ಫಕೀರಪ್ಪ ತಾಂದಳೆಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ

ಹಿರೇಕೆರೂರ: ಮೂಲತಃ ತಾಲೂಕಿನ ಚಿಕ್ಕೇರೂರ ಗ್ರಾಮದವರಾದ ಕಲಾವಿದ ಫಕೀರಪ್ಪ ತಾಂದಳೆ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಫಯಾಜಖಾನ್ ಬಿಡುಗಡೆಗೊಳಿಸಿರುವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಹಾವೇರಿ ಜಿಲ್ಲೆಯಿಂದ ಹಿರೇಕೆರೂರ ತಾಲೂಕಿನ ಫಕೀರಪ್ಪ ತಾಂದಳೆ ಅವರಿಗೆ ಸ್ಥಾನ ಕಲ್ಪಿಸಿರುವುದು ಕಲಾಭಿಮಾನಿಗಳಲ್ಲಿ ಸಂತಸ ತಂದಿದೆ.

ಅ. 30ರಂದು ಜರುಗಲಿರುವ ಕಾರ್ಯಕ್ರಮದಲ್ಲಿ ‘ಕರ್ನಾಟಕ ಕಲಾಶ್ರೀ’ ಗೌರವ ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿ ಫಲಕದ ಜತೆಗೆ 50 ಸಾವಿರ ರೂ. ನಗದು ನೀಡಲಾಗುತ್ತದೆ.

ಜೀವನ ಬಂಡಿ ಸಾಗಿಸಲು ಟೈಲರಿಂಗ್ ಕೆಲಸ ಮಾಡುತ್ತಿರುವ ಫಕೀರಪ್ಪ ಅವರು, ಸದ್ಯ ಹಿರೇಕೆರೂರಿನಲ್ಲಿ ಇಬ್ಬರು ಮಕ್ಕಳ ಜತೆ ವಾಸವಾಗಿದ್ದಾರೆ. 30ನೇ ವಯಸ್ಸಿನಲ್ಲಿ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವ ಅವರಿಗೀಗ 84ರ ಹರೆಯ. ಫಕೀರಪ್ಪನವರು ತಬಲಾ, ಹಾಮೋನಿಯಂ ವಾದಕರು. ಅವರು ವಾದ್ಯ ನುಡಿಸಿದರೆ ಎಂಥವರಾದರೂ ಮಂತ್ರಮುಗ್ಧರಾಗುತ್ತಾರೆ. ಜತೆಗೆ ಫಕೀರಪ್ಪ ಅವರು ಸಂಗೀತ ಕಛೇರಿ ಸಂಘಟಕರಾಗೇ ಪ್ರಸಿದ್ಧಿ ಪಡೆದವರು. ಪಂ. ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್ ಹೀಗೆ ಸಂಗೀತ ದಿಗ್ಗಜರ ಒಡನಾಟ ಹೊಂದಿದ್ದ ಫಕೀರಪ್ಪನವರು ಸಂಗೀತ ಕಾರ್ಯಕ್ರಮಗಳಿಗೆ ದಿಗ್ಗಜರನ್ನು ಸಲೀಸಾಗಿ ಕರೆಸುತ್ತಿದ್ದರು. ಸಂಗೀತ ಕ್ಷೇತ್ರದಲ್ಲಿ ಅವರ ಸಂಘಟನಾ ಸೇವೆಯೂ ಪ್ರಮುಖವಾದದ್ದು.

ಇಳಿ ವಯಸ್ಸಿನಲ್ಲೂ ಸಭೆ- ಸಮಾರಂಭಗಳಿಗೆ ತೆರಳಿ ಕಾರ್ಯಕ್ರಮ ನೀಡುವ ಫಕೀರಪ್ಪ ಅವರು, ಪಟ್ಟಣದಲ್ಲಿ ಸಂಗೀತ ಶಾಲೆ ಆರಂಭಿಸಿದ್ದು, ಅನೇಕ ಕಲಾವಿದರನ್ನು ಈ ನಾಡಿಗೆ ಪರಿಚಯಿಸಿದ್ದಾರೆ. ಸಂಗೀತ ಕಲಿಯಲು ಬರುವ ಆಸಕ್ತರಿಂದ ಯಾವುದೇ ಸಂಭಾವನೆ ಪಡೆಯುತ್ತಿಲ್ಲ.

