More

  ಪ್ರತಿಷ್ಠಿತ ಇನ್ಫೋಸಿಸ್​ ಪ್ರಶಸ್ತಿ ಆಯ್ಕೆ: ವಯೋಮಿತಿ 50ರಿಂದ 40ಕ್ಕೆ ಇಳಿಕೆ

  ಬೆಂಗಳೂರು: ಪ್ರಸಕ್ತ ವರ್ಷದಿಂದ 40 ವರ್ಷಗಿಂತ ಕೆಳಗಿನ ಪ್ರತಿಭಾವಂತ ಸಂಶೋಧಕರನ್ನು ಇನ್ಫೋಸಿಸ್​ ಪ್ರಶಸ್ತಿ ಆಯ್ಕೆಗೆ ಪರಿಗಣಿಸುವುದಾಗಿ ಇನ್ಫೋಸಿಸ್​ ಸೈನ್ಸ್​ ಫೌಂಡೇಷನ್​ನ (ಐಎಸ್​ಎಫ್​) ಟ್ರಸ್ಟಿ ಎನ್​. ಆರ್​.ನಾರಾಯಣ್​ ಮೂರ್ತಿ ಹೇಳಿದ್ದಾರೆ.

  15 ವರ್ಷಗಳಿಂದ 50 ವರ್ಷಗಿಂತ ಕೆಳಗಿನವರಿಗೆ ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡು ಬರಲಾಗುತ್ತಿತ್ತು. 2024-25ನೇ ಸಾಲಿನಿಂದ ವಯೋಮಿತಿಯನ್ನು 50ರಿಂದ 40ಕ್ಕೆ ಇಳಿಸಲಾಗಿದೆ. ಇಂಜಿನಿಯರಿಂಗ್​ ಮತ್ತು ಕಂಪ್ಯೂಟರ್​ ವಿಜ್ಞಾನ, ಮಾನವಿಕ ಮತ್ತು ಸಮಾಜ ವಿಜ್ಞಾನ, ಜೀವ ವಿಜ್ಞಾನ, ಗಣಿತ ವಿಜ್ಞಾನ ಹಾಗೂ ಭೌತ ವಿಜ್ಞಾನ ವಿಭಾಗದಲ್ಲಿ ಈವರೆಗೆ ಪ್ರಶಸ್ತಿಗೆ ನೀಡುತ್ತಾ ಬರುತ್ತಿದ್ದವು. ಇನ್ನು ಮುಂದೆ ಅರ್ಥಶಾಸ ವಿಭಾಗದಲ್ಲಿಯೂ ಪ್ರತ್ಯೇಕವಾಗಿ ಪ್ರಶಸ್ತಿ ನೀಡಲಾಗುವುದು. ಈ ಮೂಲಕ ಒಟ್ಟು ಆರು ವಿಭಾಗದಲ್ಲಿ ಪ್ರಶಸ್ತಿ ನೀಡಿದಂತಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ನಾರಾಯಣ್​ ಮೂರ್ತಿ ಮಾಹಿತಿ ನೀಡಿದರು.

  ಅಲ್ಬರ್ಟ್​ ಐನ್​ಸ್ಟೈನ್​, ಮೇಡಂ ಕ್ಯೂರಿ, ಶ್ರೀನಿವಾಸ ರಾಮಾನುಜಂ, ಸುಬ್ರಹ್ಮಣ್ಯಂ ಚಂದ್ರಶೇಖರ್​ ಸೇರಿ ಹಲವು ಸಂಶೋಧಕರು ತಮ್ಮ 20-30ರ ವಯಸ್ಸಿನಲ್ಲೇ ಕ್ರಾಂತಿಕಾರಿ ಸಂಶೋಧನೆ ಮಾಡಿದ್ದರು. ಪ್ರಸ್ತುತ ದೇಶದ ಐಐಟಿ, ಐಐಎಸ್ಸಿಗಳಿಂದ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಾವಂತ ಯುವ ಸಂಶೋಧಕರು ಹೊರಹೊಮ್ಮುತ್ತಿದ್ದಾರೆ. ಅವರಿಗೆ ನೆರವು ನೀಡಿದರೆ ಪರಿಣಾಮಕಾರಿಯಾಗಿ ಸಂಶೋಧನೆ ನಡೆಸಲು ಪುರಸ್ಕಾರದ ವಯೋಮಿತಿಯನ್ನು ಇಳಿಸಲಾಗಿದೆ.ಯುವ ವಿದ್ವಾಂಸರು, ಸಂಶೋಧನಕಾರರು, ವಿಜ್ಞಾನಿಗಳನ್ನು ಸೃಷ್ಟಿಸುವುದು ಪುರಸ್ಕಾರ ಉದ್ದೇಶವಾಗಿದೆ ಎಂದು ವಿವರಿಸಿದರು. ನಿಮ್ಹಾನ್ಸ್​ ನಿರ್ದೇಶಕಿ ಹಾಗೂ ಸಂಸ್ಥೆ ಟ್ರಸ್ಟಿ ಪ್ರತಿಮಾ ಮೂರ್ತಿ ಉಪಸ್ಥಿತರಿದ್ದರು.

