ಪ್ರಸ್ತುತ ಶಿಕ್ಷಣದಲ್ಲಿ ಬದಲಾವಣೆ ಅಗತ್ಯ

ಧಾರವಾಡ: ಪದವಿ ಹಂತದ ಶಿಕ್ಷಣದ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಕವಿವಿ-ವಿಶ್ವ ವಿದ್ಯಾಲಯ ಅನುದಾನ ಆಯೋಗ-ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ನ್ಯಾಕ್ ಸಂಸ್ಥೆ, ಸೆಂಟರ್ ಫಾರ್ ಎಜುಕೇಶನ್ ಆಂಡ್ ಸೋಶಿಯಲ್ ಸರ್ವೀಸ್ ಆಶ್ರಯದಲ್ಲಿ ಬುಧವಾರ ಜರುಗಿದ ‘ಪದವಿ ಶಿಕ್ಷಣದ ಪುನಶ್ಚೇತನ’ ರಾಷ್ಟ್ರೀಯ ಸಮ್ಮೇಳನ ಸಮಾರೋಪದಲ್ಲಿ ಅವರು ಮಾತನಾಡಿದರು.
ಶಿಕ್ಷಕರಿಗೆ ಸರ್ಕಾರ ಅನೇಕ ಸೌಲಭ್ಯ ಕಲ್ಪಿಸಿದೆ. ಶಿಕ್ಷಕನಿಗೆ ದೇಶ ಮತ್ತು ಸಮಾಜದಲ್ಲಿ ಗೌರವವಿದೆ. ಪ್ರಸ್ತುತ ದಿನಗಳಲ್ಲಿ ಶಿಕ್ಷಕರು ತಮಗೆ ನೀಡಿರುವ ಸೌಲಭ್ಯಗಳನ್ನು ದುರಪಯೋಗ ಪಡಿಸಿಕೊಳ್ಳುತ್ತಿರುವ ಉದಾಹರಣೆಗಳು ಕಂಡುಬರುತ್ತಿರುವುದು ವಿಷಾದಕರ ಸಂಗತಿ. ಸಮಾಜವು ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೀಗಾಗಿ ಶಿಕ್ಷಕರು ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.
ಸರ್ಕಾರಗಳು ಶಿಕ್ಷಣಕ್ಕಾಗಿ ಮತ್ತು ಶಿಕ್ಷಕರ ವೇತನಕ್ಕೆ ಅತಿ ಹೆಚ್ಚು ಅನುದಾನ ಖರ್ಚು ಮಾಡುತ್ತಿವೆ. ಆದರೆ ನಮ್ಮ ಪ್ರಾಥಮಿಕ ಶಾಲೆ, ಕಾಲೇಜುಗಳ ಸ್ಥಿತಿ ಮತ್ತು ಅಲ್ಲಿನ ಮೂಲಸೌಕರ್ಯ ಇಂದಿಗೂ ಸುಧಾರಿಸಿಲ್ಲ. ಹೀಗಾಗಿ ಶಿಕ್ಷಕರು ಶಿಕ್ಷಣದಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ ಎಂದರು.
ಬೆಂಗಳೂರಿನ ಕೇಂದ್ರೀಯ ಸಮಾಜ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಡಾ. ಮಾನಸಾ ನಾಗಭೂಷಣ ಮಾತನಾಡಿ, ಇಂದಿನ ಪಠ್ಯಕ್ರಮವನ್ನು ವಿದ್ಯಾರ್ಥಿ ಸ್ನೇಹಿ, ಹೊಸ ಅನ್ವೇಷಣೆಗೆ ಸಹಾಯ ಆಗುವಂತೆ ಬದಲಾವಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಇಂದಿನ ಶಿಕ್ಷಣವು ಸಾಮಾಜಿಕ ನಾಯಕತ್ವ ಮತ್ತು ಸಾಮಾಜಿಕ ಸ್ವಯಂ ಸಹಭಾಗಿತ್ವ ರೂಪಿಸುವ ಅವಶ್ಯಕತೆಯನ್ನು ಪದವಿ ಪಠ್ಯಕ್ರಮ ಹೊಂದಬೇಕಿದೆ ಎಂದರು.
ಎರಡು ದಿನ ನಡೆದ ಸಮಾವೇಶದಲ್ಲಿ ಪದವಿ ಶಿಕ್ಷಣದ ಪಠ್ಯಕ್ರಮ ಕುರಿತು ವಿವಿಧ ವಿಷಯಗಳ ಚರ್ಚೆ ಆಧರಿಸಿ, ಮುಂಬರುವ ದಿನಗಳಲ್ಲಿ ಪದವಿ ಹಂತದ ಶಿಕ್ಷಣದಲ್ಲಿ ಪಠ್ಯಕ್ರಮದ ರೂಪುರೇಷೆಗಳು, ಶಿಕ್ಷಣ ಪುನಶ್ಚೇತನ ಕುರಿತ ದಾಖಲೆ ಬಿಡುಗಡೆ ಮಾಡಲಾಯಿತು.
ಡಾ. ಮಹೇಂದ್ರ ಕುಮಾರ, ಡಾ. ಹರೀಶ ರಾಮಸ್ವಾಮಿ, ಡಾ. ರಘು ಅಕಮಂಚಿ, ಡಾ. ಜಿ.ಸಿ. ರಾಜಣ್ಣ, ಡಾ. ಗುರುನಾಥ ಬಡಿಗೇರ, ಡಾ. ಪ್ರಸನ್ನ ಪಂಡರಿ, ಪ್ರಾಧ್ಯಾಪಕರು, ಇತರರು ಇದ್ದರು. ಇದಕ್ಕೂ ಪೂರ್ವದಲ್ಲಿ ನಡೆದ ಗೋಷ್ಠಿಯಲ್ಲಿ ಪ್ರೊ. ನಾಗೂರ, ಪ್ರೊ. ಬಿ.ಎಂ. ರತ್ನಾಕರ, ಕಮಲಾಕ್ಷಿ ಹಾಗೂ ಪ್ರೊ. ಬಡಿಗೇರ ಅವರು ವಿವಿಧ ವಿಷಯಗಳನ್ನು ಮಂಡಿಸಿದರು.

ಇಂದು ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಜಿಲ್ಲೆಗೊಂದು ವಿವಿಗಳು ಹುಟ್ಟುಕೊಂಡಿರುವುದು ಶಿಕ್ಷಣ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ತಕ್ಷಶಿಲೆ ಮತ್ತು ನಳಂದ ವಿವಿಗಳಂಥವನ್ನು ರೂಪಿಸುವ ಅಗತ್ಯವಿದೆ.
| ಅರವಿಂದ ಬೆಲ್ಲದ, ಶಾಸಕ