ಪ್ರಿ ಕ್ವಾರ್ಟರ್​ಫೈನಲ್​ಗೆ ಪಂಕಜ್, ರೂಪೇಶ್

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ | ಲಯಕ್ಕೆ ಮರಳಿದ ಗಿಲ್ಕ್ರಿಸ್ಟ್

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಭಾರತದ ಅನುಭವಿ ಆಟಗಾರ ಪಂಕಜ್ ಆಡ್ವಾಣಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್ ಪಂಕಜ್ ಮಂಗಳವಾರ ನಡೆದ ಪಂದ್ಯದಲ್ಲಿ 504-30ರಿಂದ ಫ್ರಾನ್ಸ್ನ ಅಖಿಲೇಶ್ ಮೋಹನ್ರನ್ನು ಸುಲಭವಾಗಿ ಮಣಿಸಿದರು.

15 ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಏಕಪಕ್ಷೀಯ ಸೆಣಸಾಟದಲ್ಲಿ ಕ್ರಮವಾಗಿ 100, 105, 58 ಮತ್ತು 182 ಪಾಯಿಂಟ್ ಸಂಪಾದಿಸಿ ಗೆಲುವಿನ ನಗೆಬೀರಿದರು. ಮೊದಲ ದಿನ ಮೂರು ಗೆಲುವು ಕಂಡಿದ್ದ ಪಂಕಜ್ಗೆ ಇದು ಟೂರ್ನಿಯ 4ನೇ ಜಯವಾಗಿದೆ. ನಾಕೌಟ್ ಹಂತದಲ್ಲಿ ಪಂಕಜ್ ದೇಶಬಾಂಧವ ಅಲೋಕ್ ಕುಮಾರ್ರನ್ನು ಎದುರಿಸಲಿದ್ದಾರೆ.

ಇನ್ನೊಂದೆಡೆ ಮೊದಲ ದಿನ ಭಾರತದ ಸಿದ್ಧಾರ್ಥ್ ಪಾರಿಖ್ರಿಂದ ಶಾಕ್ ಅನುಭವಿಸಿದ್ದ ಮಾಜಿ ಚಾಂಪಿಯನ್ ಪೀಟರ್ ಗಿಲ್ಕ್ರಿಸ್ಟ್ ಪ್ರಯಾಸಕರ ಗೆಲುವಿನೊಂದಿಗೆ ನಾಕೌಟ್ ಹಂತಕ್ಕೇರಿದರು. ತಮ್ಮ 2ನೇ ಪಂದ್ಯದಲ್ಲಿ ಪೀಟರ್ 502-485ರಿಂದ ಭಾರತದ ಧ್ವಜ್ ಹರಿಯಾರನ್ನು ಮಣಿಸಿ ಮುನ್ನಡೆದರು. 54, 156, 61 ಅಂಕಕ್ಕೆ ಪ್ರತಿಯಾಗಿ ಧ್ವಜ್ 134, 56 ಪಾಯಿಂಟ್ ಗಳಿಸಿದರು. ಇನ್ನುಳಿದಂತೆ ರೂಪೇಶ್ ಷಾ, ಜೈವೀರ್ ದಿಂಗ್ರಾ, ಸೌರವ್ ಕೊಠಾರಿ, ಚಿಟ್ ಕೊಕೊ, ಆಂಗ್ ಟೇಯ್, ಶಂಕರ್ ರಾವ್, ಧ್ವಜ್ ಹರಿಯಾ, ಭಾಸ್ಕರ ಬಾಲಚಂದ್ರ ಶ್ರೀಕೃಷ್ಣಾ ಸೂರ್ಯನಾರಾಯಣನ್, ಸಿದ್ಧಾರ್ಥ್ ಪಾರಿಖ್, ಇರಾನ್ನ ಸೊಹೈಲ್ ವಹೆದಿ, ರಾಬರ್ಟ್ ಹಾಲ್, ಧ್ರುವ ಸಿತ್ವಾಲ 16ರ ಘಟ್ಟ ಪ್ರವೇಶಿಸಿದರು. ಪ್ರಿ ಕ್ವಾರ್ಟರ್ ಮತ್ತು ಕ್ವಾರ್ಟರ್ಫೈನಲ್ ಪಂದ್ಯಗಳು ಬುಧವಾರ ನಡೆಯಲಿವೆ.

Leave a Reply

Your email address will not be published. Required fields are marked *