Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಪ್ರೇಮಲೋಕ: ನಿಮಗೆ ಗೊತ್ತಿಲ್ಲದ ರಹಸ್ಯಗಳು!

Friday, 08.06.2018, 3:02 AM       No Comments

| ಗಣೇಶ್​ ಕಾಸರಗೋಡು

‘ಪ್ರೇಮಲೋಕ’ ಚಿತ್ರ ತೆರೆಕಂಡಿದ್ದು 1987ರಲ್ಲಿ. ಈ ಚಿತ್ರವನ್ನು ರವಿಚಂದ್ರನ್ ನಿರ್ವಿುಸಿ, ನಿರ್ದೇಶಿಸಿದ್ದು ತಮ್ಮ 26ನೇ ವಯಸ್ಸಿನಲ್ಲಿ! ಈಗ ಅವರ ವಯಸ್ಸು 57! 31ವರ್ಷಗಳ ಹಿಂದಿನ ರವಿಚಂದ್ರನ್ ಅವರ ಈ ಸಾಹಸ ಈಗಲೂ ಒಂದು ಅದ್ಭುತ ದಾಖಲೆಯಾಗಿಯೇ ಉಳಿದಿದೆ. ಯಾರೂ ಪುಡಿಗಟ್ಟಲು ಸಾಧ್ಯವಾಗದ ದಾಖಲೆ!

ಅಂದಹಾಗೆ 1987ರಲ್ಲಿ ತೆರೆಕಂಡ ಒಟ್ಟು ಚಿತ್ರಗಳ ಸಂಖ್ಯೆ 60. ಇವುಗಳಲ್ಲಿ ಬಾಕ್ಸ್ ಆಫೀಸ್ ತುಂಬಿಕೊಂಡ ಚಿತ್ರಗಳ ಸಂಖ್ಯೆ ಕೇವಲ 8. ಇವುಗಳಲ್ಲಿ ರವಿಚಂದ್ರನ್ ಚಿತ್ರಗಳ ಸಂಖ್ಯೆ 2- ‘ಪ್ರೇಮಲೋಕ’ ಮತ್ತು ‘ರಣಧೀರ’. ಆ ವರ್ಷ ತೆರೆಕಂಡ ಅವರ ಮೊದಲ ಚಿತ್ರ ‘ಪ್ರೇಮಲೋಕ’, ಕೊನೆಯ ಚಿತ್ರ ’ರಣಧೀರ’. ಹಾಗೆ ನೋಡಿದರೆ ‘ಪ್ರೇಮಲೋಕ’, ರವಿಚಂದ್ರನ್ ನಾಯಕ ನಟರಾಗಿ ನಟಿಸಿದ ಮೊದಲ ಚಿತ್ರವೇನಲ್ಲ. ‘ಖದೀಮ ಕಳ್ಳರು’ ಚಿತ್ರದಲ್ಲಿ ಪುಟ್ಟ ಪಾತ್ರ, ‘ಚಕ್ರವ್ಯೂಹ’ ಚಿತ್ರದಲ್ಲಿ ಪುಟ್ಟ ಖಳನಾಯಕನ ಪಾತ್ರ… ನಂತರ ‘ನಾನು ನನ್ನ ಹೆಂಡ್ತಿ’ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನ ಪಾತ್ರ. ರವಿಚಂದ್ರನ್ ನಟರಾಗಿ, ನಿರ್ವಪಕರಾಗಿ, ನಿರ್ದೇಶಕರಾಗಿ, ಕಥೆಗಾರರಾಗಿ ಮತ್ತು ಚಿತ್ರಕಥೆಗಾರರಾಗಿ ಕೈಗೆತ್ತಿಕೊಂಡ ಮೊಟ್ಟಮೊದಲ ಚಿತ್ರ ‘ಪ್ರೇಮಲೋಕ’.

