ಬೆಳಗಾವಿ: ಪ್ರೊ.ಬಿ.ಎಸ್.ಗವಿಮಠ ಅವರು ಕೆಎಲ್ಇ ಸಂಸ್ಥೆಯ ಇತಿಹಾಸ ಹುಡುಕಿ ಬರೆದು ಸಂಸ್ಥೆಗೆ ಗೌರವ ತಂದುಕೊಟ್ಟಿದ್ದಾರೆ ಎಂದು ಸಾಹಿತಿ ಡಾ.ಸರಜೂ ಕಾಟ್ಕರ್ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಾ.ಬಿ.ಎಸ್.ಗವಿಮಠ ಅವರ ಸಮಗ್ರ ಸಾಹಿತ್ಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. .ಗು.ಹಳಕಟ್ಟಿ ಅವರು ಇರದಿದ್ದರೆ ಬಸವಣ್ಣನವರ ಪರಿಚಯ, ಅವರ ವಚನಗಳು ನಮಗೆ ಸಿಗುತ್ತಿರಲಿಲ್ಲ. ಅದೇ ರೀತಿ ಬಿ.ಎಸ್.ಗವಿಮಠ ಅವರು ಇರದಿದ್ದರೆ ಕೆಎಲ್‌ಇ ಸಂಸ್ಥೆಯ ಇತಿಹಾಸ ಈ ದೇಶಕ್ಕೆ ತಿಳಿಯುತ್ತಿರಲಿಲ್ಲ. ಕೆಎಲ್‌ಇ ಸಂಸ್ಥೆ ಇತಿಹಾಸ ರಚಿಸಿ, ಸಂಸ್ಥೆಗೆ ಘನತೆ, ಗೌರವ ತಂದುಕೊಟ್ಟಿದ್ದಾರೆ ಎಂದರು.
ಬಿ.ಎಸ್. ಗವಿಮಠ ಅವರು, ಬೆಳಗಾವಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ವಿಷಯದಲ್ಲಿ ಅನ್ಯಾಯವಾದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇತರರನ್ನು ಬೆಳೆಸುವ ಮನಸ್ಸು, ಹೃದಯ ಗವಿಮಠ ಅವರಲ್ಲಿದೆ ಎಂದರು.ಸಾಹಿತಿ ಡಾ.ಬಸವರಾಜ ಜಗಜಂಪಿ ಮಾತನಾಡಿ, ಬಿ.ಎಸ್.ಗವಿಮಠ ಅವರು ಕೆಎಲ್ಇ ಸಂಸ್ಥೆಯ ಕರುಳು ಬಳ್ಳಿಯಾಗಿದ್ದಾರೆ. ಸಂಸ್ಥೆಯ ಸಾಕ್ಷಿ ಪ್ರಜ್ಞೆಯಂತಿದ್ದಾರೆ. ಡಾ.ಪ್ರಭಾಕರ ಕೋರೆ ಅವರು ಕೆಎಲ್ಇ ಕಾರ್ಯಾಧ್ಯಕ್ಷರಾದ ಬಳಿಕ 40 ವರ್ಷ ಸಂಸ್ಥೆಯ ವರ್ಷಗಳ ಆಗು-ಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗವಿಮಠರು ಕೋರೆ ಅವರ ಅತ್ಯಂತ ನಿಕಟವರ್ತಿಯಾಗಿದ್ದಾರೆ. ಶಿಕ್ಷಕ ವೃತ್ತಿಯ ಜತೆಗೆ ಸಮರ್ಥ ಸಂಘಟಕರಾಗಿ, ನಾಡು- ನುಡಿ ಸಂಸ್ಕೃತಿಯ ಹಿತಚಿಂತಕರಾಗಿದ್ದಾರೆ ಎಂದರು.
ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಜಿ.ಹಿರೇಮಠ ಮಾತನಾಡಿ, ಗವಿಮಠ ಬೋಸುತ್ತಿದ್ದ ಪಾಠಗಳು ಪರಿಣಾಮಕಾರಿಯಾಗಿದ್ದವು. ಕೆಎಲ್ಇ ಸಂಸ್ಥೆಯ ಸಮಗ್ರ ಮಾಹಿತಿ ಅವರ ಬಳಿ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಾಡಹಬ್ಬ ಸಮಿತಿ ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ ಮಾತನಾಡಿ, ಗವಿಮಠ ಅವರು ಕೆಎಲ್ಇ ಸಂಸ್ಥೆಯ ಸಪ್ತರ್ಷಿಗಳ ಮಾಹಿತಿ ಸಂಗ್ರಹಿಸಿ ಪುಸ್ತಕ ಬರೆದು ಸಂಸ್ಥೆಗೆ ಗೌರವ ತಂದುಕೊಟ್ಟಿದ್ದಾರೆ ಎಂದು ಸ್ವತಃ ಕೋರೆ ಅವರೇ ಹೇಳಿದ್ದಾರೆ. ಅಧ್ಯಾತ್ಮ, ಸಾಹಿತ್ಯ, ಶಿಕ್ಷಣದೊಂದಿಗೆ ಗವಿಮಠ ಅವರು ಸಂಸ್ಥೆಯ ಆಗು-ಹೋಗು ದಾಖಲಿಸುತ್ತಿದ್ದಾರೆ ಎಂದರು. ಅಭಿವೃದ್ಧಿ ವಿಚಾರದಲ್ಲಿ ಬೆಳಗಾವಿ ಜಿಲ್ಲೆ ಹುಬ್ಬಳ್ಳಿ- ಧಾರವಾಡಕ್ಕಿಂತ ಹಿಂದಿದೆ. ನಮ್ಮ ಜಿಲ್ಲೆಯಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ಜಿಲ್ಲೆಯು ಎಲ್ಲ ರೀತಿಯಿಂದ ಬೆಳವಣಿಗೆ ಹೊಂದುವುದಕ್ಕೆ ಎಲ್ಲರೂ ಧ್ವನಿ ಎತ್ತಬೇಕಾಗಿದೆ ಎಂದರು. ಬಿ.ಎಸ್.ಗವಿಮಠ ಇದ್ದರು. ಪ್ರೊ.ಸಿ.ಜಿ.ಮಠಪತಿ ಸ್ವಾಗತಿಸಿದರು.