ಪ್ರಶ್ನೆ ಪರಿಹಾರ

| ಮಹಾಬಲಮೂರ್ತಿ ಕೊಡ್ಲೆಕೆರೆ

ಹುಣ್ಣಿಮೆ ಅಮಾವಾಸ್ಯೆಗಳ ಬಗ್ಗೆ ಜನ ಹೇಳುತ್ತಾರೆ. ಇದು ನಿಜವೇ? ನನ್ನ ಮಗನ ಜಾತಕ ಕಳಿಸಿದ್ದೇನೆ. ಆತ ಹೇಳಿದ ಮಾತು ಕೇಳಿಸಿಕೊಳ್ಳಲಾರ. ತಲೆಯಲ್ಲಿ ಇರುವೆ ಓಡಾಡಿದಂತೆ ಆಗುತ್ತದೆ ಎಂದು ಹೇಳುತ್ತಾನೆ. ಹುಣ್ಣಿಮೆ ಅಮಾವಾಸ್ಯೆಗಳಂದು ಅಕ್ಷರಶಃ ಹುಚ್ಚನೇ ಆಗುತ್ತಾನೆ. ನಂತರದ ದಿನಗಳಲ್ಲಿ ಅಸ್ತವ್ಯಸ್ತತೆ ಈ ಪ್ರಮಾಣದಲ್ಲಿರದು. ಆದರೆ ಪೂರ್ತಿ ನಾರ್ಮಲ್ ಎಂದೇನಲ್ಲ. ಏನಾದರೂ ಪರಿಹಾರ ಸಾಧ್ಯವೇ?

-ಶಾಂತವೀರಯ್ಯ ಅಗಸಿ ಎಲಿ ಚಿಕ್ಕೋಡಿ

ಭಾರತೀಯ ಜ್ಯೋತಿಷ್ಯವಿಜ್ಞಾನ ಬೆಳಕಿನ ಗೋಲಗಳಾದ ಚಂದ್ರ ಮತ್ತು ಸೂರ್ಯನಿಗೆ ಬಹಳೇ ಮಹತ್ವವನ್ನು ಹೇಳುತ್ತದೆ. ಸೂರ್ಯನ ಅರುಮ ಹಾಗೂ ಚಂದ್ರನ ಮಮೈಮ ಎಂಬ ಧಾತುವಿಗೆ ರಾಹು-ಕೇತುಗಳೇ ಮುಂತಾದ ಕ್ರೂರಗ್ರಹಗಳು ತಗುಲಿಕೊಂಡಾಗ ಮಾನಸಿಕ ಗೊಂದಲಗಳು ಸಾಮಾನ್ಯ. ಕಬ್ಬಿನಹಾಲು ಮತ್ತು ಎಳನೀರಿನ ಕೊಬ್ಬರಿಯನ್ನು ಮಾರುತಿಗೆ ನೈವೇದ್ಯ ಸಲ್ಲಿಸಿ ಮಗನಿಗೆ ನೀಡಿ. ಬೆಲ್ಲದಲ್ಲಿ ಬೆರೆಸಿದ ಎಳೆಯ ಬಾಳೆಯ ದಿಂಡಿನ ಹೋಳುಗಳನ್ನು ಶಿವನಿಗೆ ನೈವೇದ್ಯ ಸಲ್ಲಿಸಿ ಮಗನಿಗೆ ಕೊಡಿ. ಆಧುನಿಕ ವೈದ್ಯರ ಬಳಿಯೂ ತೋರಿಸಿ. ಕಾಲಭೈರವಾಷ್ಟಕ, ಚಂಡಿಕಾ ಅಷ್ಟೋತ್ತರಗಳನ್ನು ಓದಿಸಿ ಇಲ್ಲವೇ ನೀವೇ ಓದಿ.

ನಾನು ಒಳ್ಳೆಯ ಕಡೆ ಓದಿ ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆದು ಈಗ ಒಂದೆಡೆ ಉತ್ತಮ ಕೆಲಸದಲ್ಲಿದ್ದೇನೆ. ಜೀವನದಲ್ಲಿ ಸೋಲಿಲ್ಲದೆ ಸಾಗಿದೆ ಎಂಬ ಸಮಾಧಾನ ಆಗಿದ್ದು ಸತ್ಯ. ಆದರೆ ಸೂಕ್ತ ಗಂಡುಗಳು ಸಿಗದ ಕಾರಣ ಮದುವೆಯಾಗಿಲ್ಲ. ದಿನ ಕಳೆಯುತ್ತಿವೆ. ವಯಸ್ಸು 32. ತಂದೆ-ತಾಯಿ ಹಣ್ಣಾಗಿದ್ದಾರೆ. ಬಿಡುಗಡೆ ಸಾಧ್ಯವೇ?

-ಪೂಜಾ ಹೆಗಡೆ ಜಯಪುರ

ನಿಮ್ಮ ಜಾತಕದ ನಷ್ಟಭಾವದಲ್ಲಿ ಒಂದಕ್ಕಿಂತ ಒಂದು ಮಿಗಿಲು ಎಂಬ ನಾಲ್ಕಾರು ಯೋಗಗಳು ಆಗಿವೆ. ಈ ಯೋಗಗಳಿಂದ ಯಶಸ್ಸು ಸಿಗಲೇಬೇಕು. ವಿದ್ಯೆ, ಕೆಲಸ, ಸಂಬಳ ಇತ್ಯಾದಿ ವಿಚಾರಗಳ ಸಂಬಂಧವಾಗಿ ಅದು ಖಂಡಿತಕ್ಕೂ ದೊರಕಿದೆ. ನೀವೇ ಅಂದಂತೆ ದಿನಗಳು ಕಳೆಯುತ್ತಿವೆ. ದುಷ್ಟನಾದರೂ ಚಂದ್ರಗ್ರಹದ ಸಿದ್ಧಿಯಿಂದ ಪೂರ್ವಪುಣ್ಯಸ್ಥಾನದಲ್ಲಿ (ವಿಸ್ತರಿಸಿಕೊಳ್ಳಲು ಸಾಧ್ಯವಾಗುವ ಹಾಗೆ ಇಟ್ಟುಕೊಂಡಿದೆ) ಮದುವೆಗಾಗಿನ ಒಂದು ಕ್ಷೀಣ ಬೆಳಕು ತುಸುಮಟ್ಟಿಗೆ ಅರಳಿದೆ. ಶುಕ್ರಗ್ರಹ (ಶುಕ್ರ ಜಾತಕಕ್ಕೆ ಒಳ್ಳೆಯವನಲ್ಲ) ಶುಭಗ್ರಹದ ಸಾತ್ವಿಕತೆ ಹೊಂದಿರುವುದರಿಂದ ಚಂದ್ರನನ್ನು ಬಲಾಢ್ಯಗೊಳಿಸಿದೆ. 2019ರ ಕೊನೆ ಅಥವಾ 2020ರ ಆದಿಭಾಗದಲ್ಲಿ ಮದುವೆಯ ವಿಚಾರದಲ್ಲಿ ಸಕಾರಾತ್ಮಕ ಘಟ್ಟಕ್ಕೆ ಸಾಧ್ಯತೆ ಜಾಸ್ತಿ. ಜಗಜ್ಜನನಿ ಶಾಂಭವಿಯನ್ನು ಸ್ತುತಿಸಿ. ಶುಕ್ರವಾರ ಅರಿಶಿಣ ಅಕ್ಷತೆ ಕುಂಕುಮ ಪುಷ್ಪ ನೀಲಾಂಜನ ಸಹಿತ ಆರಾಧನೆಗೆ ನೆಲೆ ಸಿಗಲಿ.

ಇರುವ ಒಳ್ಳೆಯ ಕೆಲಸ ಬಿಟ್ಟು ನನ್ನ ಮಗ ದೂರದ ಮುಂಬಯಿಯಲ್ಲಿ ನವರತ್ನದ ಹರಳುಗಳ ಅಂಗಡಿಯೊಂದನ್ನು ಶುರುಮಾಡಿದ. ಉತ್ತಮವಾದ ಗಜಕೇಸರಿ ಯೋಗ ಇದೆ, ತೊಂದರೆಯಾಗದು ಎಂದು ಸ್ಥಾಪಿಸಿದ ಹರಳಿನ ವ್ಯಾಪಾರವಹಿವಾಟು ಪೂರ್ತಿ ಕೈಕೊಟ್ಟಿತು. ಎಲ್ಲವನ್ನೂ ನಿಭಾಯಿಸಬಲ್ಲೆ ಎಂದು ಆತ್ಮವಿಶ್ವಾಸದಿಂದ ಇದ್ದ ಮಗ ಈಗ ಬಹು ದೊಡ್ಡ ನಷ್ಟದಲ್ಲಿದ್ದಾನೆ. ಸುಧಾರಿಸಿಕೊಳ್ಳುತ್ತೇನೆ ಎಂದು ನಂಬಿಕೆ ಅವನಿಗಿದೆ. ಅವನ ಪರದಾಟ ನೋಡಿ ಈ ಇಳಿವಯಸ್ಸಿನಲ್ಲಿ ನೋವು ಹೇಳತೀರದು. ಪರಿಹಾರ ಇದೆಯೇ?

