ಪ್ಲಾಸ್ಟಿಕ್ ಬಳಸಿದರೆ ಅಂಗಡಿ ಲೈಸನ್ಸ್ ರದ್ದು

ಶಿಡ್ಲಘಟ್ಟ:  ನಗರಸಭೆ ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಲು ಮೊದಲ ಹಂತವಾಗಿ ವರ್ತಕರಿಗೆ ಮನವರಿಕೆ ಮಾಡಲಾಗಿದ್ದು, ಎರಡನೇ ಹಂತವಾಗಿ ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಪೌರಾಯುಕ್ತ ಜಿ.ಎನ್.ಚಲಪತಿ ಹೇಳಿದರು.

ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ವರ್ತಕರೂ ಸೇರಿ ಜನತೆಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಕೆಲವರು ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಮುಂದುವರಿದರೆ ಪರವಾನಿಗೆ ರದ್ದು ಮಾಡಲಾಗುವುದು ಎಂದರು.

ಕಂದಾಯ ಪಾವತಿಸಿ: ಸಾರ್ವಜನಿಕರು ಸಕಾಲದಲ್ಲಿ ಕಂದಾಯ, ನೀರಿನ ಬಿಲ್ ಪಾವತಿಸಬೇಕು. ಕಂದಾಯ ಹಾಗೂ ನೀರಿನ ಬಿಲ್ ಪಾವತಿಸದೆ ಇರುವವರ ಮನೆಗಳಿಗೆ ನೀರಿನ ಸಂಪರ್ಕ ಕಡಿತಗೊಳಿಸಲು ಕ್ರಮ ಜರುಗಿಸಲಾಗುತ್ತದೆ. ನಗರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯ ಎಲ್ಲ ಮನೆಗಳಿಗೂ ಕಸ ಸಂಗ್ರಹಿಸಲು ನಗರಸಭೆಯಿಂದ ಎರಡೆರಡು ಬಿನ್ ವಿತರಿಸಲಾಗುವುದು. ಜನತೆ ಹಸಿ ಕಸ ಹಾಗೂ ಒಣಕಸ ವಿಂಗಡಿಸಿ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು. ಖಾಲಿ ನಿವೇಶನಗಳಲ್ಲಿ ಕಸ ಸುರಿಯುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತ ಜಿ.ಎನ್.ಚಲಪತಿ ಎಚ್ಚರಿಸಿದರು.

ನಗರಸಭೆ ವ್ಯವಸ್ಥಾಪಕ ಜಯರಾಂ, ಕಿರಿಯ ಅಭಿಯಂತರರಾದ ರಮೇಶ್, ಪ್ರಸಾದ್, ಆರೋಗ್ಯ ನಿರೀಕ್ಷಕ ಆಂಜಿನಪ್ಪ ಮತ್ತಿತರರು ಹಾಜರಿದ್ದರು.

ಟ್ಯಾಂಕರ್ ನೀರು ಪೂರೈಸಲು ಕ್ರಮ:  ನಗರೋತ್ಥಾನ ಯೋಜನೆಯಡಿ ನಗರದ ವಿವಿಧೆಡೆ ನಿರ್ವಿುಸಲಾಗಿರುವ ರಸ್ತೆ ಹಾಗೂ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜನತೆ ಸಹಕರಿಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ನಗರದ ಮೂರು ವಾರ್ಡ್​ಗಳಿಗೊಂದರಂತೆ ನೀರಿನ ಸಂಪು ನಿರ್ವಿುಸಿ ಕೊಳವೆಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಸಂಗ್ರಹಿಸಿ ಆಯಾ ವಾರ್ಡಗಳಿಗೆ ನೀರು ಪೂರೈಸಲು ಕ್ರಮ ಜರುಗಿಸಲಾಗುವುದು ಎಂದು ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದರು.

Leave a Reply

Your email address will not be published. Required fields are marked *