ಪ್ರೇಕ್ಷಕರು ಮುತ್ತಿಕ್ಕಿದ ಮುತ್ತಣ್ಣ!

| ಗಣೇಶ್ ಕಾಸರಗೋಡು

ಡಾ. ರಾಜ್​ಕುಮಾರ್ ಅಭಿನಯದ ಚಿತ್ರವೊಂದು ಹಣದ ಕೊರತೆಯಿಂದಾಗಿ ಅರ್ಧಕ್ಕೇ ನಿಂತು ಹೋದ ಪ್ರಸಂಗವೇನಾದರೂ ನಿಮಗೆ ಗೊತ್ತಾ? ಗೊತ್ತಿಲ್ಲವಾದರೆ ಈ ವಿವರವನ್ನು ಓದಿ. ಆ ಚಿತ್ರದ ಹೆಸರು; ‘ಮೇಯರ್ ಮುತ್ತಣ್ಣ’. ಇಂದಿಗೆ ಸರಿಯಾಗಿ 50 ವರ್ಷಗಳ ಹಿಂದೆ ತೆರೆ ಕಂಡ ಈ ಚಿತ್ರದ ಚಿತ್ರೀಕರಣ ಅರ್ಧಕ್ಕೇ ನಿಂತು ಹೋಗುವುದಕ್ಕೆ ಕಾರಣವಾದದ್ದು ನಿರ್ವಪಕ ದ್ವಾರಕೀಶ್ ಅವರ ಕೈ ಖಾಲಿಯಾದದ್ದು!

ಅದೊಂದು ವಿಚಿತ್ರ ಯೋಗಾಯೋಗ. ಮದ್ರಾಸಿನಲ್ಲಿರುವಾಗ ದ್ವಾರಕೀಶ್ ಮತ್ತು ರಾಜ್​ಕುಮಾರ್ ನಡುವಿನ ಮಧುರ ಸ್ನೇಹ ಸಂಬಂಧದ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಆದರೆ ನಿರ್ವಪಕರಾಗುವ ದ್ವಾರಕೀಶ್ ಕನಸು ನನಸಾಗಲಿಲ್ಲ! ಆಶ್ಚರ್ಯವಲ್ಲವೇ? ಅದಕ್ಕೇ ಹೇಳುವುದು ಯಾವುದಕ್ಕೂ ಯೋಗಾಯೋಗ ಕೂಡಿ ಬರಬೇಕು ಅಂತ. ಆವರೆಗೆ ನಟನೆಯಲ್ಲಿ ಸಿಕ್ಕ ಅಲ್ಪಸ್ವಲ್ಪ ಹಣವನ್ನು ಚಿತ್ರ ನಿರ್ವಣಕ್ಕೆಂದೇ ಜೋಪಾನವಾಗಿ ಕೂಡಿಟ್ಟಿದ್ದರು ದ್ವಾರಕೀಶ್. ರಾಜ್​ಕುಮಾರ್ ಕಾಲ್​ಶೀಟ್​ಗಾಗಿ ಕಾದು ಕುಳಿತರು. ಆದರೆ, ರಾಜ್ ಬೇರೆ ಬೇರೆ ಚಿತ್ರಗಳಲ್ಲಿ ಬಿಜಿಯಾಗಿದ್ದರು. ಇವರು ಬಾಯಿಬಿಟ್ಟು ಕೇಳಲಿಲ್ಲ, ಅವರು ಡೇಟ್ ಕೊಡಲಿಲ್ಲ! ಹೀಗಾಗಿ ದ್ವಾರಕೀಶ್ ಕನಸಿನ ಪ್ರಾಜೆಕ್ಟ್ ನೆನೆಗುದಿಗೆ ಬಿತ್ತು.