-ಅನಂತ ಗೋಪಾಲಯ್ಯ ಹೆಮ್ಮಾಡಿ

ಜನ್ಮಕುಂಡಲಿಯಲ್ಲಿ ನಾನಾ ರೀತಿಯಲ್ಲಿ ಗೊಂದಲಗಳು ರೂಪುಗೊಳ್ಳುತ್ತ ರಾಜಯೋಗವನ್ನು ದುರ್ಯೋಗವನ್ನಾಗಿಸುತ್ತವೆ. ದುರ್ಯೋಗಗಳನ್ನು ರಾಜಯೋಗದ ಸ್ನಿಗ್ಧ ನಿಕ್ಷೇಪ ಎಂಬ ಭ್ರಮೆ ತರುವಂತೆ ಒಳಿತಿನ ಆವರಣಗಳನ್ನು ಕಟ್ಟಿಕೊಡುತ್ತದೆ. ಗ್ರಹಗಳ ಅಸಲಿ ಮುಖಗಳು ನಿಜಕ್ಕೂ ಹೇಗೆ, ಯಾವ ಸ್ವರೂಪದ್ದು ಎಂಬುದನ್ನು ಆಯಾ ಕಾಲಘಟ್ಟದ ಶಕ್ತಿ ಅಥವಾ ದೌರ್ಬಲ್ಯಗಳ ಹಿನ್ನೆಲೆಯಲ್ಲಿ ನೋಡಬೇಕು. ಇದು ಆಯಾ ಸಂದರ್ಭದ ಗೋಚಾರ ಗ್ರಹಗಳು ವರ್ತಮಾನದಲ್ಲಿ ಹೇಗೆ ತಮ್ಮ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ ಎಂಬುದರ ವಿಶ್ಲೇಷಣೆಯ ಮೇಲೆಯೇ ನಿಂತಿರುತ್ತದೆ. ಒಳ್ಳೆಯವನಲ್ಲದ ಕುಜನು ಉಚ್ಚತ್ವದ ಕಾರಣದಿಂದಾಗಿ ಶುಕ್ರನ ಜೊತೆಗೆ ಕುಳಿತು ಕೆಲವು ವರ್ಷಗಳ ಕಾಲ ಒಳಿತನ್ನು ಸೃಷ್ಟಿಸಿ ಒದಗಿಸಿದ ಭ್ರಮಾಧೀನತೆಯೇ ನಿಮ್ಮ ಮಗನಿಗೆ ಮುಳುವಾಯಿತು. ರಾಹುದಶಾ ಕಾಲದಲ್ಲಿ ತತ್ತರಿಸುವ ಏಟುಗಳನ್ನು ಸ್ವೀಕರಿಸಬೇಕಾಯಿತು. ಗಜಕೇಸರಿ ಯೋಗ ಸರಿ. ಆದರೆ ರಾಹು-ಕೇತುಗಳ ಉಪಸ್ಥಿತಿಯು ಈ ಯೋಗವನ್ನು ವಿಷಣ್ಣಗೊಳಿಸಿದೆ. ಒಟ್ಟು 18 ವರ್ಷಗಳ ರಾಹುದಶಾ, ಜತೆಗೆ ಈ ಸಂದರ್ಭದಲ್ಲೇ ಗಾಯಕ್ಕೆ ಬರೆ ಎಳೆದಂತೆ ಸಾಡೇಸಾತಿ ಬಂದಿದ್ದು ವರ್ಚಸ್ಸಿಗೆ ತೀವ್ರವಾಗಿ ಧಕ್ಕೆ ತರುವ ಸ್ವರೂಪದ್ದು. ರಾಹು-ಕೇತುಗಳ ಪೀಡೆ ನಿವಾರಣೆಗೆ ನರಸಿಂಹ ಹಾಗೂ ಗಣಪತಿಯ ಆರಾಧನೆ ಮುಖ್ಯ. ಪ್ರತಿದಿನ ಶ್ರೀ ಲಕ್ಷಿ್ಮೕನಾರಾಯಣ ಹೃದಯ ಮತ್ತು ಅಂಗಾರಕ ಸ್ತೋತ್ರ ಪಠಣಗಳಿಂದ ಸಂಪನ್ನತೆ ಸಿಗಬೇಕು.

ತೀವ್ರ ಒತ್ತಡದಲ್ಲಿದ್ದೇನೆ. ಮೊದಲನೆಯ ಮದುವೆಯಲ್ಲಿ ಒಬ್ಬ ನಿರ್ಲಜ್ಜ ಗಂಡನಾಗಿ ಸಿಕ್ಕಿದ. ಡಿವೋರ್ಸ್ ಪಡೆದಿದ್ದಾಯ್ತು. ಈಗ ಎರಡನೆಯ ಮದುವೆಯಾಗಿದ್ದೇನೆ. ಯಾಕೋ ಹಲವು ತೊಂದರೆಗಳು ಬರುತ್ತಿವೆ. ನನಗೀಗ ಡಿವೋರ್ಸ್ ಬೇಕಾಗಿಲ್ಲ. ಯಾಕೆ ನನಗೆ ಇಂಥ ತೊಂದರೆ? ಪರಿಹಾರ ಏನು?

