ಫೆ.3ರಿಂದ ವಿಶಾಳಿ ಜಾತ್ರೆ ಮಹೋತ್ಸವ

ಮಾಂಜರಿ: ದಕ್ಷಿಣ ಕಾಶಿ, ಸಂಸ್ಕಾರ, ಸಂಸ್ಕೃತಿಯ ಪುಣ್ಯತಾಣವಾಗಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರದ ಶ್ರೀ ವೀರಭದ್ರ ದೇವಸ್ಥಾನ ಮತ್ತು ಶ್ರೀ ಕಾಡಸಿದ್ದೇಶ್ವರ ಮಠದ ವಿಶಾಳಿ ಜಾತ್ರೆ ಮಹೋತ್ಸವ ಹಾಗೂ ಮಹಾರಥೋತ್ಸವ ಫೆ. 3 ರಿಂದ 5 ವರೆಗೆ ಜರುಗಲಿದೆ ಎಂದು ಶ್ರೀಶೈಲ ಜಗದ್ಗುರು ಹಾಗೂ ಯಡೂರ ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಫೆ.2ರಂದು ಬೆಳಗ್ಗೆ 10.30ಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದ್ದು, ಕೆಎಲ್‌ಇ ಆಸ್ಪತ್ರೆ ಬೆಳಗಾವಿ, ಪಿಡಿಯಾಟ್ರಿಕ್ ಸರ್ಜರಿ ಸೆಂಟರ್ ಸಾಂಗಲಿ, ಸೇವಾಸದನ ಲೈಫ್‌ಲೈನ್ ಆಸ್ಪತ್ರೆ ಮೀರಜ್, ಸಿದ್ದಗಿರಿ ಆಸ್ಪತ್ರೆ ಕನೇರಿ, ಪಾಯ್ಸ ಆಸ್ಪತ್ರೆ ಜಯಸಿಂಗಪುರ, ಕೊಲ್ಲಾಪುರ ಕ್ಯಾನ್ಸರ್ ಸೆಂಟರ್, ಜನನಿ ಹಾಸ್ಪಿಟಲ್ ವಿಜಯಪುರದ ತಜ್ಞ ವೈದ್ಯರು ನೇತ್ರ, ಗಂಟಲು, ಕಿವಿ. ಮೂಗು ತಪಾಸಣೆ, ನ್ಯೂನೆಂಟಲ್ ಮತ್ತು ಪಿಡಿಯಾಟ್ರಿಕ್, ನರರೋಗ ತಪಾಸಣೆ, ಮೂತ್ರಪಿಂಡ ಮತ್ತು ಎಲುಬು-ಕೀಲು, ಕ್ಯಾನ್ಸರ್ ತಪಾಸಣೆ, ಹೃದಯರೋಗ ಮಧುಮೇಹ, ರಕ್ತ , ಸ್ತ್ರೀ ರೋಗ ಮತ್ತು ಗರ್ಭಿಣಿಯರ ತಪಾಸಣೆ ನಡೆಯಲಿದೆ ಎಂದು ತಿಳಿಸಿದರು.

ಫೆ.3ರಂದು ಸಂಜೆ 6.30 ಗಂಟೆಗೆ ಲಾಭದಾಯಕ ಕೃಷಿ ಮಾಹಿತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಶ್ರೀಶೈಲ ಜಗದ್ಗುರು ಸಾನ್ನಿಧ್ಯ ವಹಿಸುವರು. ಮಹಾಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಬಳ್ಳಾರಿ, ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹಿರೇಮಠ ಮನಗೂಳಿ ನೇತೃತ್ವ ವಹಿಸುವರು.

ಕೆ.ಪಿ.ಎಸ್.ಸಿ. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ದೀಪ ಪ್ರಜ್ವಲನೆ ಮಾಡುವರು. ಕವಿತಾ ಶರ್ಮಾ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ ಭಾಗವಹಿಸಲಿದ್ದಾರೆ. ಗುರುಕುಲ ಭಾಸ್ಕರ ಪ್ರಶಸ್ತಿಯನ್ನು ವಿದ್ಯಾಮಾನ್ಯ ಶಿವಾಭಿನವ ಜಯಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ಮತ್ತು ಗುರುಕುಲ ಭೂಷಣ ಪ್ರಶಸ್ತಿಯನ್ನು ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಪ್ರದಾನ ಮಾಡಲಾಗುವುದು. ಬಾಲಭಾಸ್ಕರ ಪ್ರಶಸ್ತಿಯನ್ನು ಎಮ್ಮಿಗನೂರಿನ ಜ್ಞಾನೇಶ ಅವರಿಗೆ ನೀಡಲಾಗುವುದು ಎಂದರು.

