Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಪ್ರಶ್ನೆ ಪರಿಹಾರ

Thursday, 29.03.2018, 3:02 AM       No Comments

| ಮಹಾಬಲಮೂರ್ತಿ ಕೊಡ್ಲೆಕೆರೆ

ಸಿನಿಮಾಗಳಲ್ಲಿ ನೋಡಿದ್ದೆ. ಕೆಲವು ಸಲ ಎಳೆಯರು ಹೇಳುತ್ತಿದ್ದುದನ್ನು ಕೇಳಿದ್ದೆ. ಆದರೆ ಈಗ ನಾಲ್ಕು ತಿಂಗಳಿನಿಂದ ನನ್ನ ಪತ್ನಿಯ ವಿಷಯದಲ್ಲಿ ಕೆಲವು ವಿಲಕ್ಷಣಗಳನ್ನು ಗಮನಿಸಿ ಗಾಬರಿಯಾಗಿದ್ದೇನೆ. ಸಾಮಾನ್ಯವಾಗಿ ರಾತ್ರಿ ಒಂಬತ್ತು ಘಂಟೆಯ ನಂತರ ಅನವಶ್ಯಕವಾಗಿ ಮುನಿಸು ತೋರಿಸುತ್ತಾಳೆ. ಏಕವಚನದಲ್ಲಿ ಕರೆದು ಬೈಯ್ಯುತ್ತಾಳೆ. ಕೈಯ್ಯಲ್ಲಿರುವುದನ್ನು ಮುಖಕ್ಕೇ ಎಸೆಯುತ್ತಾಳೆ. ನಿಜಕ್ಕೂ ಎಂಥ ಹಿಂಸೆ ಅನುಭವಿಸುತ್ತಿದ್ದೇನೆ ಎಂಬುದು ನನಗೇ ಗೊತ್ತು. ಕೆಲವು ಹೊತ್ತಿನ ನಂತರ ಶಾಂತಳಾಗುತ್ತಾಳೆ. ತಾನೇ ಎಸೆದಿದ್ದನ್ನು ಶಾಂತಿಯಿಂದ ಒಗ್ಗೂಡಸಿ, ಶುಚಿಯಾಗಿಸಿ, ‘ಕ್ಷಮಿಸಿ, ನನಗೇನಾಗುತ್ತಿದೆ ತಿಳಿಯದು’ ಎನ್ನುತ್ತಾಳೆ. ಪರಿಹಾರ ಇದೆಯೆ?

-ಅನಂತಕೃಷ್ಣ ಉಪಾಧ್ಯ ಕಲ್ಲಿಕೋಟೆ, ಕೇರಳ

ಭಾರತೀಯ ಪರಂಪರೆಯಲ್ಲಿ ರಾಹು-ಕೇತು ಎಂಬ ಛಾಯಾಗ್ರಹಗಳ ಕಿತಾಪತಿ ತುಂಬ ದೊಡ್ಡ ಪ್ರಮಾಣದಲ್ಲಿರುತ್ತದೆ. ಮನಸ್ಸಿನ ಸ್ಥಿತಿಗತಿ ಸರ್ರನೆ ಏರುಪೇರಾಗುವುದರ ಜತೆ ಅಸಂಘಟಿತ ಕಾರ್ಯಯೋಜನೆಗಳಿಗೆ ಕೈಹಾಕಿ, ಯಾವುದು ದಾರಿ ಅಲ್ಲವೋ ಅಲ್ಲಿ ಆಗಾಧವಾದುದನ್ನು ಸಾಧಿಸಲು ಮುಂದಾಗುವಂತೆ ಮಾಡುತ್ತದೆ. ಅದರಲ್ಲಿ ಖಂಡಿತ ಸೋಲು ಬಂದಾಗ, ಇವರಿಗಾಗಿಯೇ ಇದ್ದಾರೇನೋ ಎಂಬ ಅಮಾಯಕ ಜನರ ಮೇಲೆ ಸುಲಭವಾಗಿ ತಪ್ಪನ್ನು ಜಾರಿಸಿ ಕೈತೊಳೆದುಕೊಳ್ಳುತ್ತಾರೆ. ಎಲ್ಲಾ ಕಡೆಯಿಂದ ನಿಮ್ಮದು ತಪ್ಪು ಎಂಬುದನ್ನು ತಿಳಿಸಿ ಅವರನ್ನು ನಿರುತ್ತರಗೊಳಿಸಿದಾಗ, ಅಪಾಯಕಾರಿಯಾದ ಮುಳ್ಳುಹಂದಿಯಂತೆ ಮುಳ್ಳುಗಳನ್ನೆತ್ತಿ ಎಸೆದು ಪಾರಾಗಲು ಬಯಸುತ್ತಾರೆ. ಖಿನ್ನತೆಯಿಂದ ದೂರವಾಗಲು ಸಾಧ್ಯವಿರದೆ ಅಳುತ್ತಾರೆ. ಹಲವಾರು ರೀತಿ ಇದೆ. ನಿಮ್ಮ ಮನೆಯವರದು ರಾಹುವಿನ ಆಘಾತದ ದಶಾಕಾಲದಲ್ಲಿ ಚಂದ್ರ ಸೂರ್ಯರ ಜತೆಗಿನ ಬೆಸೆತಗಳಿಂದಾಗಿ ಉಂಟಾದ ವಿಷಯ ಸ್ಥಿತಿ. ರಾಹುದೋಷ ನಿವಾರಣೆಗೆ ರಾಹುಪೀಡಾ ನಿವಾರಣಾ ಸ್ತೋತ್ರ, ಸುಖಸ್ಥಾನದ ಅಧೀಶ ಶುಕ್ರನ ಬಲಸಂವರ್ಧನೆಗಾಗಿ ಶ್ರೀ ಪ್ರತ್ಯಂಗಿರಾ ಸಹಸ್ರ ನಾಮಾವಳಿ ಪಠಿಸಲು ಹೇಳಿ.

