ಪ್ರಾಣ ತೆಗೆದೀತು ಡಿವೈಡರ್!

ಹುಬ್ಬಳ್ಳಿ: ಸಂಚಾರ ಸುವ್ಯವಸ್ಥೆ ದೃಷ್ಟಿಯಿಂದ ನಗರದ ಹಳೇ ಬಸ್ ನಿಲ್ದಾಣದಿಂದ ಐಟಿ ಪಾರ್ಕ್​ವರೆಗೆ ಹಾಕಲಾಗಿರುವ ರಸ್ತೆ ವಿಭಜಕ (ರೋಡ್ ಡಿವೈಡರ್) ಅನೇಕ ಕಡೆ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಈ ರಸ್ತೆ ವಿಭಜಕ ಬಹುತೇಕ ಎಲ್ಲಿಯೂ ನೇರವಾಗಿ ಇಲ್ಲ. ಅಡ್ಡಾದಿಡ್ಡಿಯಾಗಿ ನಿಂತಿವೆ. ಕೆಲವೆಡೆ ಮುರಿದು ಹೋಗಿ ವಕ್ರ ವಕ್ರವಾಗಿದೆ. ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಚುಚ್ಚಲು ಸನ್ನದ್ಧವಾಗಿವೆ. ಹಲವೆಡೆ ಕಬ್ಬಿಣದ ಪಟ್ಟಿಗಳು ಮುರಿದು ಹೋಗಿವೆ. ಇವರಿಗೆ (ಪೊಲೀಸ್ ಇಲಾಖೆ) ಕನಿಷ್ಠ ರಸ್ತೆ ವಿಭಜಕವನ್ನು ವ್ಯವಸ್ಥಿತವಾಗಿ ಇಡಲು ಬರುವುದಿಲ್ಲವೇ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಈ ಮಾರ್ಗದಲ್ಲಿ ದಿನವಿಡೀ ಅತ್ಯಂತ ವಾಹನ ದಟ್ಟಣೆ, ಜನ ಸಂಚಾರ ಇರುತ್ತದೆ. ಇತ್ತೀಚೆಗೆ ಬಿಆರ್​ಟಿಎಸ್ ಚಿಗರಿ ಬಸ್ ಸಂಚಾರ ಆರಂಭಗೊಂಡಿವೆ. ಹಳೇ ಬಸ್ ನಿಲ್ದಾಣದ ಎದುರು ರಸ್ತೆ ದಾಟುವುದು ಎಂದರೆ ಕಷ್ಟ ಕಷ್ಟ. ಅಂಥದರಲ್ಲಿ ರಸ್ತೆ ವಿಭಜಕಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿವೆ.

ಸುಮಾರು 2 ವರ್ಷಗಳ ಹಿಂದೆ ಹು-ಧಾ ಪೊಲೀಸ್ ಕಮೀಷನರೇಟ್​ನ ಸಂಚಾರ ವಿಭಾಗವು ನಗರದ ಪ್ರಮುಖ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಸರಿಪಡಿಸಲು ಕಬ್ಬಿಣದ ಚಾನಲ್​ಗಳಿಂದ ತಯಾರಿಸಿದ ವಿಭಜಕವನ್ನು ಅಳವಡಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಮೇಲ್ಮಟ್ಟದ ಅಧಿಕಾರಿಗಳು ರಸ್ತೆ ವಿಭಜಕದ ಪರಿಸ್ಥಿತಿಯನ್ನು ಅವಲೋಕಿಸಿದಂತಿಲ್ಲ. ಸಮೀಪದ ಚನ್ನಮ್ಮ ವೃತ್ತದಲ್ಲಿಯೇ ರಸ್ತೆ ಸುರಕ್ಷಾ ಸಪ್ತಾಹ ನಡೆಸುತ್ತಾರೆ. ದಿನವೂ ವಾಹನ ತಪಾಸಣೆ, ದಾಖಲೆಗಳ ಪರಿಶೀಲನೆ, ಗಸ್ತು, ಬಂದೋಬಸ್ತ್, ಇತ್ಯಾದಿ ಕರ್ತವ್ಯದ ಮೇಲೆ ಪೊಲೀಸ್ ಅಧಿಕಾರಿಗಳು ತಿರುಗಾಡುತ್ತ ಇರುತ್ತಾರೆ.

ರಸ್ತೆ ವಿಭಜಕ ಅಳವಡಿಸುವುದರಿಂದ ಮಾತ್ರ ಸಂಚಾರ ಸಮಸ್ಯೆ ಬಗೆಹರಿಯುವುದಿಲ್ಲ. ಅವು ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅಪಾಯ ಖಚಿತ. ರಸ್ತೆ ವಿಭಜಕ ಅಡ್ಡಾದಿಡ್ಡಿಯಾಗಿದ್ದರೆ ಸ್ಮಾರ್ಟ್ ಸಿಟಿ ಎನಿಸಿಕೊಳ್ಳುವುದಿಲ್ಲ. ವಿಭಜಕದ ಉದ್ದಕ್ಕೂ ಬುಡದಲ್ಲಿ ಮಣ್ಣು ರಾಶಿ ರಾಶಿಯಾಗಿ ಸಂಗ್ರಹವಾಗಿದೆ. ಎಷ್ಟೋ ತಿಂಗಳಿಂದ ಪಾಲಿಕೆಯವರು ರಸ್ತೆ ಕಸ ಗುಡಿಸಿದಂತೆ ಕಾಣುತ್ತಿಲ್ಲ.

ಶೀಘ್ರದಲ್ಲೇ ಶಾಶ್ವತ ಪರಿಹಾರ

ಸದ್ಯದಲ್ಲೇ ಅವ್ಯವಸ್ಥೆ ಸರಿಪಡಿಸಲಾಗುವುದು. ಅಲ್ಲಿ ರಸ್ತೆ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಶಾಶ್ವತ ಡಿವೈಡರ್ ಅಳವಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *