ಫಲಿತಾಂಶ ಈ ಬಾರಿ ವಿಳಂಬ

ಶಿವಮೊಗ್ಗ: ಇವಿಎಂ (ವಿದ್ಯುನ್ಮಾನ ಮತಯಂತ್ರ) ಬಳಕೆ ಮಾಡಲಾಗಿದ್ದರೂ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಸಂಜೆವರೆಗೆ ಕಾಯುವುದು ಅನಿವಾರ್ಯ.

ಇದುವರೆಗೆ ಇವಿಎಂ ಬಳಕೆ ಮಾಡಿದ ಚುನಾವಣೆಗಳ ಫಲಿತಾಂಶ ಮಧ್ಯಾಹ್ನದ ವೇಳೆಗೆ ಪ್ರಕಟವಾಗುತ್ತಿತ್ತು. ಕಳೆದೆರಡು ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಮಧ್ಯಾಹ್ನದೊಳಗೆ ಫಲಿತಾಂಶ ಸಿಕ್ಕಿತ್ತು. ಆದರೆ ಈ ಬಾರಿ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿ ಪ್ಯಾಟ್​ನಲ್ಲಿ ದಾಖಲಾದ ಮತ ಚೀಟಿಗಳನ್ನು ಎಣಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ಫಲಿತಾಂಶ ಘೊಷಣೆ ತಡವಾಗಲಿದೆ.

ವಿವಿ ಪ್ಯಾಟ್​ನಲ್ಲಿನ ಮತ ಚೀಟಿಗಳ ಎಣಿಕೆಗೆ ಸುಮಾರು ಎರಡೂವರೆ ತಾಸು ಬೇಕಾಗುತ್ತದೆ. ಮಧ್ಯಾಹ್ನ 1ರ ವೇಳೆಗೆ ಟ್ರೆಂಡ್ ಗೊತ್ತಾಗಲಿದೆಯಾದರೂ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗುವುದು ತಡವಾಗಲಿದೆ. ಸಹ್ಯಾದ್ರಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ. ದಯಾನಂದ್ ತಿಳಿಸಿದ್ದಾರೆ.

ಸಹ್ಯಾದ್ರಿ ಕಾಲೇಜಿನ ಸ್ಟ್ರಾಂಗ್ ರೂಂನ 8 ಕೊಠಡಿಗಳಲ್ಲಿ ಪ್ರತ್ಯೇಕವಾಗಿ ಒಂದೊಂದು ವಿಧಾನಸಭಾ ಕ್ಷೇತ್ರದ ಮತ ಯಂತ್ರಗಳನ್ನು ಜೋಡಿಸಿಡಲಾಗಿದೆ. 7 ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ 2 ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮತ ಎಣಿಕೆ ಒಂದೇ ದೊಡ್ಡ ಕೊಠಡಿಯಲ್ಲಿ ನಡೆಯಲಿದೆ. ಪ್ರತಿ ಕೊಠಡಿಯಲ್ಲಿ 7 ಟೇಬಲ್​ಗಳಲ್ಲಿ ಮತ ಎಣಿಕೆ ನಡೆಯಲಿದೆ.

ಬೆಳಗ್ಗೆ 8ಕ್ಕೆ ಸರಿಯಾಗಿ ಅಭ್ಯರ್ಥಿಗಳ ಕಡೆಯ ಏಜೆಂಟರ್​ಗಳ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಆರಂಭದಲ್ಲಿ ಸೇವಾ ಮತ ಪತ್ರ ಹಾಗೂ ಅಂಚೆ ಮತ ಪತ್ರಗಳ ಎಣಿಕೆ ನಡೆಯುತ್ತದೆ. ಏಕ ಕಾಲಕ್ಕೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 17ರಿಂದ 21 ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ.

ವೀಡಿಯೋ ಚಿತ್ರೀಕರಣ:ಮತ ಎಣಿಕೆಯ ಪ್ರತಿ ಹಂತವನ್ನು ವೀಡಿಯೋ ಚಿತ್ರೀಕರಣ ಮಾಡಲಾಗುವುದು. ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನಿಗಾ ವಹಿಸಲಾಗುವುದು. ಚುನಾವಣಾ ಆಯೋಗದ ಪಾಸ್ ಹೊಂದಿದ ಸಿಬ್ಬಂದಿ, ರಾಜಕೀಯ ಪಕ್ಷದ ಏಜೆಂಟರಿಗೆ ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶ ಕಲ್ಪಿಸಲಾಗುವುದು. ಪ್ರತಿ ಹಂತದ ಮತ ಎಣಿಕೆ ವಿವರಗಳನ್ನು ಚುನಾವಣಾ ಆಯೋಗದ ಅಧಿಕೃತ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *