ಪ್ರಾತಿನಿಧ್ಯಕ್ಕೆ ಅಪಸ್ವರವೇಕೆ?

ಮುಂದಿನ ಲೋಕಸಭಾ ಚುನಾವಣೆಯತ್ತ ಕಣ್ಣುನೆಟ್ಟಂತೆ ಕಾಣುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಜಾಪ್ರತಿನಿಧಿ ಸಭೆಗಳಲ್ಲಿನ ಮಹಿಳಾ ಮೀಸಲು ಮಸೂದೆ ವಿಚಾರವನ್ನು ಪ್ರಸ್ತಾಪಿಸಿರುವುದು ರಾಜಕೀಯ ಪಡಸಾಲೆಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇದರ ಹಿಂದಿರುವುದು ನಿಜಕಾಳಜಿಯೋ ಅಥವಾ ರಾಜಕೀಯ ಪ್ರಯೋಜನದ ಲೆಕ್ಕಾಚಾರವೋ ಎಂಬುದು ಚರ್ಚೆಯ ಕೇಂದ್ರಬಿಂದುವಾಗಿದೆ.

ಮಹಿಳಾ ಮೀಸಲಾತಿ ಕುರಿತಾದ ಚರ್ಚೆ ಅನೇಕ ವರ್ಷಗಳಿಂದ ಜಾರಿಯಲ್ಲಿರುವಂಥದ್ದು. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದ ಕಾಲಾವಧಿಯಲ್ಲಿ (2010) ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಕಸರತ್ತು ನಡೆದು ಲೋಕಸಭೆಯಲ್ಲಿ ಹಸಿರುನಿಶಾನೆಯೂ ದಕ್ಕಿತ್ತು; ಆದರೆ ರಾಜ್ಯಸಭೆಯಲ್ಲಿ ಹಲವು ಪಕ್ಷಗಳ ವಿರೋಧ ಎದುರಾಗಿ ಅಂಗೀಕಾರಭಾಗ್ಯ ಸಿಗಲಿಲ್ಲವೆನ್ನಬೇಕು. ಇನ್ನು 2014ರಲ್ಲಿ 15ನೇ ಲೋಕಸಭೆಯ ಅವಧಿಯೇ ಮುಗಿದಿದ್ದರಿಂದಾಗಿ ಮಸೂದೆ ಅಸಿಂಧುವಾಯಿತು. ಹೀಗಾಗಿ, ಈಗ ಹೊಸದಾಗಿ ಅದು ಮಂಡನೆಯಾಗಬೇಕಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ನಮ್ಮ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಈಗಾಗಲೇ ಶೇ. 50ರಷ್ಟು ಮೀಸಲಾತಿ ನೀಡಲಾಗಿದ್ದು, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಶೇ. 33ರಷ್ಟು ಮೀಸಲಾತಿ ಕಲ್ಪಿಸಬೇಕು ಎನ್ನುವ ಆಗ್ರಹ ಹೊಮ್ಮಿದೆ. ಈ ನಿಲುವಿಗೆ ತನ್ನದೇನೂ ವಿರೋಧವಿಲ್ಲವೆಂದು ಕಾಂಗ್ರೆಸ್ ಸ್ಪಷ್ಟಪಡಿಸಿದ್ದರೆ, ಈ ವಿಷಯದಲ್ಲಿ ತನ್ನ ಬೆಂಬಲವಿದೆ ಎಂಬುದು ಬಿಜೆಪಿ ಸಮರ್ಥನೆ. ಹಾಗಾದರೆ ಇದಕ್ಕೆ ಅಡ್ಡಿಮಾಡುತ್ತಿರುವವರಾರು ಎಂಬುದು ಸಹಜವಾಗೇ ಉದ್ಭವವಾಗುವ ಪ್ರಶ್ನೆ. ಈ ನಿಟ್ಟಿನಲ್ಲಿ ಕೊಂಚ ಹಿನ್ನೋಟ ಬೀರಿದರೆ, ಕಳೆದ ಬಾರಿ ಸಮಾಜವಾದಿ ಪಕ್ಷವು ಈ ಆಗ್ರಹಕ್ಕೆ ಅಡ್ಡಗಾಲು ಹಾಕಿತ್ತೆಂಬುದು ಅರಿವಿಗೆ ಬರುತ್ತದೆ; ‘ಇದು ಮೇಲ್ಜಾತಿ ಮಹಿಳೆಯರಿಗೆ ಮಾತ್ರವೇ ಅನುಕೂಲಕರವಾಗಿ ಪರಿಣಮಿಸುತ್ತದೆ’ ಎಂಬ ಗ್ರಹಿಕೆ ಆ ಪಕ್ಷದ ಪ್ರಮುಖರಲ್ಲಿ ದಟ್ಟವಾಗಿ ವ್ಯಾಪಿಸಿದ್ದೇ ಇದಕ್ಕೆ ಕಾರಣವೆನ್ನಬೇಕು. ಯಾವ ಆಯಾಮದಿಂದ ನೋಡಿದರೂ ಈ ಗ್ರಹಿಕೆಯಲ್ಲಿ ಹುರುಳಿಲ್ಲವೆನ್ನಬೇಕು; ಏಕೆಂದರೆ ಇಲ್ಲಿ ಒಟ್ಟಾರೆ ಮಹಿಳಾ ಸಮುದಾಯವನ್ನು ಸಮಷ್ಟಿ ದೃಷ್ಟಿಯಿಂದ ನೋಡಲಾಗಿದೆಯೇ ವಿನಾ, ‘ಮೇಲ್ವರ್ಗದ’ ಮಹಿಳೆ ಯರನ್ನು ನಿರ್ದಿಷ್ಟವಾಗಿ ಪರಿಗಣಿಸಿಲ್ಲ. ‘ಶೇ. 33ರಷ್ಟು ಮಹಿಳಾ ಮೀಸಲಾತಿ’ ಎಂದರೆ ಅದರಲ್ಲಿ ಎಲ್ಲ ವರ್ಗದ ಮಹಿಳೆಯರೂ ಬರುತ್ತಾರೆ ಎಂಬುದು ಸುಲಭಕ್ಕೆ ಅರಿವಿಗೆ ದಕ್ಕುವ ವ್ಯಾಖ್ಯಾನ.