– ಲಕ್ಷ್ಮೀವಿಶ್ವನಾಥ್ ನವದೆಹಲಿ

ಶನೈಶ್ಚರ ಎರಡು ಮಹತ್ವದ ಗ್ರಹಗಳನ್ನು ನಿಷ್ಕ್ರಿಯವಾಗಿಸಿದ್ದಾನೆ. ಸುಖಕ್ಕೆ ಧಕ್ಕೆ ಕೊಡಲು ಸುಪಾರಿ ಪಡೆದವನಂತೆ ರಾಹುವು ಸುಖಸ್ಥಾನದಲ್ಲಿ ಕುಳಿತಿದ್ದಾನೆ. ಅಪಾರ ಹಣ ಗಳಿಸುತ್ತೀರಿ. ಅಪಾರ ಬುದ್ಧಿಶಕ್ತಿ ಪಡೆದು ದೊಡ್ಡ ಕೆಲಸದಲ್ಲಿರುತ್ತೀರಿ. ಆದರೆ ರಾಹು-ಶನೈಶ್ಚರರ ಜುಗಲಬಂದಿಯಿಂದಾಗಿ ಮದುವೆಯ ವಿಚಾರದಲ್ಲಿ ಯಾವುದನ್ನು ಅಗತ್ಯವಾಗಿ ಬೊಗಸೆಯಲ್ಲಿ ಹಿಡಿಯಬೇಕು ಎಂದು ಬಯಸುತ್ತೀರೋ ಅದು ದೂರವಾಗುವುದು ವಿಪರ್ಯಾಸ. ಹಣಕ್ಕೂ ಕತ್ತರಿ ಬೀಳುತ್ತಿರುತ್ತದೆ. ಎಚ್ಚರ ಇರಲಿ. ಸ್ವಯಂವರಪಾರ್ವತಿ ಹಾಗೂ ಬಾಲಗಣಪತಿಯ ಆರಾಧನೆ ಮಾಡಿ. ವಿಷ್ಣುಸಹಸ್ರನಾಮಾವಳಿ ಓದಿ.

ನಾವು ದಂಪತಿ ವಿದೇಶದಲ್ಲಿದ್ದೇವೆ. ಮದುವೆಯಾಗಿ ಆರು ವರ್ಷಗಳಾದರೂ ಮಕ್ಕಳಾಗಿಲ್ಲ. ವೈದ್ಯರ ಪ್ರಕಾರ ಎಲ್ಲವೂ ಸರಿ ಇದೆ. ಆದರೆ ಯಶಸ್ಸಿಲ್ಲ. ಎಲ್ಲರಿಗೂ ಸುಲಭವಾದುದು ಯಾಕೆ ನಮಗೆ ಅಡೆತಡೆ ತರುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಜಾತಕ ಕುಂಡಲಿಗಳನ್ನು ಕಳಿಸಿದ್ದೇನೆ. ಪರಿಹಾರ ತಿಳಿಸುತ್ತೀರಾ?

-ಕಲ್ಪನಾ ಕಲ್ಲಪ್ಪ ಕೊಲ್ಲಾಪುರ

ಸಂತಾನದ ವಿಚಾರದಲ್ಲಿ ಅನೇಕ ಮಹತ್ವದ ವಿಷಯಗಳನ್ನು ತೆರೆದಿಡುವ ಪೂರ್ವಪುಣ್ಯಸ್ಥಾನವು ನಿಮ್ಮಿಬ್ಬರ ಜಾತಕಗಳಲ್ಲೂ ಕೇತು ಹಾಗೂ ರಾಹುಗಳ ದೋಷ ಪಡೆದಿದೆ. ಸೂರ್ಯನನ್ನು ಕಾಡುವುದರ ಮೂಲಕ ಇವು ಸಂತಾನದ ವಿಷಯದಲ್ಲಿ ತಮ್ಮದೇ ಆದ ಕೆಲವು ಅಸಮತೋಲನಗಳನ್ನು ಹರಳುಗಟ್ಟಿಸಿವೆ. ಮುಖ್ಯವಾಗಿ ನಾಗನನ್ನು ಹಳದಿ ಹೂಗಳ ಮೂಲಕ ಆರಾಧಿಸಿ. ದೂರ್ವಾಂಕುರ, ಜೇನುತುಪ್ಪ, ಅರಿಶಿಣ ಬೆರೆಸಿ ಮುಖ್ಯವಾಗಿ ಬಾಲಗಣಪತಿಯ ಆರಾಧನೆ ನಡೆಸಿ. ಈ ರೀತಿಯ ನೈವೇದ್ಯದ ಪುಷ್ಟಿಯನ್ನು ಪ್ರಸಾದವಾಗಿ ಸ್ವೀಕರಿಸಿ.