ಫುಟ್‌ವೇರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿ

ರಾಯಬಾಗ: ಪಟ್ಟಣದ ಫುಟ್‌ವೇರ್ ಅಂಗಡಿಯೊಂದಕ್ಕೆ ಸೋಮವಾರ ಬೆಳಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಪಾದರಕ್ಷೆಗಳು ಬೆಂಕಿಗೆ ಆಹುತಿಯಾಗಿವೆ.

ಪಟ್ಟಣದ ಪಾಟೀಲ ಚೌಕ್‌ದಲ್ಲಿರುವ ಸೋಮೇಶ ಮೇತ್ರಿ ಅವರಿಗೆ ಸೇರಿದ ಅಷ್ಟವಿನಾಯಕ ಫುಟ್‌ವೇರ್ ಅಂಗಡಿ ಇದಾಗಿದೆ. ಫುಟ್‌ವೇರ್ ಅಂಗಡಿ ಹಿಂಭಾಗದಲ್ಲಿ ಬೆಳೆಗ್ಗೆ 9 ಗಂಟೆಗೆ ಕಸದ ರಾಶಿಗೆ ಹಚ್ಚಿದ್ದ ಬೆಂಕಿ ಕ್ರಮೇಣ ಅಂಗಡಿಗೆ ತಗುಲಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಅಂಗಡಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಿವಿಧ ಕಂಪನಿ ಪಾದರಕ್ಷೆಗಳು ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ ಯಾವುದೆ ಪ್ರಾಣಾಪಾಯವಾಗಿಲ್ಲ. ಘಟನಾ ಸ್ಥಳಕ್ಕೆ ಪಿಎಸ್‌ಐ ಶಿವಾನಂದ ಲಮಾಣಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.