ಪ್ರಿಯಾ ಪ್ರಕಾಶ್ ಈಗ ನ್ಯಾಷನಲ್ ಕ್ರಶ್!

ಯಾರ ವಾಟ್ಸ್​ಆಪ್ ಸ್ಟೇಟಸ್ ನೋಡಿದರೂ ಅವಳದ್ದೇ ಮುಖ! ಫೇಸ್​ಬುಕ್ ವಾಲ್​ಗಳಲ್ಲಿ, ಇನ್ಸ್​ಟಾ ಗೋಡೆಗಳ ಮೇಲೆ ಅವಳದೇ ನಗು, ಅದೇ ಕಣ್ಣುಕುಕ್ಕುವ ನೋಟ! ಟ್ರೋಲ್ ಪೇಜ್​ಗಳಲ್ಲಿ ಪರ-ವಿರೋಧ ಚರ್ಚೆ. ಹೀಗೆ ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಿ ಬಿಟ್ಟಿದ್ದಾರೆ ಪ್ರಿಯಾ ಪ್ರಕಾಶ್ ವಾರಿಯರ್!

ಮಲಯಾಳಂನ ‘ಒರು ಆದಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ..’ ವಿಡಿಯೋ ಸಾಂಗ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅವರು, ಹೈಸ್ಕೂಲ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುವುದಕ್ಕೆ ಮುಖ್ಯ ಕಾರಣ ಪ್ರಿಯಾ ಮುಖದ ಎಕ್ಸ್​ಪ್ರೆಶನ್! ಹೌದು, ವಿಡಿಯೋ ಸಾಂಗ್​ನಲ್ಲಿ ಪ್ರಿಯಾ ಹುಡುಗನೊಬ್ಬನಿಗೆ ಕಣ್ಣು ಹೊಡೆಯುವ ದೃಶ್ಯವಿದೆ. ಈ ವೇಳೆ ಪ್ರಿಯಾ ಕೊಡುವ ಮುಖಭಾವನೆ ಹಾಗೂ ಕಣ್ಣುಕುಕ್ಕುವ ನೋಟ ಎಲ್ಲರನ್ನೂ ಮರಳು ಮಾಡಿದೆ. ಹೀಗಾಗಿ ರಾತ್ರಿ ಬೆಳಗಾಗುವದರೊಳಗೆ ಪ್ರಿಯಾ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.ಈವರೆಗೆ ಯೂಟ್ಯೂಬ್​ನಲ್ಲಿ ಸುಮಾರು 51 ಲಕ್ಷ ಬಾರಿ ವೀಕ್ಷಣೆ ಕಂಡಿರುವ ‘ಮಾಣಿಕ್ಯ ಮಲರಾಯ ಪೂವಿ..’ ಹಾಡು ನಂ.1 ಟ್ರೆಂಡಿಂಗ್​ನಲ್ಲಿದೆ.

ಸಾಮಾಜಿಕ ಜಾಲತಾಣಗಳಲ್ಲ್ಲೂ ಅವರ ಹವಾ ಜೋರಾಗಿಯೇ ಇದೆ. ಪ್ರಿಯಾ ಇನ್ಸ್​ಟಾ ಖಾತೆಗೆ ಕೇವಲ 8 ಗಂಟೆಗಳಲ್ಲಿ 4 ಸಾವಿರ ಹಿಂಬಾಲಕರು ಸೇರ್ಪಡೆಯಾಗಿದ್ದಾರೆ ಮತ್ತು ಫೇಸ್​ಬುಕ್ ಪೇಜ್​ಗೆ 50 ಸಾವಿರ ಲೈಕ್​ಗಳು ಬಂದಿವೆ! ಇನ್ನು ಪ್ರಿಯಾ ಟ್ರೋಲ್ ಪೇಜ್​ಗಳಿಗೆ ಆಹಾರವಾಗಿದ್ದಾರೆ. ಅವರು ಕಣ್ಣು ಹೊಡೆಯುತ್ತಿರುವ ಚಿತ್ರ ಮತ್ತು ವಿಡಿಯೋಗಳನ್ನು ಎಡಿಟ್ ಮಾಡಿ ಪೋಸ್ಟ್ ಮಾಡಲಾಗುತ್ತಿದೆ. ಕೆಲವರು ‘ಭಾರತ ಸರ್ಕಾರ ಪ್ರಿಯಾರನ್ನು ರಾಷ್ಟ್ರೀಯ ಕ್ರಶ್ ಎಂದು ಘೋಷಣೆ ಮಾಡಬೇಕು’ ಎಂದು ಬರೆದುಕೊಂಡಿದ್ದಾರೆ.

ಒಮರ್ ನಿರ್ದೇಶನದ ‘…ಲವ್’ ಪಕ್ಕಾ ಕ್ಯಾಂಪಸ್ ಸ್ಟೋರಿ ಹೊಂದಿರುವ ಚಿತ್ರ. ಆ ಮೂಲಕ ಪ್ರಿಯಾ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಚೊಚ್ಚಲ ಚಿತ್ರದ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿರುವುದಕ್ಕೆ ಪ್ರಿಯಾ ಸಂತಸಗೊಂಡಿದ್ದಾರಂತೆ. 18 ವರ್ಷದ ಪ್ರಿಯಾ ತ್ರಿಶೂರ್​ನಲ್ಲಿ ಬಿ.ಕಾಂ ಓದುತ್ತಿದ್ದಾರೆ. ಮಾಡೆಲ್ ಆಗಿರುವ ಅವರಿಗೆ ಈಗ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಆಫರ್​ಗಳು ಬರುತ್ತಿವೆಯಂತೆ. ಎರಡನೇ ಚಿತ್ರದ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ ಎನ್ನಲಾಗುತ್ತಿದೆ. -ಏಜೆನ್ಸೀಸ್

ನನಗೆ ಮೊದಲಿನಿಂದಲೂ ನಟನೆ ಬಗ್ಗೆ ಆಸಕ್ತಿ ಇತ್ತು. ಈ ಮೊದಲು ಕಿರುಚಿತ್ರಗಳಲ್ಲಿ ನಟಿಸಿದ್ದೆ. ನನ್ನ ಮೊದಲ ಸಿನಿಮಾದ ಹಾಡಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಪ್ರಶಂಸೆ ಸಿಕ್ಕಿರುವುದು ಖುಷಿ ನೀಡಿದೆ. ಎಲ್ಲರೂ ನಮ್ಮ ಸಿನಿಮಾದ ಹಾಡನ್ನು ನೋಡಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

| ಪ್ರಿಯಾ ಪ್ರಕಾಶ್ ನಟಿ

Leave a Reply

Your email address will not be published. Required fields are marked *