ಪ್ರಾಥಮಿಕ ಕಾಯ್ದೆ ಅರಿವು ಅಗತ್ಯ

ಹಾವೇರಿ: ಜನಸಾಮಾನ್ಯರಿಗೆ ಕಾನೂನು ಅರಿವು, ಅಗತ್ಯವಿದ್ದವರಿಗೆ ಕಾನೂನು ನೆರವು ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಉದ್ದೇಶ ಎಂದು ದಿವಾಣಿ ನ್ಯಾಯಾಧೀಶ ಎ.ವಿ. ಪಾಟೀಲ ಹೇಳಿದರು.

ನಗರದ ಸ್ತ್ರೀಶಕ್ತಿ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿ.ಪಂ., ಪೊಲೀಸ್ ಇಲಾಖೆ, ಅಭಿಯೋಜನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಬಾಲಸ್ನೇಹಿ ಕಾನೂನು ಸೇವೆಗಳು ಮತ್ತು ಅವುಗಳ ಸಂರಕ್ಷಣೆಯ ರಾಷ್ಟ್ರೀಯ ಯೋಜನೆ, ಪೋಕ್ಸೊ ಕಾಯ್ದೆ, ಜೆ.ಜೆ. ಕಾಯ್ದೆ ಕುರಿತ ಕಾನೂನು ಸಾಕ್ಷರತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಾರ್ಷಿಕ 1.25 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿದ ಎಲ್ಲ ಜಾತಿ ವರ್ಗದವರು, ಪ್ರಕೃತಿ ವಿಕೋಪ ಸಂತ್ರಸ್ತರು, ದೌರ್ಜನ್ಯಕ್ಕೊಳಗಾದವರು ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ ಪಡೆಯಬಹುದು. ಪ್ರತಿಯೊಬ್ಬರೂ ಪ್ರಾಥಮಿಕ ಕಾನೂನು ಅರಿವು ಹೊಂದಬೇಕು ಎಂದರು.

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ. ಬಾಕಿಯಿರುವ ಸಿವಿಲ್ ಪ್ರಕರಣ, ರಾಜಿ ಮಾಡಬಹುದಾದ ಕ್ರಿಮಿನಲ್ ಪ್ರಕರಣ, ಎಲ್ಲ ವಿಧದ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಸಿ. ಪಾವಲಿ ಮಾತನಾಡಿ, ಪ್ರಸ್ತುತ ಬಾಲಾಪರಾಧಗಳ ಸಂಖ್ಯೆ ಹೆಚ್ಚಾಗುತ್ತಿವೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಅಧಿಕವಾದ ಹಿನ್ನೆಲೆಯಲ್ಲಿ ಬಾಲನ್ಯಾಯ ಕಾಯ್ದೆ ಜಾರಿಗೊಳಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಚಿಕ್ಕಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡುವುದರೊಂದಿಗೆ ನೀತಿ ಕಥೆ ಹೇಳುವ ಮೂಲಕ ಉತ್ತಮ ಸಂಸ್ಕಾರ ನೀಡಬೇಕು. ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಬಾಲಕರು ಶಿಕ್ಷಣದಿಂದ ವಂಚಿತರಾಗದಿರುವಂತೆ ನೋಡಿಕೊಳ್ಳಬೇಕು. ಬಾಲ್ಯವಿವಾಹಗಳು ಸೇರಿದಂತೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಅಭಿಯೋಜನಾ ಇಲಾಖೆ ಸರ್ಕಾರಿ ಹಿರಿಯ ಸಹಾಯಕ ಅಭಿಯೋಜಕಿ ಸುನಂದಾ ಮಡಿವಾಳರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ, ಸಿಡಿಪಿಒ ಉಮಾ ಕೆ.ಎಸ್. ಉಪಸ್ಥಿತರಿದ್ದರು.

ಬಾಲನ್ಯಾಯ ಮಂಡಳಿ ಪೆನಲ್ ವಕೀಲ ಎಂ.ಸಿ. ಭರಮಣ್ಣನವರ, ಪೊಲೀಸ್ ಇಲಾಖೆ ಸಂಪನ್ಮೂಲ ವ್ಯಕ್ತಿ ಎಂ.ಆರ್. ಜಾಲಗಾರ ಉಪನ್ಯಾಸ ನೀಡಿದರು.