ಪ್ರೇಮ ತತ್ತ್ವ ಸಾರಿದ ಸೂಫಿ ಸಂತರು

ತಾಳಿಕೋಟೆ: ಭಾರತೀಯ ಸೂಫಿ ಪರಂಪರೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಸೂಫಿಗಳು ಯಜಮಾನ ಸಂಸ್ಕೃತಿ, ವರ್ಣ ವ್ಯವಸ್ಥೆ, ಜಾತೀಯತೆ, ಅಜ್ಞಾನ, ಅಂಧಕಾರವನ್ನು ದೂರವಿರಿಸಿ ತಮ್ಮ ಪ್ರೇಮ ತತ್ತ್ವದ ಮೂಲಕ ಜಗತ್ತನ್ನು ತೋರಿಸಿಕೊಟ್ಟವರು ಎಂದು ರಾಷ್ಟ್ರೀಯ ಬಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ರಂಜಾನ್ ದರ್ಗಾ ಹೇಳಿದರು.

ಅವರು ತಾಲೂಕಿನ ಮೂಕಿಹಾಳ ಗ್ರಾಮದ ಹಜರತ್ ಲಾಡ್ಲೇಮಶ್ಯಾಕ ದರ್ಗಾದ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ನಡೆದ 24ನೇ ವರ್ಷದ ಮಾನವ ಏಕತಾ ಶಾಂತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಕರ್ನಾಟಕದ ಸೂಫಿಗಳಿಂದ ಕಲಿಯಲು ಬಹಳಷ್ಟಿದೆ. ಅವರ ತತ್ತ್ವ ಗ್ರಂಥಗಳು ಆಂಗ್ಲ ಭಾಷೆಗೆ ಅನುವಾದಗೊಂಡರೆ ಇಡೀ ಜಗತ್ತೇ ಕರುನಾಡಿನತ್ತ ಅಚ್ಚರಿಯಿಂದ ನೋಡುವಂತಾಗುತ್ತದೆ. ಭಕ್ತಿ ಪಂಥ, ಬೌದ್ಧ ಪಂಥ, ಅವದೂತ ಪಂಥಗಳಿಂದ ಪ್ರಭಾವಿತರಾದ ತತ್ತ್ವಗಳು ನಮ್ಮ ಮಣ್ಣಿನ ಮೇಲೆ ಪ್ರಭಾವ ಬೀರಿವೆ. ಸೂಫಿ ಪರಂಪರೆಯಲ್ಲಿ ಶಾಂತಿ, ಪ್ರೀತಿ, ಮಾನವೀಯತೆ ಸಿದ್ಧಾಂತದ ಮೇಲಿದ್ದರೆ, ಶರಣರು ದಯವೇ ಧರ್ಮದ ಮೂಲ ಎಂದು ನಂಬಿದವರು ಎಂದರು.

ಇತಿಹಾಸಕಾರ ಪ್ರೊ.ಶೇಷಾಚಲ ಹವಾಲ್ದಾರ ಮಾತನಾಡಿ, ತನ್ನನ್ನು ತಾ ಅರಿಯುವುದು ಸೂಫಿ ಪಂಥವಾದರೆ, ಅರಿತಡೆ ಶರಣ ಮರೆತಡೆ ಮಾನವ ಎಂಬುದು ಶರಣರ ಧ್ಯೇಯವಾಗಿತ್ತು. ಶಾಂತಿ, ಸಹಬಾಳ್ವೆ, ಭ್ರಾತೃತ್ವದಿಂದ ಬದುಕುವ ಸಂದೇಶವನ್ನು ಸೂಫಿಗಳು ಪ್ರತಿಪಾದಿಸಿದರೆ, ಸರ್ವರಿಗೂ ಸಮಬಾಳು, ಕಾಯಕ ತತ್ತ್ವ, ದಾಸೋಹ ತತ್ತ್ವ, ಲಿಂಗಸಮಾನತೆ, ಜಾತ್ಯತೀತ ಮಹಿಳಾ ಸ್ವಾತಂತ್ರ್ಯವನ್ನು ಶರಣರು ಪ್ರತಿಪಾದಿಸಿದರು. ಸೂಫಿಗಳು, ಶರಣರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.

ಮುಳಖೇಡ ದರ್ಗಾದ ಹಜರತ್ ಸೈಯದಶಾಹ ಮುಸ್ತಾಫ್ ಖಾದ್ರಿ, ಮುಳಶಂಕರ ಪೀಠದ ಸಿದ್ಧಬಸವಕಬೀರ ಸ್ವಾಮಿಗಳು, ಹೈದರಾಬಾದ್​ನ ಹಮೀದ್ ಅನ್ಸಾರಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ ಯಾಳಗಿ ಉದ್ಘಾಟಿಸಿದರು.

ಬಸವ ಸಮಿತಿ ಅಧ್ಯಕ್ಷ ಜಿ.ಎಸ್. ಕಶೇಟ್ಟಿ, ಕಮಿಟಿ ಅಧ್ಯಕ್ಷ ಕೆ.ಎಚ್. ಪಾಟೀಲ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಎಂ.ಎ. ಅತ್ತಾರ, ಗ್ರಾಪಂ ಅಧ್ಯಕ್ಷ ಮಹಮ್ಮದಪಟೇಲ ಬಿರಾದಾರ, ನಿಂಗಣ್ಣ ಸಾಹುಕಾರ, ಮಲ್ಲಯ್ಯ ಹಿರೇಮಠ, ಬಿ.ಎಚ್.ಮಾಗಿ, ಹಣಮಂತರಾಯ ಪೂಜಾರಿ, ಎ.ಕೆ. ಬಿರಾದಾರ, ಬಿ.ಎಸ್. ಇಂಸಾಪುರ ಇತರರಿದ್ದರು. ಶಿಕ್ಷಕ ವಿಶ್ವನಾಥ ಗಣಾಚಾರಿ, ಆರ್.ಎಚ್. ವಾಲಿಕಾರ ನಿರೂಪಿಸಿದರು.

ಸೂಫಿಗಳು ಅಸಮಾನತೆ ವಿರುದ್ಧ ಬಹಳ ದೊಡ್ಡ ರೀತಿಯಲ್ಲಿ ಸಂಘರ್ಷ ನಡೆಸಿದರವರಾಗಿದ್ದಾರೆ. ಸೂಫಿ ಮತ್ತು ಶರಣ ಪರಂಪರೆ ಒಂದೇ ರೀತಿಯಲ್ಲಿ ಕಾಣುತ್ತದೆ. ಸೂಫಿಗಳ ದರ್ಗಾಗಳಿಗೆ ಹಾಗೂ ಶರಣರ ಗದ್ದುಗೆಗಳಿಗೆ ಮಾತ್ರ ಮುಕ್ತವಾಗಿ ಹೋಗಬಹುದಾಗಿದೆ.

| ರಂಜಾನ್ ದರ್ಗಾ, ಸಾಹಿತಿ