ಇದೇ ಸಂಧರ್ಭದಲ್ಲಿ ಪಟ್ಟಾಧಿಕಾರ ರಜತ ಮತ್ತು ದ್ವಾದಶ ಮಹೋತ್ಸವ ಆಚರಿಸಿಕೊಂಡ ಬಂಕಾಪುರಿನ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಶಿವಾಚಾರ್ಯ ಸ್ವಾಮೀಜಿ, ರೌಡಕುಂಡದ ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿಮ್ಮಾ ಇದ್ಲಾಯಿಯ ವಿಜಯಮಹಾಂತ ಶಿವಾಚಾರ್ಯ ಸ್ವಾಮೀಜಿ, ಸುಕ್ಷೇತ್ರ ಪಿ.ಜಿ.ಹುಣಶ್ಯಾಳದ ನಿಜಗುಣ ದೇವರು, ಯಕ್ಕಂಚಿಯ ಅಭಿನವ ರುದ್ರಮನಿ ಶಿವಾಚಾರ್ಯ ಸ್ವಾಮೀಜಿ, ನೂತನ ಪಟ್ಟಾಧಿಕಾರ ಸ್ವೀಕರಿಸಿದ ಮಾದನಹಿಪ್ಪರಗಾದ ಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಹತ್ತಿಕಣಬಸದ ಪ್ರಭುಶಾಂತ ಸ್ವಾಮೀಜಿ, ಮುಸನೂರಿನ ಸಿದ್ದಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ ಹಣ್ಣೆಯ ಅಭಿನವ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳನ್ನು ಸನ್ಮಾನಿಸಲಾಗುವುದು ಎಂದು ಶ್ರೀಗಳು ತಿಳಿಸಿದರು.

ಫೆ.4 ರಂದು ಕ್ರಿಕೆಟ್ ಮಾಜಿ ಆಟಗಾರ ಅನಿಲ ಕುಂಬ್ಳೆ ಅವರಿಗೆ ವಿಶ್ವಚೇತನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪಡಸಾವಳಗಿ ಉದಗೀರದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಅಕ್ಕಲಕೋಟದ ಬಸವಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ. ಶಾಸಕಿ ಶಶಿಕಲಾ ಜೊಲ್ಲೆ ದೀಪ ಪ್ರಜ್ವಲನೆ ಮಾಡುವರು. ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಡಾ.ವೆಂಕಟರಮಣ ಹೆಗಡೆ, ಶ್ರೀಕಾಂತ ಉಮರಾಣೆ, ಭೀಮಗೌಡ ಪಾಟೀಲ ಆಗಮಿಸಲಿದ್ದಾರೆ ಎಂದರು.

ಫೆ.5 ರಂದು ಮಹಾದ್ವಾರದ ಉದ್ಘಾಟನೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೆರವೇರಿಸುವರು. ಮುಖಮಂಟಪದ ಉದ್ಘಾಟನೆಯನ್ನು ಕೇಂದ್ರ ಆಹಾರ ಪೂರೈಕೆ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ನೆರವೇರಿಸುವರು. ಧ್ವಜಸ್ತಂಭದ ಉದ್ಘಾಟನೆಯನ್ನು ಕೆ.ಎಲ್.ಇ. ಟೆಕ್ನಾಲಜಿ ಯುನಿವರ್ಸಿಟಿಯ ಉಪಕುಲಪತಿ ಡಾ.ಅಶೋಕ ಶೆಟ್ಟರ ಮಾಡಲಿದ್ದಾರೆ. ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರೇಕಲ್ಮಠ ಹೊನ್ನಾಳಿಯ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.

ವಿ.ಆರ್.ಎಲ್.ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಂಸದ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಜೊಲ್ಲೆ ಉದ್ಯೋಗ ಸಮೂಹದ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಪ್ರಭುಲಿಂಗೇಶ್ವರ ಶುಗರ್ಸ್‌ ಜಮಖಂಡಿಯ ಅಧ್ಯಕ್ಷ ಜಗದೀಶ ಗುಡಗುಂಟಿಮಠ, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಅಮಿತ ಕೋರೆ ಆಗಮಿಸಲಿದ್ದಾರೆ ಎಂದು ಹೇಳಿದರು.

ಸಂಜೆ 4 ಗಂಟೆಗೆ ವೀರಭದ್ರೇಶ್ವರ ಮಹಾರಥೋತ್ಸವಕ್ಕೆ ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಎಂ.ಚಂದರಗಿ-ಕಡಕೋಳದ ತಪೋಭೂಷಣ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಮಂದ್ರೂಪದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಹೂಲಿ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಂಕಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಉ.ಖಾನಾಪುರದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಭಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಮುತ್ತತ್ತಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಕಬ್ಬೂರಿನ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿಯ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆಯ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ವಿಶಾಳಿ ಜಾತ್ರೆ ಮಹೋತ್ಸವದಲ್ಲಿ ನೀಲಮಾಣಿಕಮಠ ಬಂಡಿಗಣಿಯ ದಾಸೋಹರತ್ನ ಚಕ್ರವರ್ತಿ ದಾನೇಶ್ವರ ಸ್ವಾಮೀಜಿ ದಾಸೋಹ ಸೇವೆ ಮಾಡಲಿದ್ದು ಗುತ್ತಿಗೆದಾರ ಎ.ಬಿ.ಪಾಟೀಲ ಮಹಾರಥೋತ್ಸವದ ಪೆಂಡಾಲ್ ಸೇವೆ ಮಾಡಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಶಹಾಪುರದ ಸೂರಗೂರೇಶ್ವರ ಸ್ವಾಮೀಜಿ, ಅಜಿತ ದೇಸಾಯಿ, ಮಲ್ಲಯ್ಯ ಜಡೆ, ನರಸಗೌಡ ಪಾಟೀಲ, ಲಕ್ಷ್ಮಣ ಹಕಾರೆ, ರಾಜು ದಡ್ಡೆ, ನರಸಗೌಡ ಕಮತೆ, ಭೀಮಗೌಡ ಪಾಟಿಲ, ಅಮರ ಬೋರಗಾಂವೆ, ಸಂಜಯ ಪಿರಾಜೆ, ಅಡವಯ್ಯ ಅರಳಿಕಟ್ಟಿಮಠ ಮತ್ತಿತರರಿದ್ದರು.