ಪ್ರೋತ್ಸಾಹದಿಂದ ಕಲಾ ಸಾಧನೆ

ಶಿವಮೊಗ್ಗ: ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ವಿವಿಧ ಕಲಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಗಮಕಿ ಹೊಸಳ್ಳಿ ಆರ್.ಕೇಶವಮೂರ್ತಿ ಹೇಳಿದರು.

ನಗರದ ಶ್ರೀ ಮಾತಾಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಪ್ರ ಕಲಾವಿದರ ಸಮ್ಮೇಳನ ಹಾಗೂ ವಿಪ್ರ ಸಾಂಸ್ಕೃತಿಕ ವೇದಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ವಿಪ್ರ ಸಮಾಜದವರು ಉನ್ನತ ಸಾಧನೆ ಮಾಡುತ್ತ ಮುನ್ನಡೆಯುತ್ತಿದ್ದಾರೆ. ಸಾಂಸ್ಕೃತಿಕ ಕಲೆ ಕ್ಷೇತ್ರದಲ್ಲಿಯೂ ಸಾಧಕರಿದ್ದಾರೆ. ಉದಯೋನ್ಮುಖ ಹಾಗೂ ಹೊಸ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ಮುಖ್ಯವಾಹಿನಿಗೆ ತರಬೇಕು ಎಂದು ತಿಳಿಸಿದರು.

ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಮಾತನಾಡಿ, ವಿಪ್ರ ಸಮಾಜದ ಕಲಾವಿದರ ಕುರಿತು ಜಿಲ್ಲೆಯಲ್ಲಿ ಮಾಹಿತಿ ಸಂಗ್ರಹಣಾ ಕಾರ್ಯ ಮಾಡುವ ಚಿಂತನೆ ಇದೆ. ಎಲ್ಲ ಕಲಾವಿದರ ಬಗ್ಗೆ ಮಾಹಿತಿ ಸಂಗ್ರಹಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯುವ ಸಮಾಜದ ಸಾಂಸ್ಕೃತಿಕ ವೇದಿಕೆಗಳಲ್ಲಿ ಅವಕಾಶ ಕಲ್ಪಿಸುವ ಯೋಜನೆಯಿದೆ ಎಂದು ಹೇಳಿದರು.

ಕಲಾವಿದರಿಗೆ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಗುವುದರಿಂದ ಆಸಕ್ತಿ ವೃದ್ಧಿಸಿ ಆಯಾ ಕಲಾ ಪ್ರಕಾರಗಳಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಸಾಂಸ್ಕೃತಿಕ ಕಲಾಪ್ರಕಾರ ಭಗವಂತನ ಅರಸುವ ಮಾರ್ಗ ಎಂದುಕೊಂಡರೆ ಕಲಾವಿದನಲ್ಲಿ ಪರಿಪಕ್ವತೆ ಕಾಣಬಹುದು. ಕಲೆಯ ಕುರಿತು ಮನಸ್ಸಿನಲ್ಲಿ ಅಂತಃಶಕ್ತಿ ಇದ್ದರೆ ಮಾತ್ರ ಕಲಾವಿದನಾಗಬಲ್ಲ ಎಂದು ತಿಳಿಸಿದರು.

ವಿಪ್ರ ಸಾಂಸ್ಕೃತಿಕ ವೇದಿಕೆ ಸಂಚಾಲಕ ಶೃಂಗೇರಿ ಎಚ್.ಎಸ್.ನಾಗರಾಜ್ ಮಾತನಾಡಿ, ಎಲ್ಲ ಕಲಾ ಪ್ರಕಾರಗಳ ಅಧ್ಯಯನದಲ್ಲಿ ತೊಡಗಿರುವ ವಿಪ್ರ ಸಮಾಜದ ಎಲ್ಲ ಕಲಾವಿದರನ್ನು ಒಂದೇ ವೇದಿಕೆಗೆ ಕರೆ ತರುವುದು, ವಿವಿಧ ಕಲಾ ಪ್ರಕಾರಗಳಲ್ಲಿ ಬೆಳೆಯುತ್ತಿರುವ ಬಾಲಕಲಾವಿದರಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಹಾಗೂ ಪ್ರೋತ್ಸಾಹಿಸಲು ವೇದಿಕೆ ರೂಪಿಸಲಾಗಿದೆ. ಪ್ರತಿಭೆ ಪ್ರದರ್ಶನ ಹಾಗೂ ಕೌಶಲ್ಯ ಅನಾವರಣಕ್ಕೆ ವೇದಿಕೆಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ವಿದ್ವಾನ್ ಕೂಡ್ಲಿ ಜಗನ್ನಾಥ ಶಾಸ್ತ್ರಿ ಅವರ ‘ಪರದೇವ ಕವಿಯ ತುರಂಗ ಭಾರತದ ಕಥಾ ತರಂಗ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕೃತಿ ಕುರಿತು ಲಕ್ಷ್ಮೀ ಶಾಸ್ತ್ರಿ ಮಾತನಾಡಿದರು. ಕವಿ ಎಚ್.ದುಂಡಿರಾಜ್, ಪರಿಸರ ತಜ್ಞ ಪ್ರೊ. ಬಿ.ಎಂ.ಕುಮಾರಸ್ವಾಮಿ, ಮಹಾಸಭಾ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಚೇತನ್, ಸಹನಾ, ಬಿ.ಆರ್.ಮಧುಸೂದನ್, ವಿನಯ್ ಮತ್ತಿತರರಿದ್ದರು.