‘ಪ್ರೇಮಲೋಕ’ ಚಿತ್ರಕ್ಕಾಗಿ ರವಿಚಂದ್ರನ್ ಖರ್ಚು ಮಾಡಿದ ಮೊತ್ತ 1.5 ಕೋಟಿ ರೂ! 31 ವರ್ಷಗಳ ಹಿಂದೆ 1.5 ಕೋಟಿ ರೂ. ಎಂದರೆ ಈಗಿನ ಆ ಮೊತ್ತದ ಬೆಲೆಯನ್ನು ನೀವೇ ಊಹಿಸಿಕೊಳ್ಳಿ! ಅಷ್ಟೊಂದು ದೊಡ್ಡ ಮೊತ್ತವನ್ನು ವ್ಯಯಿಸಿ ಆ ಚಿತ್ರವನ್ನು ಸಿದ್ಧಪಡಿಸಿದಾಗ ಗಾಂಧಿನಗರ ಕೇಕೆ ಹಾಕಿ ನಕ್ಕಿತ್ತಂತೆ: ‘ರವಿಚಂದ್ರನ್​ರದ್ದು ಹುಡುಗು ಬುದ್ಧಿ ಬಿಡಿ, ಆದ್ರೆ ಅವರಪ್ಪ ವೀರಾಸ್ವಾಮಿಗಾದ್ರೂ ಬುದ್ಧಿ ಬೇಡ್ವಾ? ಒಂದೂವರೆ ಕೋಟಿ ಅಂದ್ರೆ ಸಾಮಾನ್ಯದ ಮಾತಾ?’ ಎಂದು ಅದೇ ಗಾಂಧಿನಗರದ ಮಂದಿ ಲೇವಡಿಯಾಡಿತಂತೆ! ಆದರೆ, ಈ ಚಿತ್ರದ ಪ್ರೀಮಿಯರ್ ಶೋ ನೋಡಿದ ವೀರಾಸ್ವಾಮಿ ಗೆಲುವಿನ ನಗೆ ನಕ್ಕಿದ್ದರಂತೆ. ದುರಾದೃಷ್ಟವೆಂದರೆ, ‘ಪ್ರೇಮಲೋಕ’ ತೆರೆಕಂಡ 4 ವಾರಗಳ ಕಾಲ ಚಿತ್ರವನ್ನು ನೋಡುವವರಿರಲಿಲ್ಲ! ಥಿಯೇಟರ್ ಖಾಲಿ ಖಾಲಿ! ರವಿಚಂದ್ರನ್ ಭೂಮಿಗಿಳಿದು ಹೋಗಿದ್ದರು! ವೀರಾಸ್ವಾಮಿಯವರು ತಲೆ ಮೇಲೆ ಕೈ ಹೊತ್ತು ಕೂತಿದ್ದರು. ಗಾಂಧಿನಗರದ ಆ ಮಂದಿಗೆ ಹಬ್ಬ! ಮತ್ತೆ ಮತ್ತೆ ಕೇಕೆ ಹಾಕಿ ನಕ್ಕಿತು ಹಿತಶತ್ರುಗಳ ಗುಂಪು.

ಆದರೆ 5ನೇ ವಾರದಿಂದ ಪವಾಡ ನಡೆದುಹೋಯಿತು. ಯಾವ ಯುವ ಪ್ರೇಕ್ಷಕರು 4 ವಾರಗಳಿಂದ ಈ ಚಿತ್ರಕ್ಕೆ ಅಂತರ ಕಾಯ್ದುಕೊಂಡಿದ್ದರೋ, ಅವರೆಲ್ಲ 5ನೇ ವಾರದಿಂದ ಥಿಯೇಟರ್​ಗೆ ಮುಗಿ ಬೀಳತೊಡಗಿದರು. 5ನೇ ವಾರದ ಮೊಟ್ಟ ಮೊದಲ ಶೋ ಹೌಸ್​ಫುಲ್ ಆಯಿತು! ಅಷ್ಟೇ. ಮತ್ತೆ ‘ಪ್ರೇಮಲೋಕ’ದ ಕಲೆಕ್ಷನ್ ಮತ್ತು ಜನಪ್ರಿಯತೆಯನ್ನು ತಡೆ ಹಿಡಿದವರಿಲ್ಲ. ಆರಂಭದಲ್ಲಿ ಲೇವಡಿಯಾಡಿ, ಗಹಗಹಿಸಿ ನಕ್ಕ ಗಾಂಧಿನಗರದ ಹಿತಶತ್ರುಗಳು ಮೂಗಿನ ಮೇಲೆ ಬೆರಳಿಟ್ಟರು! ಮೊಟ್ಟಮೊದಲ ಬಾರಿಗೆ ದಿಗ್ವಿಜಯ ಸಾಧಿಸಿದ ನಗೆಯೊಂದಿಗೆ ರವಿಚಂದ್ರನ್ ಗಾಂಧಿನಗರ ತುಂಬ ಓಡಾಡಿದರು…