  ತೆರಿಗೆ ಬರ, ಅಭಿವೃದ್ಧಿಗೆ ಗರ!

  2025ರ ಜನವರಿಯಲ್ಲಿ ಪ್ರಶಸ್ತಿ ಪ್ರದಾನ
  ವಿದೇಶದ ಸಂಶೋಧಕರು ಇನ್ಫೋಸಿಸ್​ ಪ್ರಶಸ್ತಿ ಪಡೆದ ಬಳಿಕ 30 ದಿನ ಭಾರತದಲ್ಲೇ ಕಳೆಯಬೇಕು. ಇದರಿಂದಾಗಿ ನಮ್ಮ ದೇಶದಲ್ಲಿ ಸಂಶೋಧನಾ ಜಾಲವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಹಾಗೂ ಸಂಶೋಧನಾ ಮನೋಭಾವಕ್ಕೆ ಉತ್ತೇಜನ ನೀಡಲು ಅನುಕೂಲವಾಗಲಿದೆ ಎಂದು ಐಎಸ್​ಎಫ್​ ಟ್ರಸ್ಟಿ ಕ್ರಿಸ್​ ಗೋಪಾಲಕೃಷ್ಣ ಹೇಳಿದರು. ಅರ್ಹತೆ ಇರುವವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಹ ಆರು ಪ್ರತಿಭಾವಂತರನ್ನು ಆಯ್ಕೆ ಮಾಡಲಿದ್ದಾರೆ. ಬರುವ ನವೆಂಬರ್​ನಲ್ಲಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಲಾಗುವುದು. 2025ರ ಜನವರಿ 2ನೇ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ ಮೊತ್ತ ತಲಾ 85 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ನಾಣ್ಯ, ಸ್ಮರಣಿಗೆ ಹಾಗೂ ತಾಂಬೂಲ ಒಳಗೊಂಡಿದೆ ಎಂದು ತಿಳಿಸಿದರು.

  ವಿವಿಧ ಜ್ಞಾನಶಾಖೆಗಳಿಗೆ ಸೇರಿದ ಒಟ್ಟು 92 ಪ್ರತಿಭಾವಂತರನ್ನು ಈವರೆಗೆ ಐಎಸ್​ಎಫ್​ ಗುರುತಿಸಿದೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ಆಸಕ್ತಿ ಹೊಂದಿರುವ ಸಂಶೋಧಕರ ಸೃಷ್ಟಿ, ಸಮಾಜಕ್ಕೆ ಪ್ರಯೋಜನ ತಂದುಕೊಡುವ ಸಂಶೋಧನೆ ಬೆಳೆಸುವ ನಿಟ್ಟಿನಲ್ಲಿ ಕೆಲ ನಿಯಮ ಬದಲಾಯಿಸಲಾಗಿದೆ. ಸಂಶೋಧಕರಿಗೆ ಸೂಕ್ತ ಪ್ರೋತ್ಸಾಹ ಸಿಕ್ಕಾಗ ಸಂಶೋಧನೆ ಮುಂದುವರಿಸಲು, ಸಂಶೋಧನೆ ಪ್ರಯೋಜನವನ್ನು ಇನ್ನಷ್ಟು ವಿಸ್ತರಿಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಲು ಅವಕಾಶ ಸಿಗುತ್ತದೆ.
  | ಕ್ರಿಸ್​ ಗೋಪಾಲಕೃಷ್ಣ, ಐಎಸ್​ಎಫ್​ ಟ್ರಸ್ಟಿ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts