ಪ್ರಾದೇಶಿಕ ಚಲನಚಿತ್ರೋತ್ಸವ ಪ್ರತಿಭೆಗಳಿಗೆ ವೇದಿಕೆ

ಶಿವಮೊಗ್ಗ: ಸಹ್ಯಾದ್ರಿ ಉತ್ಸವ ಪ್ರಯುಕ್ತ ನಾಲ್ಕು ದಿನಗಳ ಕಾಲ ಶಿವಪ್ಪನಾಯಕ ಸಿಟಿ ಸೆಂಟರ್ ಮಾಲ್​ನಲ್ಲಿ ಆಯೋಜಿಸಿರುವ ಸಹ್ಯಾದ್ರಿ ಸಿನಿಮೋತ್ಸವಕ್ಕೆ ಹಿರಿಯ ಚಿತ್ರನಟ ವಿಜಯ್ ಕಾಶಿ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಪ್ರಾದೇಶಿಕ ಚಲನಚಿತ್ರೋತ್ಸವಗಳು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತವೆ. ಸದಭಿರುಚಿ ಮೂಡಿಸಲು ಇಂತಹ ಚಿತ್ರೋತ್ಸವಗಳು ಸಹಕಾರಿ. ಶಿವಮೊಗ ಜಿಲ್ಲೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಶ್ರೀಮಂತವಾಗಿದೆ. ಸಿನಿಮಾ ಕ್ಷೇತ್ರಕ್ಕೆ ಜಿಲ್ಲೆಯ ಸಾಧಕರ ಕೊಡುಗೆ ಅಪಾರ ಎಂದು ಹೇಳಿದರು.

ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಜಾಗತಿಕ ಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಬೆಳೆಸಿದರು. ಡಾ. ಅಶೋಕ ಪೈ ಚಿತ್ರ ನಿರ್ಮಾಣ ಮೂಲಕ ಹಿರಿಮೆ ಮುಂದುವರಿಸಿದವರು. ಕಲಾವಿದರಾದ ದೊಡ್ಡಣ್ಣ, ಕುಮಾರ್ ಬಂಗಾರಪ್ಪ, ಸುಮನ್​ನಗರಕರ್, ಸುದೀಪ್, ಶಿವಮೊಗ್ಗ ವೆಂಕಟೇಶ್, ಭಾವನಾ ರಾವ್ ಅವರು ಕನ್ನಡ ಚಿತ್ರರಂಗದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ ಎಂದರು.

ದಯವಿಟ್ಟು ಗಮನಿಸಿ ಚಿತ್ರದ ನಿರ್ದೇಶಕ ರೋಹಿತ್ ಪದಕಿ, ಒಂದಲ್ಲಾ ಎರಡಲ್ಲಾ ಸಿನಿಮಾ ನಿರ್ದೇಶಕ ಸತ್ಯಪ್ರಕಾಶ್ ಅವರೊಂದಿಗೆ ಸಿನಿಮಾ ವೀಕ್ಷಕರು ಸಂವಾದ ನಡೆಸಿದರು.

ನಟಿ ಭಾವನಾರಾವ್, ಎಡಿಸಿ ಜಿ.ಅನುರಾಧಾ, ಎಸಿ ಟಿ.ವಿ.ಪ್ರಕಾಶ್, ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ಹನುಮಾನಾಯ್ಕ, ವಾರ್ತಾಧಿಕಾರಿ ಶಫೀ ಸಾದುದ್ದೀನ್, ಬೆಳ್ಳಿ ಮಂಡಳ ಕಾರ್ಯದರ್ಶಿ ವೈದ್ಯ ಇತರರಿದ್ದರು.

ಪ್ರಾದೇಶಿಕ ಕೇಂದ್ರಗಳಲ್ಲಿ ಹೆಚ್ಚು ಚಲನ ಚಿತ್ರೋತ್ಸವಗಳು ನಡೆಯಬೇಕು. ಸ್ಥಳೀಯ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸಲು ಸಾಧ್ಯ. ಚಲನಚಿತ್ರೋತ್ಸವಗಳಿಂದ ಕಲಾವಿದರಿಗೆ ಮನ್ನಣೆ ಸಿಗುತ್ತದೆ.

| ಭಾವನಾ ರಾವ್, ನಟಿ