಕೇರೂರ ಗ್ರಾಮದ ಶ್ರೀ ಸದ್ಗುರು ಶಂಕರಾನಂದ ಪರಮಹಂಸ ಮಠದಲ್ಲಿ 36ನೇ ವೇದಾಂತ ಪರಿಷತ್ ಮಂಗಳವಾರದಿಂದ ಫೆ.8ರವರೆಗೆ ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ.

ಮಂಗಳವಾರ ಬೆಳಗ್ಗೆ ಅಭಿಷೇಕ ಮತ್ತು ಪ್ರಣವ ಧ್ವಜಾರೋಹಣ, ಸಂಜೆ 7ಕ್ಕೆ ಗ್ರಾಮದಲ್ಲಿ ಕುಂಭಮೇಳ ಸಹಿತ ಶ್ರೀಗಳ ಮೆರವಣಿಗೆ ಜರುಗುವುದು. ಪ್ರತಿದಿನ ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಶಾಸ್ತ್ರ ಪ್ರವಚನ ಹಾಗೂ ಸಂಜೆ 6 ರಿಂದ 7 ಗಂಟೆವರೆಗೆ ಗೋಕಾಕ ತಾಲೂಕಿನ ಕಲ್ಲೋಳ ಗ್ರಾಮದ ಸಿದ್ಧಾರೂಢ ಭಜನಾ ಮಂಡಳದಿಂದ ಸಂಗೀತ ಸೇವೆ ನಡೆಯುವುದು.

ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ವೇದಾಂತ ಪರಿಷತ್ ಅಧ್ಯಕ್ಷತೆ ವಹಿಸುವರು. ರಾಮಾನಂದ ಭಾರತಿ ಸ್ವಾಮೀಜಿ ಜಡಿಮಠ ಹುಬ್ಬಳ್ಳಿ, ಸಚ್ಚಿದಾನಂದ ಸ್ವಾಮೀಜಿ ಸಿದ್ಧಾರೂಢ ಮಠ ಹುಬ್ಬಳ್ಳಿ, ಚಿದ್ಘನಾನಂದ ಭಾರತಿ ಸ್ವಾಮೀಜಿ ಜೋಡಕುರಳಿ, ಚಿಕ್ಕೋಡಿಯ ಶ್ರೀ ಸಂಪಾದನಾ ಸ್ವಾಮೀಜಿ, ಗದಗ ಕದಳಿಮಠದ ಮಾತೋಶ್ರೀ ಅಕ್ಕಮಹಾದೇವಿತಾಯಿ, ಮಲ್ಲೇಶ್ವರ ಶರಣರು ಹಡಗಿನಾಳ ಹಾಗೂ ನಿಂಗಾನಂದ ಸ್ವಾಮೀಜಿ ಸವಟಗಿ, ಶಂಕರಹಟ್ಟಿ ಜಡಿಮಠದ ಶರಣ ಶಂಕರಗೌಡ ಪಾಟೀಲ ನೇತೃತ್ವ ವಹಿಸಲಿದ್ದಾರೆ.

ಜೊಲ್ಲೆ ಉದ್ಯೋಗ ಸಮೂಹ ನೀಡಿದ ಧನ ಸಹಾಯದಿಂದ ನಿರ್ಮಿಸಲಾದ ವೇದಾಂತ್ ಪರಿಷತ್ ವೇದಿಕೆಯನ್ನು ಬುಧವಾರ ಡಾ.ಶಿವಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸುವರು. ಫೆ.8ರಂದು ಶ್ರೀಗಳ ಭಾವಚಿತ್ರ ಮೆರವಣಿಗೆ, 11 ಗಂಟೆಗೆ ಸಾಮೂಹಿಕ ವಿವಾಹ ಹಾಗೂ ಮಹಾಪ್ರಸಾದ ಮತ್ತು ಶ್ರೀಮಠದ ವತಿಯಿಂದ ಸದ್ಗುರು ಡಾ.ಶಿವಾನಂದ ಭಾರತಿ ಸ್ವಾಮೀಜಿ ತುಲಾಭಾರ ಸೇವೆ ನಡೆಯಲಿದೆ ಎಂದು ತಿಳಿಸಿದ್ದಾರೆ.