ಫೆ. 24ಕ್ಕೆ ಬೆಂಗಳೂರಲ್ಲಿ ಟಿ20

ಮುಂಬೈ: ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿಗೆ ಅಣಿಯಾಗುತ್ತಿರುವ ಸಂದರ್ಭದಲ್ಲಿಯೇ ಬಿಸಿಸಿಐ, ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಫೆ. 24 ರಿಂದ ಆಸೀಸ್ ತಂಡ ಸೀಮಿತ ಓವರ್​ಗಳ ಸರಣಿಗೆ ಭಾರತ ಪ್ರವಾಸ ಕೈಗೊಳ್ಳಲಿದ್ದು, 2 ಟಿ20 ಹಾಗೂ ಐದು ಏಕದಿನ ಪಂದ್ಯಗಳ ಸರಣಿ ಆಡಲಿದೆ.

ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಗುರುವಾರ ಪ್ರಕಟಿಸಿದ್ದು, ಉಭಯ ದೇಶಗಳು ಬೆಂಗಳೂರಿನಲ್ಲಿ ಫೆ. 24 ರಂದು ನಡೆಯಲಿರುವ ಮೊದಲ ಟಿ20 ಪಂದ್ಯಗಳ ಮೂಲಕ ಸರಣಿ ಆರಂಭಿಸಲಿವೆ. ಮಾರ್ಚ್ 13 ರಂದು ದೆಹಲಿಯಲ್ಲಿ ನಡೆಯಲಿರುವ 5ನೇ ಏಕದಿನ ಪಂದ್ಯದೊಂದಿಗೆ ಸರಣಿ ತೆರೆ ಕಾಣಲಿದೆ. ಮುಂಬರುವ ವಿಶ್ವಕಪ್​ಗಾಗಿ ಉಭಯ ತಂಡಗಳಿಗೂ ತಮ್ಮ ಏಕದಿನ ತಂಡವನ್ನು ಸಂಯೋಜನೆ ಮಾಡಿಕೊಳ್ಳಲು ಈ ಸರಣಿ ವೇದಿಕೆಯಾಗಿರಲಿದೆ. ಟಿ20 ಪಂದ್ಯಗಳು ಸಂಜೆ 7ಕ್ಕೆ ಆರಂಭವಾಗಲಿದ್ದರೆ, ಏಕದಿನ ಪಂದ್ಯಗಳು ಮಧ್ಯಾಹ್ನ 1ಕ್ಕೆ ಆರಂಭವಾಗಲಿದೆ. ಈ ಸರಣಿಯ ಬಳಿಕ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧ ಸರಣಿ ಆಡಲಿದ್ದರೆ, ಭಾರತ ತಂಡದ ಆಟಗಾರರು ಐಪಿಎಲ್​ನಲ್ಲಿ ತೊಡಗಿಕೊಳ್ಳಲಿದ್ದಾರೆ. ಸರಣಿ ವೇಳಾಪಟ್ಟಿ: ಫೆ.24: ಮೊದಲ ಟಿ20 (ಬೆಂಗಳೂರು), ಫೆ.27: 2ನೇ ಟಿ20 (ವಿಶಾಖಪಟ್ಟಣ), ಮಾ.2: ಮೊದಲ ಏಕದಿನ (ಹೈದರಾಬಾದ್), ಮಾ.5: 2ನೇ ಏಕದಿನ (ನಾಗ್ಪುರ), ಮಾ.8: 3ನೇ ಏಕದಿನ (ರಾಂಚಿ), ಮಾ.10: 4ನೇ ಏಕದಿನ (ಮೊಹಾಲಿ), ಮಾ. 13: 5ನೇ ಏಕದಿನ (ದೆಹಲಿ).

Leave a Reply

Your email address will not be published. Required fields are marked *