ಅದೇನೇ ಇರಲಿ, ಇಂಥ ಪ್ರಹಸನಗಳನ್ನೆಲ್ಲ ನೋಡಿದಾಗ, ಮಹಿಳಾ ಮೀಸಲಾತಿ ಕುರಿತಾಗಿ ರಾಜಕೀಯ ಪಕ್ಷಗಳಿಗೆ ಇಚ್ಛಾಶಕ್ತಿ ಇಲ್ಲದಿರುವುದು ಸ್ಪಷ್ಟಗೋಚರವಾಗುತ್ತದೆ. ವೇದಿಕೆಯ ಭಾಷಣಗಳಲ್ಲಿ ‘ತಾವು ಮಹಿಳಾಪರ’ ಎಂದೇ ಹೇಳಿಕೊಳ್ಳುವ ಪಕ್ಷ-ನಾಯಕರು, ಮಸೂದೆ ಮಂಡನೆ/ಅಂಗೀಕಾರದ ವಿಷಯ ಬಂದಾಗ ತಳೆಯುವ ನಿಲುವು ವ್ಯತಿರಿಕ್ತವಾದುದಾಗಿರುತ್ತದೆ ಎಂಬುದೇ ವಿಪರ್ಯಾಸದ ಸಂಗತಿ. ಜತೆಗೆ, ಕಳೆದ 4 ವರ್ಷಗಳಿಂದ ಲೋಕಸಭೆಯಲ್ಲಿ (ಅಧಿಕೃತವಾಗಿ ಅಲ್ಲದಿದ್ದರೂ) ಪ್ರತಿಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್​ಗೆ ಈ ಕುರಿತಾಗಿ ದನಿಯೆತ್ತುವ ಅವಕಾಶಗಳಿದ್ದವು; ಆದರೆ ಆಗ ಕಾಲಾಯಾಪನೆ ಮಾಡಿ, ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳಿರುವಾಗ ಈ ಚರ್ಚಾವಿಷಯವನ್ನು ಮುನ್ನೆಲೆಗೆ ತಂದಿರುವುದು ನೋಡಿದರೆ, ಇದೊಂದು ಚುನಾವಣಾ ಸ್ಟಂಟ್ ಇದ್ದಿರಬಹುದೇ ಎಂಬ ಸಂದೇಹ ಸ್ಪುರಿಸುವುದು ಸಹಜ. ಹಾಗಿಲ್ಲವಾದರೆ, ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬದಿಗೊತ್ತಿ ಮಹಿಳಾ ಮೀಸಲಾತಿಯ ಆಶಯಕ್ಕೆ ಬಲ ತುಂಬುವ ಯತ್ನ ಪಕ್ಷಾತೀತವಾಗಿ ಹೊಮ್ಮಲಿ.

Leave a Reply

Your email address will not be published. Required fields are marked *