ಧಾರವಾಡ: ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳಿಗೆ ಅಪಾರವಾದ ಇತಿಹಾಸವಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಸಂಸ್ಕೃತಕ್ಕೆ ದೊರೆತ ಸ್ಥಾನಮಾನ ಪ್ರಾಕೃತ ಭಾಷೆಗೆ ದೊರಕದಿರುವುದು ವಿಷಾದನೀಯ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಕೃತ ಭಾಷೆಯ ಬೆಳವಣಿಗೆಗೆ ಗಮನ ನೀಡಬೇಕು ಎಂದು ‘ರಾಷ್ಟ್ರಪತಿ ಪ್ರಶಸ್ತಿ’ ಪುರಸ್ಕೃತ ನಾಡೋಜ ಡಾ. ಹಂಪ ನಾಗರಾಜಯ್ಯ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್ಎಸ್ ಆವರಣದ ಡಿ. ರತ್ನವರ್ಮ ಹೆಗ್ಗಡೆ ಸಭಾಭವನದಲ್ಲಿ ಜನತಾ ಶಿಕ್ಷಣ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ನಾಡೋಜ ಡಾ. ಕಮಲಾ ಹಂಪನಾ ಅವರ ‘ಬೇರು- ಬೆಂಕಿ ಬಿಳಲು’ ಕೃತಿ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಕೃತ ಭಾಷೆ ಒಂದು ಕಾಲದಲ್ಲಿ ಅಪಾರ ಜನಪ್ರಿಯತೆ ಪಡೆದಿತ್ತು. ಇತ್ತೀಚಿನ ದಿನಗಳಲ್ಲಿ ಪ್ರಾಕೃತ ಭಾಷೆಯ ಬಳಕೆ ಇಲ್ಲವಾಗಿದೆ. ಇದೇ ರೀತಿ ಮುಂದುವರಿದರೆ ಭಾಷೆ ನಶಿಸುವ ಆತಂಕವಿದೆ. ಹೀಗಾಗಿ ಪ್ರಾಕೃತ ಭಾಷೆಯ ಬೆಳವಣಿಗೆ ಮತ್ತು ಅಧ್ಯಯನಕ್ಕಾಗಿ ಸರ್ಕಾರ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕು ಎಂದರು.
ನಾಡೋಜ ಡಾ. ಕಮಲಾ ಹಂಪಾ ಮಾತನಾಡಿ, ದೇಶದಲ್ಲಿ ಹಲವು ಧರ್ಮ, ಜಾತಿಗಳಿದ್ದು, ನಾವೆಲ್ಲರೂ ಹಿಂದುಗಳೆ. ಆದರೆ, ಹಿಂದು ಪದ ಬಳಕೆ ಸರಿಯಲ್ಲ. ಬದಲಿಗೆ ನಾವೇಲ್ಲ ಭಾರತೀಯರು ಎಂದು ಹೇಳಬೇಕು. ದೇಶದಲ್ಲಿನ ಎಲ್ಲ ರಾಜ್ಯಗಳ ಮಾತೃ ಭಾಷೆಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯಗೊಳಿಸಬೇಕು. ಬೇಕಾದರೆ ಇಂಗ್ಲಿಷ್ ಅನ್ನು 7ನೇ ತರಗತಿವರೆಗೆ ಒಂದು ಭಾಷೆಯನ್ನಾಗಿ ಸೇರಿಸಬೇಕು. ಇಲ್ಲವಾದರೆ ಕನ್ನಡ ಭಾಷೆಗೆ ಧಕ್ಕೆಯಾಗುತ್ತದೆ ಎಂದರು.
ಎಸ್ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನಕುಮಾರ ಮಾತನಾಡಿ, ಭಾಷೆಯ ಬೆಳವಣಿಗೆಯಲ್ಲಿ ಸಾಹಿತಿಗಳ ಪಾತ್ರ ಪ್ರಮುಖವಾಗಿರುತ್ತದೆ. ಕವಿ ಬರವಣಿಗೆ ಮೂಲಕ ಪ್ರಕೃತಿಯ ಸೌಂದರ್ಯವನ್ನು ವರ್ಣಿಸುತ್ತಾನೆ. ಸಮಾಜದ ಪರಿವರ್ತನೆಗೆ ಶಿಕ್ಷಣ ಪ್ರಮುಖವಾಗಿದೆ. ಹೀಗಾಗಿ ಶಿಕ್ಷಣವು ಮೌಲ್ಯ, ಕೌಶಲಗಳನ್ನು ಒಳಗೊಂಡಿರಬೇಕು ಎಂದರು.
ಜೆಎಸ್ಎಸ್ ಕಾರ್ಯದರ್ಶಿ ಡಾ. ನ. ವಜ್ರಕುಮಾರ, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಡಾ. ಪದ್ಮರಾಜ ದಂಡಾವತಿ, ಕನ್ನಡ ವಿವಿ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ, ಕುವೆಂಪು ವಿವಿಯ ಪ್ರಾಧ್ಯಾಪಕ ಡಾ. ಪ್ರಶಾಂತ ನಾಯಕ, ಡಾ. ಅಜಿತ ಪ್ರಸಾದ, ಇತರರು ಉಪಸ್ಥಿತರಿದ್ದರು.