ಪ್ಲೆಕ್ಸ್, ಬ್ಯಾನರ್​ಗಳ ತೆರವು

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದಿಂದ ರೈಲ್ವೆ ಸ್ಟೇಶನ್​ವರೆಗಿನ ರಸ್ತೆ ಪ್ಲೆಕ್ಸ್, ಬ್ಯಾನರ್​ಗಳಿಲ್ಲದೇ ನಳನಳಿಸುತ್ತಿದೆ !!  ಜನರು ಈ ರಸ್ತೆಯಲ್ಲಿ ಒಂದು ಸುತ್ತು ಹೋಗಿಬಂದರೆ ಸಾಕು, ಸ್ವಚ್ಛ ಹಾಗೂ ಸುಂದರವಾಗಿರುವ ವಿಶೇಷತೆ ಗೋಚರಿಸುತ್ತದೆ. ಶುಕ್ರವಾರದವರೆಗೂ ಈ ರಸ್ತೆಯ ಎಡಬಲ, ಮಿಡಿಯನ್​ಗಳಲ್ಲಿದ್ದ ಜಾಹೀರಾತು ಫಲಕಗಳ ಹಾವಳಿ ಏಕಾಏಕಿ ತೆರವುಗೊಂಡಿದ್ದಾದರೂ ಏಕೆ ?

ಹೌದು, ಮಹಾನಗರ ಪಾಲಿಕೆ ಅಧಿಕಾರಿಗಳು ಒಂದು ದಿನ ಮುಂಚಿತವಾಗಿಯೇ ಎಚ್ಚೆತ್ತುಕೊಂಡಿದ್ದಾರೆ. ಭಾನುವಾರ ನಡೆಯಲಿರುವ ನೂತನ ನ್ಯಾಯಾಲಯ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸುಪ್ರೀಂ ಕೋರ್ಟ್ , ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಧೀಶರು ನಗರಕ್ಕೆ ಆಗಮಿಸುತ್ತಿದ್ದಾರೆ.  ಈ ಸಂದರ್ಭದಲ್ಲಿ ಬ್ಯಾನರ್, ಪ್ಲೆಕ್ಸ್​ಗಳನ್ನು ಕಂಡ ತಕ್ಷಣ ತಮ್ಮ ಮೇಲೂ ಪ್ರಹಾರ ಆಗಬಹುದೆಂಬ ಎಚ್ಚರಿಕೆಯಿಂದ ಇಂದೇ ಎಲ್ಲವನ್ನೂ ತೆರವುಗೊಳಿಸಿದ್ದಾರೆ.

ಪ್ಲೆಕ್ಸ್, ಬ್ಯಾನರ್​ಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲದೆಡೆ ಅವುಗಳ ಮೇಲೆ ಕಪು್ಪ ಬಟ್ಟೆ ಹೊದಿಸಲಾಗಿದೆ. ರಸ್ತೆ ಮಧ್ಯದ ಮಿಡಿಯನ್​ನಲ್ಲಿ ಲೈಟುಗಳು ಮೊದಲಿನಂತೇ ಇದ್ದು, ಅಲ್ಲಿನ ಜಾಹೀರಾತು ಫಲಕ ಮಾತ್ರ ತೆರವುಗೊಳಿಸಲಾಗಿದೆ. ಕೆಲವೆಡೆ ಮೀಡಿಯನ್ ಲೈಟ್​ಗಳೂ ತೆರವುಗೊಂಡಿವೆ. >ಇದನ್ನೆಲ್ಲ ಗಮನಿಸಿದರೆ ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆಂಬಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ವರ್ತಿಸುತ್ತಿರುವ ಶಂಕೆ ಬಾರದೇ ಇರದು.

ಪ್ಲೆಕ್ಸ್, ಬ್ಯಾನರ್​ಗಳನ್ನು ತೆರವುಗೊಳಿಸುವ ಮೂಲಕ ರಸ್ತೆಗಳನ್ನು ಅಂದವಾಗಿಸುವ ಪ್ರಯತ್ನ ಶಾಶ್ವತವಾಗಿ ಉಳಿಯುವುದೋ ಎಂಬುದು ಎಲ್ಲ ನ್ಯಾಯಮೂರ್ತಿಗಳು, ನ್ಯಾಯಾಧೀಶರು ನಗರದಿಂದ ವಾಪಸಾದ ನಂತರವೇ ಗೊತ್ತಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರದ ಜೊತೆ ಎಲ್ಲ ನಗರಗಳಲ್ಲಿ ಪ್ಲೆಕ್ಸ್, ಬ್ಯಾನರ್​ಗಳ ಹಾವಳಿ ನಿಯಂತ್ರಿಸುವಂತೆ ಕೆಲ ದಿನಗಳ ಹಿಂದೆಯಷ್ಟೇ ಹೈಕೋರ್ಟ್ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ಈಗ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಬಾಸುಂಡಿಯಂತಾಗಿದೆ