ಫಲಾನುಭವಿಗೆ ಹಣ ಕೊಡಿಸಲು ಮರವೇರಿದ ಗ್ರಾಪಂ ಉಪಾಧ್ಯಕ್ಷ !

ಹೊಸನಗರ: ಮಂತ್ರಕ್ಕೆ ಮಾವಿನಕಾಯಿ ಉದುರೀತೆ ಎಂಬುದು ಗಾದೆ ಮಾತು. ಕಾನೂನು ಪ್ರಕಾರವೇ ಮಾಡಬೇಕಾದ ಕೆಲಸವನ್ನು ಅಧಿಕಾರಿಗಳು ವಿಳಂಬ ಮಾಡಿದಾಗ ಜನಪ್ರತಿನಿಧಿಯೊಬ್ಬರು ಮರವೇರಿ ಕುಳಿತು ಪ್ರತಿಭಟನೆ ಮಾಡಿ ಸಾರ್ವಜನಿಕರ ಕೆಲಸ ಮಾಡಿಕೊಟ್ಟಿದ್ದಾರೆ.

ಅಧಿಕಾರಶಾಹಿ ಹೇಗಿದೆ ಎಂಬುದನ್ನು ಹೇಳುವ ಅಗತ್ಯವಿಲ್ಲ. ಸರ್ಕಾರದ ಯೋಜನೆಯ ಅನುದಾನ ಬಿಡುಗಡೆ ಮಾಡಲು ಅನುಸರಿಸುತ್ತಿದ್ದ ವಿಳಂಬ ಧೋರಣೆಯಿಂದ ಬೇಸತ್ತ ಗ್ರಾಪಂ ಉಪಾಧ್ಯಕ್ಷರೇ ಮರವೇರಿ ಪ್ರತಿಭಟನೆ ಮಾಡಿ ಫಲಾನುಭವಿಗೆ ಅನುದಾನ ಬಿಡುಗಡೆ ಮಾಡಿಸಿದ ಕತೆ ಇದು.

ಸ್ವಚ್ಛ ಭಾರತ್ ಯೋಜನೆಯಡಿ ನಗರ ಮುಡುಗುಪ್ಪ ಗ್ರಾಪಂ ವ್ಯಾಪ್ತಿಯ ಮರಿಯಾ ಎಂಬುವರು ಶೌಚಗೃಹ ನಿರ್ವಿುಸಿಕೊಂಡಿದ್ದು. ಆದರೆ ಅವರಿಗೆ ಹಣ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದರು. ತಮಗೆ ಬರಬೇಕಾಗಿದ್ದ ಸರ್ಕಾರದ ಯೋಜನೆಯ ಹಣ ಪಡೆಯಲು ಅವರು ಪದೇಪದೆ ಗ್ರಾಮಪಂಚಾಯಿತಿಗೆ ಬರುತ್ತಿರುವುದನ್ನು ಉಪಾಧ್ಯಕ್ಷ ಕರುಣಾಕರ ಗಮನಿಸಿದ್ದರು.

ಅನಾರೋಗ್ಯದಿಂದ ಬಳಲುತ್ತಿದ ಅವರು ಪದೇಪದೆ ಗ್ರಾಮ ಪಂಚಾಯಿತಿಗೆ ಅಲೆದಾಡುವುದನ್ನು ನೋಡಲಾಗದೆ ಮರಿಯಾ ಅವರನ್ನು ಅಲೆದಾಡಿಸಬೇಡಿ. ಸರ್ಕಾರದ ಹಣವನ್ನು ಕೊಟ್ಟುಬಿಡಿ ಎಂದು ಅಧಿಕಾರಿಗಳಿಗೆ ಹೇಳಿದರು. ಅವರ ಮಾತಿಗೂ ಬೆಲೆ ಸಿಗಲಿಲ್ಲ.

ಬಡವರಿಗೆ ಗ್ರಾಮ ಪಂಚಾಯಿತಿ ಹಣ ನೀಡಿದೇ ವಿಳಂಬ ಮಾಡಿದ ಕಾರಣ ಅಧಿಕಾರಿಗಳ ಧೋರಣೆ ಖಂಡಿಸಿ ಸೋಮವಾರ ತಾಲೂಕಿನ ಬಿದನೂರಲ್ಲಿ ಮರ ಏರಿ ಪ್ರತಿಭಟನೆ ನಡೆಸಿದರು.

ವಿಷಯ ತಾಲೂಕು ಪಂಚಾಯಿತಿ ಕಚೇರಿವರೆಗೆ ಹೋಯಿತು . ಸ್ಥಳಕ್ಕೆ ತಾಪಂ ಇಒ ಡಾ. ರಾಮಚಂದ್ರ ಭಟ್ ದೌಡಾಯಿಸಿ ಬಂದು ಅಧಿಕಾರಿಗಳಿಂದ ಫಲಾನುಭವಿಗೆ ಹಣ ಪಾವತಿ ಮಾಡಿಸಿದರು. ಫಲಾನುಭವಿಗೆ ಹಣ ನೀಡದ ಹೊರತು ಮರದಿಂದ ಇಳಿಯುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದ ಉಪಾಧ್ಯಕ್ಷ ಹಣ ಕೊಟ್ಟ ನಂತರವೇ ಮರದಿಂದ ಕೆಳಗೆ ಇಳಿದರು.