ಯಾವಾಗ ಸಿದ್ದಲಿಂಗಯ್ಯನವರ ಹೆಸರು ನಿರ್ದೇಶಕನ ಸ್ಥಾನಕ್ಕೆ ಸೂಚಿತವಾಯಿತೋ ಆಗ ದ್ವಾರಕೀಶ್ ಕನಸಿಗೆ ರೆಕ್ಕೆ ಬಂತು! ಹಲವು ವರ್ಷಗಳ ಕಾಲ ಖ್ಯಾತನಾಮ ನಿರ್ದೇಶಕ

ಬಿ. ವಿಠಲಾಚಾರ್ಯರ ಬಳಿ ಕೆಲಸ ಮಾಡಿದ ಅನುಭವವಿದ್ದ ಸಿದ್ದಲಿಂಗಯ್ಯ ಅವರನ್ನು ತಮ್ಮ ‘ಮೇಯರ್ ಮುತ್ತಣ್ಣ’ ಚಿತ್ರದ ನಿರ್ದೇಶಕರೆಂದು ಘೊಷಿಸಿದರೋ ಆಗ ರಾಜಕುಮಾರ್ ಕಾಲ್​ಶೀಟ್ ನೀಡಲು ಮುಂದೆ ಬಂದರು. ‘ಮೇಯರ್ ಮುತ್ತಣ್ಣ’ ಚಿತ್ರದ ಚಿತ್ರೀಕರಣ ಆರಂಭವಾದದ್ದು ಹೀಗೆ. ಮೊದಲೇ ಹೇಳಿದ ಹಾಗೆ ನಟರಾಗಿ ದ್ವಾರಕೀಶ್ ಸಂಪಾದಿಸಿದ ಹಣವನ್ನು ವ್ಯಯಿಸಿ ಮುಹೂರ್ತ ಮಾಡಿಕೊಂಡಿದ್ದಾಯಿತು. ಸ್ವಲ್ಪ ಭಾಗದ ಚಿತ್ರೀಕರಣವೂ ನಡೆಯಿತು. ಆದರೆ, ದ್ವಾರಕೀಶ್ ಕೈಲಿದ್ದ ಹಣ ಈ ಚಿತ್ರದ ಚಿತ್ರೀಕರಣವನ್ನು ಪೂರ್ತಿಗೊಳಿಸಲು ಸಾಕಾಗಲಿಲ್ಲ. ಹೀಗಾಗಿ ಸ್ವಲ್ಪ ಕಾಲ ವಿರಾಮ. ಯಥಾಪ್ರಕಾರ ರಾಜ್​ಕುಮಾರ್ ಬೇರೆ ಬೇರೆ ಚಿತ್ರಗಳಲ್ಲಿ ಬಿಜಿಯಾದರು. ಮತ್ತೆ ದುಡ್ಡು ಹೊಂದಿಸಿಕೊಂಡು ಡಾ. ರಾಜ್ ಅವರ ಡೇಟ್ ಪಡೆದು ಚಿತ್ರೀಕರಣ ಆರಂಭಿಸುವುದಕ್ಕೆ ದ್ವಾರಕೀಶ್ ಅವರಿಗೆ ಸಾಕು ಸಾಕಾಯಿತು! ಕೊನೆಗೂ ಎರಡನೇ ಹಂತದ ಚಿತ್ರೀಕರಣ ಆರಂಭವಾಯಿತು. ದ್ವಾರಕೀಶ್ ಅವರ ಗೆಳೆಯರನೇಕರು ‘ರಾಜ್​ಕುಮಾರ್ ಸಿನಿಮಾ’ ಎಂಬ ಕಾರಣಕ್ಕೆ ಯಥೇಚ್ಛ ಆರ್ಥಿಕ ಸಹಾಯ ನೀಡಿದರು. ಇವರಲ್ಲಿ ಪ್ರಮುಖರೆಂದರೆ, ಆ ಕಾಲದ ಯಶಸ್ವಿ ಹಂಚಿಕೆದಾರರಾಗಿದ್ದ ಎಚ್.ಎನ್. ಮುದ್ದುಕೃಷ್ಣ. ಚಿತ್ರೀಕರಣ ವೀಕ್ಷಿಸಲು ಬರುತ್ತಿದ್ದ ಮುದ್ದುಕೃಷ್ಣ ಅವರಿಗೆ ಈ ಚಿತ್ರದ ಮೇಲೆ ನಂಬಿಕೆ ಬಂತು. ಪರಿಣಾಮವಾಗಿ ಈ ಚಿತ್ರದ ಸಂಪೂರ್ಣ ಹಕ್ಕನ್ನು ಖರೀದಿಸಿದರು ಮುದ್ದುಕೃಷ್ಣ. ಇದರಿಂದಾಗಿ ‘ಮೇಯರ್ ಮುತ್ತಣ್ಣ’ ಚಿತ್ರ ತೆರೆಕಾಣುವ ಮೊದಲೇ ದ್ವಾರಕೀಶ್ ಅವರಿಗೆ 50 ಸಾವಿರ ರೂ.ಗಳ ನಿವ್ವಳ ಲಾಭ ದೊರೆಯಿತು. ಆ ಕಾಲದಲ್ಲಿ 50 ಸಾವಿರ ರೂ. ಲಾಭವೆಂದರೆ ಈ ಕಾಲದಲ್ಲಿ ಎಷ್ಟು ಲಕ್ಷವಾಗಬಹುದೆಂದು ಊಹಿಸಿ! ಇದೊಂದು ಹೊಸ ರೀತಿಯ ಮಾರುಕಟ್ಟೆ ತಂತ್ರ ಎಂದೆನಿಸಿಕೊಂಡಿತು. ಮುಂದಿನ ದಿನಗಳಲ್ಲಿ ಮುದ್ದುಕೃಷ್ಣ ಕೂಡ ಹೇರಳ ಆರ್ಥಿಕ ಲಾಭ ಕಂಡರು ಎನ್ನುವುದು ಗುಟ್ಟಿನ ವಿಚಾರವೇನಲ್ಲ!