ಹಾಗಿದ್ದರೆ ‘ಪ್ರೇಮಲೋಕ’ ಚಿತ್ರದ ಇಂಥದ್ದೊಂದು ಅಭೂತಪೂರ್ವ ಯಶಸ್ಸಿಗೆ ಕಾರಣವಾದ ಅಂಶವಾದರೂ ಏನು? ಮುಖ್ಯವಾಗಿ ಗಮನ ಸೆಳೆಯುವುದು ಇದರ ಕಾವ್ಯಾತ್ಮಕ ನಿರೂಪಣಾ ತಂತ್ರ. ಆವರೆಗೆ ಯಾರೂ ಪ್ರಯತ್ನಿಸದ ವಿಶಿಷ್ಟ ತಂತ್ರವನ್ನು ತಮ್ಮ ಈ ಚಿತ್ರದಲ್ಲಿ ರವಿಚಂದ್ರನ್ ಅಳವಡಿಸಿಕೊಂಡದ್ದು ದೊಡ್ಡ ಪ್ಲಸ್ ಪಾಯಿಂಟ್ ಆಯಿತು. ಹಾಡುಗಳ ಮೂಲಕ ಕಥೆ ಹೇಳುವ ಶೈಲಿ ಹೊಸತೆನ್ನಿಸಿಕೊಂಡಿತು. ಆ ಚಿತ್ರದಲ್ಲಿ ಒಟ್ಟು 10 ಹಾಡುಗಳಿದ್ದವು! ಸಂಭಾಷಣಾ ಶೈಲಿಯ ಹಾಡುಗಳು ಪಡ್ಡೆ ಪ್ರೇಕ್ಷಕರನ್ನು ಆಕರ್ಷಿಸಿದ್ದು ಸಹಜವಾಗಿತ್ತು. ಆವರೆಗೆ ‘ಗಂಗರಾಜು’ ಎಂದೇ ಕರೆಯಲ್ಪಡುತ್ತಿದ್ದ ಸಂಗೀತ ನಿರ್ದೇಶಕರನ್ನು ‘ಪ್ರೇಮಲೋಕ’ ಚಿತ್ರದ ನಂತರ ‘ಹಂಸಲೇಖ’ ಎಂದು ಗುರುತಿಸಲಾಯಿತು! ಅಪ್ಪಟ ರಂಗಭೂಮಿಯ ದೇಸಿ ಪ್ರತಿಭೆಯಾಗಿದ್ದ ಹಂಸಲೇಖ, ತಮ್ಮ ವಿಶಿಷ್ಟ ಸಂಗೀತದ ಮೂಲಕ ಒಂದು ಪವಾಡವನ್ನೇ ಸೃಷ್ಟಿಸಿಬಿಟ್ಟರು. ಚಿತ್ರದ ಹಾಡುಗಳು ಎಷ್ಟೊಂದು ಜನಪ್ರಿಯವಾದುವೆಂದರೆ, ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪಬ್​ಗಳಲ್ಲಿ ಕೂಡ ಅನುಕರಣಿಸಿದವು! ಲಾಂಗ್ ಟ್ರಿಪ್​ನ ಟ್ರಕ್​ಗಳಲ್ಲೂ ಇವೇ ಹಾಡುಗಳು! ಯುವ ಪೀಳಿಗೆಯಂತೂ ಹುಚ್ಚೆದ್ದು ಕುಣಿದದ್ದು ಈ ಹಾಡುಗಳ ಯಶಸ್ಸಿಗೆ ಸಾಕ್ಷಿಯಾಯಿತು.