ಫಕೀರಪ್ಪನವರು ಸಂಗೀತ ಕ್ಷೇತ್ರ ಆಯ್ದುಕೊಳ್ಳಲು ಚಿಕ್ಕೇರೂರಿನ ದಿಂಡಿ ಉತ್ಸವದ ಅಖಂಡ ಏಕಾದಶಿ ಜಾಗರಣೆ ಪ್ರೇರಣೆ. ನಾದಬ್ರಹ್ಮ ಪಂಡರಾಪುರದ ಶ್ರೀ ವಿಠ್ಠಲ ದೇವರ ಆರಾಧನೆಗಾಗಿ ಸಂತ ತುಕಾರಾಮ ಮಹಾರಾಜರ ಅಭಂಗಗಳ ಆದಿಯಾಗಿ ಅಭಂಗ, ಕಿರ್ತನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಇವರು, ಸಂಗೀತದ ಸವಿರುಚಿಯನ್ನು ಎಲ್ಲರಿಗೂ ಅಸ್ವಾದಿಸುವುದನ್ನು ಕಲಿಸಿರು. ಕುಂದಗೋಳದಲ್ಲಿ ಪ್ರತಿವರ್ಷ ಜರುಗುವ ಸವಾಯಿ ಗಂಧರ್ವರ ಪುಣ್ಯತಿಥಿಯಲ್ಲಿ ಭಾಗಿಯಾಗಿ ಸಂಗೀತ ಸೇವೆ ನೀಡುವ ಇವರ ಕಾರ್ಯ ಮಹತ್ತರವಾದದ್ದು.

ಸ್ವಂತ ಮನೆ ಇಲ್ಲ..: ಫಕೀರಪ್ಪ ತಾಂದಳೆ ಅವರದ್ದು ಬಡ ಕುಟುಂಬ. ಮೊದಲಿನಿಂದಲೂ ಬಟ್ಟೆ ಹೊಲಿಯುವುದು, ಹೊಲಿಗೆ ಯಂತ್ರ ರಿಪೇರಿ ಮಾಡುತ್ತಲೇ ಜೀವನ ಸಾಗಿಸುತ್ತ ಬಂದಿದ್ದಾರೆ. ಇಂದಿಗೂ ಅವರಿಗೆ ಸ್ವಂತ ಮನೆಯಿಲ್ಲ. ಬಾಡಿಗೆ ಮನೆಯಲ್ಲೇ ವಾಸವಾಗಿದ್ದಾರೆ. ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ನೀಡುತ್ತಿರುವ ಫಕೀರಪ್ಪ ಅವರಿಗೆ ಸರ್ಕಾರ ಸ್ವಂತ ಮನೆ ನೀಡಬೇಕು ಎಂಬುದು ಈ ಭಾಗದ ಕಲಾಪ್ರಿಯರ ಒತ್ತಾಸೆಯಾಗಿದೆ.

ಶಿಸಿ ಹೋಗುತ್ತಿರುವ ಕಲಾವಿದರನ್ನು ಗುರುತಿಸುವ ಕಾರ್ಯ ಒಳ್ಳೆಯದು. ಇಳಿ ವಯಸ್ಸಿನಲ್ಲಿ ನನಗೆ ಕರ್ನಾಟಕ ಸಂಗೀತ ಅಕಾಡೆಮಿ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ. ಕಲಾವಿದರಿಗೆ ಹಣ, ಆಸ್ತಿ, ಯಾವುದೂ ಬೇಡ ಪ್ರಶಸ್ತಿ ಸಿಕ್ಕರೆ ಜೀವನವೇ ಸಾರ್ಥಕವಾಗುತ್ತದೆ. ನಶಿಸುತ್ತಿರುವ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಯುವಕರು, ಯುವತಿಯರು ಹೆಚ್ಚಿನ ಆಸಕ್ತಿ ವಹಿಸಬೇಕು.

| ಫಕೀರಪ್ಪ ತಾಂದಳೆ