ಹಳ್ಳಿಯಿಂದ ಬಂದವನು ತನ್ನ ಸಾಮಾಜಿಕ ಕಾಳಜಿಗಳ ಕಾರಣದಿಂದ ಬೆಂಗಳೂರಿನ ಮೇಯರ್ ಸ್ಥಾನಕ್ಕೇರುವ ಭಿನ್ನ ಕಥಾಹಂದರ ಹೊಂದಿರುವ ‘ಮೇಯರ್ ಮುತ್ತಣ್ಣ’ ಚಿತ್ರದಲ್ಲಿ ರಾಜ್​ಕುಮಾರ್ ಅವರ ಅಭಿನಯದ ಸೊಗಸನ್ನು ನೀವು ಚಿತ್ರ ನೋಡಿಯೇ ಸವಿಯ ಬೇಕು! ಅವರಿಗೆ ಸರಿಸಾಟಿಯಾಗಿ ಅಭಿನಯಿಸಿದವರೆಂದರೆ ನಟಿ ಭಾರತಿ. ನಿರ್ವಪಕ ದ್ವಾರಕೀಶ್ ಕೂಡ ಕಮ್ಮಿಯೇನಲ್ಲ. ತಮಗೆ ದೊರೆತ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜನಮನ ಸೂರೆಗೊಂಡಿದ್ದಾರೆ. ನಿಜ ಹೇಳಬೇಕೆಂದರೆ ಈ ಚಿತ್ರದ ಜೀವ ಜೀವಾಳವಾಗಿದ್ದುಕೊಂಡು ದುಡಿದವರೆಂದರೆ ಚಿ. ಉದಯಶಂಕರ್. ಅವರ ಸಂಭಾಷಣೆ ಮತ್ತು ಗೀತೆಗಳು ಒಟ್ಟು ಚಿತ್ರದ ಹೈಲೈಟ್. ಹಳ್ಳಿಯಾದರೇನು ಶಿವ, ಒಂದೇ ನಾಡು ಒಂದೇ ಕುಲವು, ಅಯ್ಯಯ್ಯಯ್ಯೋ ಹಳ್ಳಿಮುಕ್ಕ… ಮೊದಲಾದ ಹಾಡುಗಳು ಈಗಲೂ ತಮ್ಮ ಜನಪ್ರಿಯತೆಯನ್ನು ಕಾಯ್ದುಕೊಂಡಿವೆ! ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಸಿದ್ದಲಿಂಗಯ್ಯ ಅವರು ಮುಂದೆ ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯು, ಹೇಮಾವತಿ, ದೂರದ ಬೆಟ್ಟ… ಮೊದಲಾದ ಹಳ್ಳಿ ಸೊಗಡಿನ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಪಳಗಿಕೊಂಡರು. ಇಂಥ ಸಿದ್ದಲಿಂಗಯ್ಯ ಅವರು ನಟರಾಗುವ ಕನಸಿಟ್ಟುಕೊಂಡು ಹಳ್ಳಿಯಿಂದ ಪಟ್ಟಣಕ್ಕೆ ಬಂದವರು. ಆದರೆ, ಅವರಿಗೆ ಸಿಕ್ಕ ಮೊದಲ ಕೆಲಸ ಫ್ಲೋರ್ ಬಾಯ್, ನಂತರ ಲೈಟ್ ಬಾಯ್, ಅಲ್ಲಿಂದ ಶಂಕರ್ ಸಿಂಗ್ ಅವರಿಗೆ ಸಹಾಯಕರಾಗಿ ಬಡ್ತಿ. ಮೈಸೂರಿನಿಂದ ಮದ್ರಾಸಿಗೆ, ಅಲ್ಲಿಂದ ಹೈದರಬಾದ್​ಗೆ. ಮತ್ತೆ ಮದ್ರಾಸಿಗೆ ಬಂದಾಗ