ಹೃದಯವೇ ಇಲ್ಲದ ಶ್ರೀಮಂತ ಹೆತ್ತವರಿಂದ ಕಳೆದುಕೊಂಡ ಪ್ರೀತಿಯನ್ನು ತಾನು ಇಷ್ಟಪಟ್ಟ ನಾಯಕಿಯಿಂದ ಪಡೆಯಲು ನಾಯಕ ಪಡುವ ಪಾಡೇ ಈ ಚಿತ್ರದ ಒನ್ ಲೈನ್ ಸ್ಟೋರಿ! ಇದನ್ನೇ ಜಗಮಗಿಸುವ ಲೈಟುಗಳಲ್ಲಿ, ಕಣ್ಣು ಕೋರೈಸುವ ಸೆಟ್​ಗಳಲ್ಲಿ, ಅಮಲೇರಿಸುವ ರಾಗಗಳಲ್ಲಿ, ಅಂದಿನ ಯುವ ಪೀಳಿಗೆಯ ನುಡಿಕಟ್ಟುಗಳ ಆಕರ್ಷಣೆಯಲ್ಲಿ ‘ಪ್ರೇಮಲೋಕ’ ಒಂದು ಅದ್ಭುತ ಅನುಭವವನ್ನೇ ತೆರೆದಿಟ್ಟಿತು. ಗದ್ಯವೇ ಗೀತೆಗಳಾಗಿ, ದೃಶ್ಯವೇ ಹಾಡುಗಳಾದದ್ದು ಈ ಚಿತ್ರದ ವೈಶಿಷ್ಟ್ಯ. ಸಂಗೀತ ಸಂಯೋಜಕರೇ ಗೀತೆ ರಚನಕಾರರಾದುದರಿಂದ ಆದ ಲಾಭವಿದು! ಈ ಚಿತ್ರ ಪಡೆದುಕೊಂಡ ಜನಪ್ರಿಯತೆಯಿಂದಾಗಿ ರವಿಚಂದ್ರನ್ ಮತ್ತು ಹಂಸಲೇಖ ಸ್ಟಾರ್​ಗಳಾಗಿ ಬಿಟ್ಟರು. ಈ ಎಳೆಯರ ನಡುವೆ ಹಿರಿಯರಾಗಿ ಕೆಲಸ ಮಾಡಿದ ಛಾಯಾಗ್ರಾಹಕ ಮಧುಸೂದನ್ ಅವರ ಕ್ಯಾಮರಾ ಕೈಚಳಕವನ್ನು ಮರೆಯೋದುಂಟಾ? ಚಿನ್ನಿಪ್ರಕಾಶ್ ಅವರ ನೃತ್ಯ ಸಂಯೋಜನೆಯು ಹಾಡುಗಳು ಕಳೆಗಟ್ಟಲು ಕಾರಣವಾಯಿತು. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜೇಸುದಾಸ್, ಚಿತ್ರಾ ಮತ್ತು ಎಸ್. ಜಾನಕಿಯವರ ಕಂಠ ಕೂಡ ‘ಪ್ರೇಮಲೋಕ’ದ ಯಶಸ್ಸಿಗೆ ಪೂರಕವಾಯಿತು. ಸಾಲದ್ದಕ್ಕೆ ಆ ಕಾಲದ ಸ್ಟಾರ್ ಕಲಾವಿದರಾದ ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್, ಶ್ರೀನಾಥ್, ಲೋಕೇಶ್… ಮೊದಲಾದವರು ಈ ಚಿತ್ರದ ಯಶಸ್ಸಿನ ಪಾಲುದಾರರು. ಇಲ್ಲಿ ಹೇಳಲೇಬೇಕಾದ ಒಂದು ಅಪರೂಪದ ಅಂಶವೆಂದರೆ, ಜೂಹಿ ಚಾವ್ಲಾ ಎಂಬ ಹೆಸರಿನ ನಿಂಬೆಹಣ್ಣಿನಂಥ ಚೆಲುವೆಯ ಸೂಜಿಗಲ್ಲಿನಂಥ ಅಭಿನಯದ ಆಕರ್ಷಣೆ!

ಎನ್. ವೀರಾಸ್ವಾಮಿಯವರ ‘ಈಶ್ವರಿ ಪಿಕ್ಚರ್ಸ್’ ಲಾಂಛನದಲ್ಲಿ ತಯಾರಾದ ಈ ಚಿತ್ರದ ಹಾಡುಗಳು ಕ್ಯಾಸೆಟ್ ಲೋಕದಲ್ಲಿ ದಾಖಲೆ ಗಳಿಕೆ ಮಾಡಿತು. ಒಟ್ಟಿನಲ್ಲಿ ರವಿಚಂದ್ರನ್ ನಟಿಸಿದ ಈ ಹಿಂದಿನ ಚಿತ್ರಗಳ ಒಂದೊಂದು ಅಂಶಗಳು ಹದವಾಗಿ ಬೆರೆತಂತಿದ್ದ ‘ಪ್ರೇಮಲೋಕ’ ಚಿತ್ರ ಪ್ರೇಮಿಗಳ ಪಾಲಿನ ‘ಭಗವದ್ಗೀತೆ’ಯಾಯಿತು!

‘ಪ್ರೇಮಲೋಕ’ ಚಿತ್ರದ ಅದ್ಭುತ ಯಶಸ್ಸಿನ ನಂತರ ರವಿಚಂದ್ರನ್ ಅವರನ್ನು ಬರೀ ಒಬ್ಬ ಕಲಾಕಾರನಾಗಿ ಮಾತ್ರವಲ್ಲ ಒಬ್ಬ ಜಾಣ ಉದ್ಯಮಿಯಾಗಿಯೂ ಚಿತ್ರೋದ್ಯಮ ಸ್ವೀಕರಿಸಿತು. ಕನ್ನಡ ಚಿತ್ರರಂಗದ ಮಾರುಕಟ್ಟೆಯ ವಿಸ್ತರಣೆಯಲ್ಲಿ ಆ 26ರ ಹರೆಯದ ಹುಡುಗ ರವಿಚಂದ್ರನ್ ಪಾತ್ರ ಮಹತ್ವದ್ದಾಗಿತ್ತು. ಚಲನಚಿತ್ರವೊಂದರ ಆವರೆಗಿನ ವ್ಯಾಕರಣವನ್ನೇ ಬದಲಾಯಿಸಿ ಬೇರೊಂದು ಸೆಲ್ಯೂಲಾಯಿಡ್ ವ್ಯಾಕರಣಕ್ಕೆ ನಾಂದಿ ಹಾಡಿದ ಚಿತ್ರ, ‘ಪ್ರೇಮಲೋಕ’.

Leave a Reply

Your email address will not be published. Required fields are marked *

Back To Top