ಪ್ರಸಾದ್, ಅದಿತ್ರಿ ಸಾವು ನಿಗೂಢ

ಶಿವಮೊಗ್ಗ: ಸಾಗರ ತಾಲೂಕಿನ ಕಾರ್ಗಲ್ ಸಮೀಪ ತಲಕಳಲೆ ಹಿನ್ನೀರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗಳ ಆತ್ಮಹತ್ಯೆ ಪ್ರಕರಣ ನಿಗೂಢವಾಗಿದೆ.

ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಬೆಂಗಳೂರು ಬೊಮ್ಮಸಂದ್ರದ ಆರ್.ಎಸ್.ಗಾರ್ಡೆನಿಯಾ ವಾಸಿ ಕೆ.ಎಂ.ಪ್ರಸಾದ್ ಆತ್ಮಹತ್ಯೆ ಮಾಡಿಕೊಳ್ಳಲು ಫೆಬ್ರವರಿಯಲ್ಲೇ ತಲಕಳಲೆ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ನಿಜವಾಗಿಯೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ? ಇಲ್ಲವೇ ಬೇರೆ ಏನಾದರೂ ಸಾಧ್ಯತೆಗಳಿವೆಯೇ ಎಂಬ ಅನುಮಾನಗಳಿವೆ

ವ್ಯವಹಾರದಲ್ಲಿ ನಷ್ಟಕ್ಕೀಡಾಗಿದ್ದ ಪ್ರಸಾದ್ ಫೆ. 7ರಂದು ನಾಪತ್ತೆಯಾಗಿದ್ದು, ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಅವರು ಏ. 19ರಂದು ಮನೆಗೆ ತೆರಳಿದ್ದು, ಕೆಲ ದಿನಗಳ ನಂತರ ಪತ್ನಿ ಹಾಗೂ ಮಕ್ಕಳೊಂದಿಗೆ ಸಾಗರದ ಸ್ನೇಹಿತರೊಬ್ಬರ ಮನೆಗೆ ಆಗಮಿಸಿದ್ದರು. ಅಲ್ಲಿಂದ ಕುಟುಂಬ ಸಮೇತ ಗೋಕರ್ಣ, ಮುರ್ಡೆಶ್ವರ ಪ್ರಸಾಕ್ಕೆ ತೆರಳಿ 25ರಂದು ರಾತ್ರಿ ಸತೀಶ್ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಮರುದಿನ ಬೆಳಗ್ಗೆ ಪುತ್ರಿ ಅದಿತ್ರಿಯೊಂದಿಗೆ ಇನ್ನೋವಾ ಕಾರಿನಲ್ಲಿ ತೆರಳಿದ್ದ ಪ್ರಸಾದ್ ನಾಪತ್ತೆಯಾಗಿದ್ದರು. ಆನಂತರ 29ರಂದು ತಲಕಳಲೆ ಹಿನ್ನೀರಿನ ಬಳಿ ಮೂರು ದಿನಗಳಿಂದ ನಿಂತಿದ್ದ ಇನ್ನೋವಾ ಕಾರು ಪತ್ತೆಯಾಗಿತ್ತು. ಹಿನ್ನೀರಿನಲ್ಲಿ ಅದೇ ದಿನ ಅದಿತ್ರಿ ಶವ ಪತ್ತೆಯಾಗಿತ್ತು.

ಮರುದಿನ ಪ್ರಸಾದ್ ಶವ ನೀರಿನಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ತಲಕಳಲೆ ಹಿನ್ನೀರಿಗೆ ಏಕಾಏಕಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೊದಲೇ ಆತ್ಮಹತ್ಯೆಗೆ ಜಾಗದ ಆಯ್ಕೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *