ಪ್ರಸಾದ ಸೇವಿಸಿ ಬಾಲಕ ಮೃತ

ಶಿರಾ/ ಪಾವಗಡ: ಪಾವಗಡ ತಾಲೂಕಿನ ನಿಡಗಲ್ ವೀರಭದ್ರ ಸ್ವಾಮಿ ದೇಗುಲದಲ್ಲಿ ಕಲುಷಿತ ನೀರು ಬಳಸಿ ಮಾಡಿದ ಅಡುಗೆ ಸೇವಿಸಿದ ಆಂಧ್ರಪ್ರದೇಶದ ಮೋರಬಾಗಿಲು ಗ್ರಾಮದ 20 ಮಂದಿ ಅಸ್ವಸ್ಥರಾಗಿದ್ದು, ಬಾಲಕ ವೀರಭದ್ರ (11) ಮೃತಪಟ್ಟಿದ್ದಾನೆ.

ಅಸ್ವಸ್ಥಗೊಂಡ ತಿಪ್ಪೇಸ್ವಾಮಿ (45), ಪತ್ನಿ ಕವಿತಾ (35) ಮಗ ರುದ್ರೇಶ್ (6)ಎಂಬುವವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಪವನ್ (10), ಅರ್ಪಿತಾ (12), ಗಂಗಮ್ಮ (50), ರುದ್ರಮ್ಮ (60), ಗಂಗಾಧರ್ (48), ನಾಗಮ್ಮ (38), ವಿರೂಪಾಕ್ಷ (28), ದಯಾನಂದ (20), ಚಂದ್ರಕಲಾ (50) ಎನ್ನುವವರಿಗೆ ಶಿರಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಒಂದೇ ಕುಟುಂಬದವರು ಪಾವಗಡ ತಾಲೂಕಿನ ನಿಡಗಲ್​ನ ವೀರಭದ್ರ ಸ್ವಾಮಿಗೆ ಹರಕೆ ತೀರಿಸಲು ಸೋಮವಾರ ಬಂದಿದ್ದರು. ಈ ವೇಳೆ ದೇವಾಲಯದ ಸಂಪ್​ನಲ್ಲಿದ್ದ ನೀರಿನಿಂದ ಆಹಾರ ತಯಾರಿಸಿ ಊಟ ಮಾಡಿ ತೆರಳಿದ್ದರು. ಆದರೆ ಮಂಗಳವಾರ ಬೆಳಗ್ಗೆ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದು, ಗ್ರಾಮದಲ್ಲೇ ಚಿಕಿತ್ಸೆ ಪಡೆದಿದ್ದಾರೆ. ತಿಪ್ಪೇಸ್ವಾಮಿ ಎನ್ನುವವರ ಮಗ ವೀರಭದ್ರ ಬುಧವಾರ ಬೆಳಗ್ಗೆ ತೀವ್ರ ಅಸ್ವಸ್ಥಗೊಂಡಿದ್ದು, ಆತನನ್ನು ಬರಗೂರು ಆಸ್ಪತ್ರೆಗೆ ಕರೆತರಲಾಗಿದೆ. ಬಾಲಕನ್ನು ಶಿರಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ ಆಸ್ಪತ್ರೆ ಸಿಬ್ಬಂದಿ, ಉಳಿದವರನ್ನೂ ಶಿರಾಕ್ಕೆ ತೆರಳುವಂತೆ ತಿಳಿಸಿದ್ದಾರೆ. ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಬರುವಾಗ ವೀರಭದ್ರ ಕೊನೆಯುಸಿರೆಳೆದಿದ್ದು, ಉಳಿದ 13 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಶಿರಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಚಂದ್ರಕಲಾ ವಿವರ ಪಡೆದರು. ಸರ್ವೆಲೆನ್ಸ್ ಅಧಿಕಾರಿ ಡಾ.ಮೋಹನ್​ದಾಸ್ ಮತ್ತು ತಂಡ ಶಿರಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು. ತಾಲೂಕು ವೈದ್ಯಾಧಿಕಾರಿ ಡಾ.ಅಫ್ಜಲ್ ಉರ್ ರೆಹಮಾನ್, ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀನಾಥ್, ಹಿರಿಯ ಆರೋಗ್ಯ ಸಹಾಯಕ ಶ್ರೀನಿವಾಸಮೂರ್ತಿ ತಂಡ ಚಿಕಿತ್ಸೆ ನೀಡುತ್ತಿದೆ.

ಸಾವಿಗೆ ನಕಲಿ ವೈದ್ಯ ಕಾರಣ ?: ಗ್ರಾಮದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ಚಿಕಿತ್ಸೆ ಕೊಡಿಸಲಾಗಿದೆ. ಇಂಜೆಕ್ಷನ್ ನೀಡಿದ್ದ ಆತ, ಎಳನೀರು, ಗ್ಲುಕೋಸ್ ಸೇವಿಸುವಂತೆ ತಿಳಿಸಿದ್ದಾನೆ. ಆದರೆ ಬುಧವಾರದ ಬೆಳಗಿನ ಜಾವಕ್ಕೆ ವೀರಭದ್ರ ಮತ್ತಷ್ಟು ಅಸ್ವಸ್ಥಗೊಂಡಿದ್ದಾನೆ. ಬರಗೂರು ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕರೆ ತರುವ ವೇಳೆಗೆ ಪ್ರಜ್ಞೆ ತಪ್ಪಿದ್ದ ಬಾಲಕ, ಶಿರಾ ತಲುಪುವ ಮೊದಲೇ ಕೊನೆಯುಸಿರೆಳೆದಿದ್ದ ಎಂದು ಕುಟುಂಬದ ಗಂಗಾಧರ ತಿಳಿಸಿದ್ದಾರೆ.

ಕುಡಿಯುವ ನೀರನ್ನೂ ತೆಗೆದುಕೊಂಡು ಹೋಗಿದ್ದೆವು. ಬೇಸಿಗೆ ಕಾರಣದಿಂದ ನೀರು ಬೇಗನೆ ಖಾಲಿಯಾಯಿತು. ಊಟದ ವೇಳೆ ಅನಿವಾರ್ಯವಾಗಿ ಅಲ್ಲೇ ಸಂಪ್​ನಲ್ಲಿದ್ದ ನೀರು ಕುಡಿದೆವು.

| ಗಂಗಾಧರ್, ಬಾಲಕನ ದೊಡ್ಡಪ್ಪ

ಕುಟುಂಬದವರು ಸ್ವತಃ ತಾವೇ ತೆಗೆದುಕೊಂಡು ಹೋಗಿದ್ದ ಪದಾರ್ಥ ಬಳಸಿ ಅಡುಗೆ ತಯಾರಿಸಿದ್ದಾರೆ. ಕಲುಷಿತ ನೀರಿನಿಂದ ಸಮಸ್ಯೆ ಉಂಟಾಗಿದ್ದು, ದೇವಾಲಯದಲ್ಲಿನ ನೀರಿನ ಸ್ಯಾಂಪಲ್ ಹಾಗೂ ಆಹಾರ ಪದಾರ್ಥದ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ.

| ಡಾ.ಚಂದ್ರಕಲಾ, ಜಿಲ್ಲಾ ವೈದ್ಯಾಧಿಕಾರಿ

ತೊಟ್ಟಿ ನೀರು ಬಳಸಿದ್ದೇ ಕಾರಣ: ಅಡುಗೆ ತಯಾರಿಸಲು ತೊಟ್ಟಿ ನೀರು ಬಳಸಿದ್ದೇ ಘಟನೆಗೆ ಕಾರಣ ಎಂದು ನಿಡಗಲ್ ವೀರಭದ್ರ ದೇವಸ್ಥಾನದ ಅರ್ಚಕ ರುದ್ರಪ್ಪ ತಿಳಿಸಿದ್ದಾರೆ.

ಸೋಮವಾರ ದೇವಸ್ಥಾನದಲ್ಲಿ ಪೂಜೆ ಮಾಡಿ ಪ್ರಸಾದ ಮಾಡುವುದಾಗಿ ತಿಳಿಸಿದರು. ದೇವಾಲಯದ ಆವರಣದಲ್ಲಿನ ಟ್ರಾನ್ಸ್​ಫಾರ್ಮರ್ ಸುಟ್ಟಿದ್ದು, ಕುಡಿಯುವ ನೀರಿನ ಸಮಸ್ಯೆ ಇದೆ. ನೀರಿನ ವ್ಯವಸ್ಥೆ ನೀವೇ ಮಾಡಿಕೊಳ್ಳಿ ಎಂದು ತಿಳಿಸಿದ್ದೆ. ಹಾಗೆ ತೊಟ್ಟಿಯಲ್ಲಿನ ನೀರು ಬಳಸಿದ್ದಾರೆ. ಊಟ ಮಾಡಿ ಸೋಮವಾರ ಸಂಜೆ 4 ಗಂಟೆಗೆ ವಾಪಸಾದರು. ಅವರು ತಯಾರಿಸಿದ ಅಡುಗೆಯನ್ನು ನಾನೂ ಸೇರಿ ನಿಡಗಲ್ ಗ್ರಾಮದ 9 ಕುರಿಗಾಹಿಗಳು ಸೇವಿಸಿದ್ದು, ನಮಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ನಿಡಗಲ್ ದುರ್ಗದ ಅರ್ಚಕ ರುದ್ರಪ್ಪ