ಬಿ. ವಿಠಲಾಚಾರ್ಯರಿಗೆ ಶಿಷ್ಯರಾಗುವ ಯೋಗ ಕೂಡಿಬಂತು. ಅವರ ಜತೆ ವರ್ಷಾನುಗಟ್ಟಲೇ ದುಡಿದರು. ಆ ಹೊತ್ತಿನಲ್ಲಿ ಸಿಕ್ಕಿದ್ದೇ ‘ಮೇಯರ್ ಮುತ್ತಣ್ಣ’ ಆಫರ್. ಅಲ್ಲಿಂದ ಮುಂದೆ ಹಿಂದಿರುಗಿ ನೋಡಲಿಲ್ಲ. ಹತ್ತಾರು ಪ್ರಶಸ್ತಿ, ಪುರಸ್ಕಾರಗಳ ಜತೆ 1993-94ನೇ ಸಾಲಿನ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪುರಸ್ಕೃತರಾದರು. ಹತ್ತು ಜನ್ಮದಲ್ಲಿ ಸಾಧಿಸ ಬೇಕಾದುದನ್ನು ಒಂದೇ ಜನ್ಮದಲ್ಲಿ ಸಾಧಿಸಿದ ಸಿದ್ದಲಿಂಗಯ್ಯನವರ ವೃತ್ತಿ ಬದುಕಿನ ಇಷ್ಟೆಲ್ಲ ಸಾಧನೆಗೆ ಭದ್ರ ಅಡಿಪಾಯ ಹಾಕಿದ್ದು ಆ ಕಾಲದ ಸೂಪರ್ ಹಿಟ್ ಚಿತ್ರ ‘ಮೇಯರ್ ಮುತ್ತಣ್ಣ’ ಎನ್ನುವುದು ನಿರ್ವಿವಾದ.