ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ

ಶಿರಹಟ್ಟಿ: ಸ್ವಂತ ಮನೆ ಹೊಂದಬೇಕು ಎಂಬ ಮಧ್ಯಮ ಹಾಗೂ ಕಡು ಬಡವರ ಕನಸು ನನಸಾಗಿಸಲು ಸರ್ಕಾರ ಮನೆ ನಿರ್ವಿುಸಿಕೊಳ್ಳಲು ಅನುಕೂಲ ಕಲ್ಪಿಸಿದೆ. ಅನುದಾನ ಬಳಸಿಕೊಂಡು ವಸತಿರಹಿತರೆಲ್ಲರಿಗೂ ಸೂರು ಕಲ್ಪಿಸುವ ಉದ್ದೇಶವಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಪಪಂ ವತಿಯಿಂದ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪಪಂ. ವ್ಯಾಪ್ತಿಯ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಮಹಿಳಾ ಫಲಾನುಭವಿಗಳಿಗೆ ಮನೆ ನಿರ್ವಣದ ಕಾರ್ಯಾದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ವಾಜಪೇಯಿ ವಸತಿ ಯೋಜನೆಯಡಿ ಈಗಾಗಲೇ 5 ಎಕರೆ ಭೂಮಿ ಖರೀದಿಸಿ ನಿವೇಶನ ರಹಿತರಿಂದ ಅರ್ಜಿ ಪಡೆದು ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಾ ನೀಡುವಷ್ಟರಲ್ಲಿ ಕೆಲವರು ಕೋರ್ಟ್ ಮೆಟ್ಟಿಲೇರಿರುವ ಸಂಗತಿ ತಿಳಿದು ಬಂದಿದೆ. ಆದರೆ, ಯಾರಿಗೂ ಅನ್ಯಾಯ ಮಾಡುವ ಉದ್ದೇಶ ಪಟ್ಟಣ ಪಂಚಾಯಿತಿಗಿಲ್ಲ ಎಂದರು.
ಅಲ್ಲದೆ, ರಾಜ್ಯ ಸರ್ಕಾರ ಬೀದಿ ವ್ಯಾಪಾರಸ್ಥರ ಜೀವನೋಪಾಯಕ್ಕಾಗಿ ಜಾರಿಗೆ ತಂದ ನಲ್ಮ್ ಯೋಜನೆಯಡಿ ಪಟ್ಟಣದ 157 ಬೀದಿ ವ್ಯಾಪಾರಸ್ಥರಿಗೆ ಶಾಸಕ ಲಮಾಣಿ ಗುರುತಿನ ಚೀಟಿ ವಿತರಿಸಿದರು.
ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಮಾತನಾಡಿ, ಬೀದಿ ವ್ಯಾಪಾರಸ್ಥರು ತಾವು ಪಡೆದ 10 ಸಾವಿರ ರೂ.ಬಡ್ಡಿ ರಹಿತ ಸಾಲವನ್ನು ಸಕಾಲಕ್ಕೆ ಮರು ಪಾವತಿಸುವ ಇಚ್ಛಾಶಕ್ತಿ ತೋರಬೇಕು ಎಂದರು.
ಪಪಂ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಮಾತನಾಡಿ, ವಿವಿಧ ವಸತಿ ಯೋಜನೆಯಡಿ 406 ಫಲಾನುಭವಿಗಳನ್ನು ಗುರುತಿಸಿದು, ಮನೆ ನಿರ್ವಣಕ್ಕೆ ಸಾಮಾನ್ಯರಿಗೆ 2.70 ಲಕ್ಷ, ಎಸ್ಸಿಎಸ್ಟಿ ಜನಾಂಗಕ್ಕೆ 3.30 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ ಎಂದರು.
ಮುಖಂಡ ವಿ.ವಿ. ಕಪ್ಪತ್ತನವರ, ಪಪಂ. ಸದಸ್ಯ ಸಂದೀಪ ಕಪ್ಪತ್ತನವರ, ಫಕೀರೇಶ ರಟ್ಟಿಹಳ್ಳಿ, ರಾಮಣ್ಣ ಡಂಬಳ, ವೀರಣ್ಣ ಮಜ್ಜಗಿ, ಗೂಳಪ್ಪ ಕರಿಗಾರ, ಅನಿಲ ಮಾನೆ, ಯಲ್ಲಪ್ಪ ಇಂಗಳಗಿ ಇತರರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಗುರು ಪ್ರಸಾದ ನಿರೂಪಿಸಿದರು.