ಮುಗಳಖೋಡ: ಇಲ್ಲಿನ ಪುರಸಭೆಯು ಹೊಲಿಗೆ ಯಂತ್ರ ವಿತರಣೆಗೆ ಫಲಾನುಭವಿ ಆಯ್ಕೆ ಮಾಡುವಲ್ಲಿ ಎಡವಟ್ಟು ಮಾಡಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಮಹೇಂದ್ರ ತಮ್ಮಣ್ಣವರ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೊಲಿಗೆ ಯಂತ್ರ ವಿತರಿಸದೇ ಮರಳಿದರು.
ಮುಖ್ಯಮಂತ್ರಿ ಅಮೃತ ನಗರೋತ್ಥಾನ ಕಾರ್ಯಕ್ರಮದಡಿ ಹೊಲಿಗೆ ಯಂತ್ರ ವಿತರಣೆಗೆ ಅರ್ಹ-ಫಲಾನುಭವಿ ಆಯ್ಕೆ ಮಾಡುವಲ್ಲಿ ಪುರಸಭೆ ನಿರ್ಲಕ್ಷ್ಯ ತೋರಿದೆ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ನೂರಾರು ಮಹಿಳೆಯರು ಆಕ್ರೋಶ ಹೊರಹಾಕಿದರು. ಹೊಲಿಗೆ ಯಂತ್ರ ವಿತರಣೆ ಮಾಡೋವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪುರಸಭೆಗೆ ಬೀಗ ಹಾಕಿ ಪ್ರತಿಭಟಿಸಿದರು.
ಹೊಲಿಗೆ ಯಂತ್ರ ನೀಡುತ್ತೇವೆಂದು ಕರೆಸಿ ಅವಮಾನ ಮಾಡಿದ್ದಾರೆಂದು ಕಣ್ಣೀರು ಹಾಕಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಹಾರೂಗೇರಿ ಠಾಣೆ ಎಎಸ್‌ಐ, ಬಿ.ಎಸ್.ಚಿಕ್ಯಾಗುಂಡಿ ಹಾಗೂ ಅಶೋಕ ಸ್ಯಾಂಡಗಿ ಆಗಮಿಸಿ ಧರಣಿ ನಿರತ ಮಹಿಳೆಯರನ್ನು ಶಾಂತಗೊಳಿಸಿದರು. ಅನ್ಯಾಯವಾದರೆ ಪುರಸಭೆಗೆ ಬೀಗ ಹಾಕಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿ ನಿರ್ಗಮಿಸಿದರು.
ಸರ್ಕಾರಿ ಕೆಲಸದಲ್ಲಿದ್ದವರಿಗೆ ಮತ್ತು ಒಂದೇ ಮನೆಯಲ್ಲಿ ಇಬ್ಬರು ಫಲಾನುಭವಿಗಳು ಆಯ್ಕೆಯಾಗಿದ್ದರಿಂದ ಸಾರ್ವಜನಿಕರಿಂದ ಆಕ್ಷೇಪಣೆ ಬಂದು ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಶಾಸಕರ ಸೂಚನೆಯಂತೆ ವಾರದಲ್ಲಿ ಸರಿಪಡಿಸಿ ಹೊಲಿಗೆ ಯಂತ್ರ ವಿತರಿಸುತ್ತೇವೆ.
| ಉದಯಕುಮಾರ ಘಟಕಾಂಬಳೆ ಮುಖ್ಯಾಧಿಕಾರಿ