ಫಲಿತಾಂಶಕ್ಕೆ ಮುನ್ನ ರಾಜ್ಯ ಸರ್ಕಾರ ಪತನ

ಶಿಕಾರಿಪುರ/ ಶಿವಮೊಗ್ಗ: ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುವುದರೊಳಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಪತನವಾದರೆ ಆಶ್ಚರ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶಿಕಾರಿಪುರದಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಪತನಕ್ಕೆ ಬಿಜೆಪಿ ಪ್ರಯತ್ನ ಮಾಡುವುದಿಲ್ಲ. ಸಿದ್ದರಾಮಯ್ಯ, ಎಂ.ಬಿ. ಪಾಟೀಲ್ ಸೇರಿ ಹಲವರು ಈಗಾಗಲೇ ಸಿಎಂ ಆಗಬೇಕೆನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆಂತರಿಕ ಸಂಘರ್ಷದಿಂದಲೇ ಈ ಸರ್ಕಾರ ಪತನವಾಗಲಿದೆ ಎಂದರು.

ಕಾಂಗ್ರೆಸ್​ನ 20ಕ್ಕೂ ಹೆಚ್ಚು ಶಾಸಕರಲ್ಲಿ ಅಸಮಾಧಾನವಿದೆ. ಎಚ್.ಡಿ.ಕುಮಾರಸ್ವಾಮಿ ಅವರನ್ನು ಈ ಕ್ಷಣಕ್ಕೂ ಸಿಎಂ ಎಂದು ಒಪ್ಪಿಕೊಳ್ಳಲು ಅವರು ಸಿದ್ಧರಿಲ್ಲ ಎಂದ ಬಿಎಸ್​ವೈ, ಕಾಂಗ್ರೆಸ್ ಪಕ್ಷದ ಯಾವುದೇ ಶಾಸಕರ ಸಂಪರ್ಕದಲ್ಲಿಲ್ಲ, ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್​ನ ಹಿರಿಯ ನಾಯಕರು ಈ ಬಾರಿ ಪರಾಭವಗೊಳ್ಳಲಿದ್ದಾರೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ 10 ಹಾಗೂ ಎರಡನೇ ಹಂತದ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಮಧು ಗೆಲ್ಲಿಸಿ ನನ್ನ ಮರ್ಯಾದೆ ಉಳಿಸಿ ಎಂದು ಶಿವಮೊಗ್ಗದ ಪ್ರಚಾರ ಸಭೆಯಲ್ಲಿ ಎಚ್.ಡಿ.ದೇವೇಗೌಡರು ಮಾಡಿಕೊಂಡಿರುವ ಮನವಿಗೆ ಪ್ರತಿಕ್ರಿಯೆ ನೀಡಿದ ಬಿಎಸ್​ವೈ, ಮೊದಲು ಅವರು ತುಮಕೂರು ಕ್ಷೇತ್ರದಲ್ಲಿ ಗೆಲ್ಲಲಿ ಎಂದು ಕುಟುಕಿದರು.

ಮೈತ್ರಿಪಕ್ಷದ ನಾಯಕರು ಚುನಾವಣೆಗೆ ಕೋಟಿ ಲೆಕ್ಕದಲ್ಲಿ ಹಣ ಖರ್ಚು ಮಾಡಿದ್ದಾರೆ. ಆದರೆ ರಾಘವೇಂದ್ರ 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯಗಳಿಸಲಿದ್ದಾರೆ ಎಂದು ಹೇಳಿದರು.

ಈ ಚುನಾವಣೆ ನಂತರ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಷ್ಟ್ರೀಯ ನಾಯಕರ ತೀರ್ವನಕ್ಕೆ ಬಿಟ್ಟ ವಿಷಯ ಎಂದರು.

ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮಾನ್ಯತೆ ತಂದುಕೊಟ್ಟಿದ್ದಾರೆ. ವಿಶ್ವದ ಆರ್ಥಿಕ ಬಲಿಷ್ಟ ರಾಷ್ಟ್ರಗಳ ಪೈಕಿ ಆರನೇ ಸ್ಥಾನಕ್ಕೆ ತಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರಗಳು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿವೆ. ಮೋದಿ ಸಮರ್ಥ ನಾಯಕನೆಂದು ವಿಶ್ವವೆ ಕೊಂಡಾಡುತ್ತಿದೆ. ಅಖಂಡ ಭಾರತದ ಸಾರ್ವಭೌಮತೆಗೆ ಧಕ್ಕೆ ಬಂದರೆ ಅವರು ಸುಮ್ಮನಿರುವುದಿಲ್ಲ. ದೇಶದ ರಕ್ಷಣೆ ಮತ್ತು ಅಭಿವೃದ್ಧಿಯೇ ಅವರ ಆದ್ಯತೆ ಎಂದು ಹೇಳಿದರು.

ಪುಲ್ವಾಮಾ ದಾಳಿ ನಂತರ ಮೋದಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ದೇಶದ ಜನರ ಪ್ರಶಂಸೆಗೆ ಪಾತ್ರವಾಗಿದೆ. ದೇಶದ ಐಕ್ಯತೆ ಹಾಗೂ ಸಮಗ್ರತೆಗಾಗಿ ಮೋದಿ ಮತ್ತೊಮ್ಮೆ ಗೆದ್ದು ಬರಬೇಕೆಂಬುದು ಜನರ ಆಶಯವಾಗಿದೆ ಎಂದರು.

Leave a Reply

Your email address will not be published. Required fields are marked *