ನಾನು ಪ್ರೀತಿಸುತ್ತಿರುವವರನ್ನು ಮದುವೆಯಾಗಲು ಸಾಧ್ಯವಾಗಬಹುದೆ? ಅನ್ಯಜಾತಿಯ ಹುಡುಗ ಎಂಬ ಕಾರಣಕ್ಕೆ ಮನೆಯಲ್ಲಿ ಒಪ್ಪಿಗೆ ಇಲ್ಲ. ಏಳು ವರ್ಷಗಳಿಂದ ಕಾಯುತ್ತಿದ್ದೇನೆ. ಮಾನಸಿಕ ತೊಳಲಾಟ ದೇವರಿಗೇ ಪ್ರೀತಿ. ಪರಿಹಾರ ಇದೆಯೆ?

-ಗಿರಿಜಾ ಎ.ಜಿ. ಬೀದರ್

ಸಾಮಾನ್ಯವಾಗಿ ಶನೈಶ್ಚರನಿಂದ ತೊಂದರೆ ಬರುತ್ತದೆ. ಆದರೆ ನಿಮ್ಮ ಜಾತಕದಲ್ಲಿ ಯೋಗಕಾರಕ ಮಂಗಳನೇ ಶನೈಶ್ಚರನ ಕೃಪೆಯನ್ನು ಹಿಚುಕಿ ಚೆಲ್ಲಿದ್ದಾನೆ. ನೀಚ ಚಂದ್ರ, ನೀಚ ಕುಜ ಪರಿವರ್ತನಯೋಗದಲ್ಲಿದ್ದು ನೀಚಗ್ರಹಗಳಿಗೆ ನೀಚಭಂಗವಾಗದೆ ಮನಸ್ಸು, ವರ್ಚಸ್ಸು, ಚೈತನ್ಯ ಇತ್ಯಾದಿ ಎಲ್ಲವೂ ತಪ್ಪು ಕಾರಣಗಳಿಗಾಗಿ ಸೂಕ್ತ ದಿಕ್ಕನ್ನು ತಲುಪಲು ಬಿಡುತ್ತಿಲ್ಲ. ಗಟ್ಟಿ ನಿರ್ಧಾರಕ್ಕೆ ಬಂದಾದ ಮೇಲೆ ಹೊಯ್ದಾಡದಿರಿ. ಯಾರನ್ನೇ ಮದುವೆಯಾದಾಗಲೂ ತಾಳ್ಮೆ, ಶಾಂತ ರೀತಿಯ ಮಾತು ಮುಖ್ಯ. ಕೇತುಶಾಂತಿಗಾಗಿ ಗಣೇಶನನ್ನು ಸ್ತುತಿಸಿ.

ಮನೆಯಲ್ಲಿ ನನ್ನ ಪತಿ, ನಾನು, ಇಬ್ಬರು ಮಕ್ಕಳು (ಒಬ್ಬ ಮಗ, ಇನ್ನೊಬ್ಬಳು ಮಗಳು) ಹೀಗೆ ನಾಲ್ಕು ಜನ ಸದಸ್ಯರು. ಆದರೆ ಒಬ್ಬೊಬ್ಬರು ಒಂದು ರೀತಿ. ಮನೆಯವರದು ದೊಡ್ಡ ಕೆಲಸ. ಅವರಿಗೆ ಬಿಡುವಿಲ್ಲ. ವೈಯಕ್ತಿಕ ಬದುಕು ಶೂನ್ಯ. ಮಗ, ಮಗಳದು ಅವರವರದೇ ಜಗತ್ತು. ಎಲ್ಲಿದ್ದೇನೆ ಎಂಬುದೇ ಅರ್ಥವಾಗುತ್ತಿಲ್ಲ. ಸುಮ್ಮನೆ ಗಂಜಿ, ಸಾರು ತಿಂದುಂಡರೂ ಶಾಂತಿ ಇರುತ್ತಿತ್ತು ಎನಿಸುತ್ತದೆ. ಎಲ್ಲಾದರೂ ಆಶ್ರಮ ಸೇರಿ ಸನ್ಯಾಸಿನಿಯಾಗೋಣ ಎಂದನಿಸುತ್ತಿದೆ. ಮತ್ತೆ ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. ಕುಂಡಲಿಗಳನ್ನು ಕಳಿಸಿದ್ದೇನೆ. ಪರಿಹಾರ ಇದೆಯೆ?

-ಕಮಲಕುಮಾರಿ ನಿಚ್ಚಾನಿ ಬೆಂಗಳೂರು

ನಿಮ್ಮ ಮನೆಯ ಒಳಗಿನ ಶಾಂತಿ ಸಮಾಧಾನಗಳನ್ನು ನಿಮ್ಮೆಲ್ಲರ ಜಾತಕದಲ್ಲಿರುವ ಸರ್ಪದೋಷ ಹೆಡೆಯಿಂದ ಬಡಿದು ನಿತ್ರಾಣಗೊಳಿಸುತ್ತಿದೆ. ದುರ್ಗಾ ಸಹಸ್ರನಾಮಾವಳಿ ಓದಿ. ಅನಿಷ್ಟನಿವಾರಕ ರಾಹು (ಸರ್ಪ) ಸಂಪ್ರೀತ ವಿಷ್ಣು ಮಂತ್ರಾವಳಿ, ಸಂವರ್ಧನ ಮಾರುತಿ ಸಿದ್ಧಿ ಪ್ರಭಾವಳಿ ಮಂತ್ರಭಾಗವನ್ನು ಪಠಿಸಿ. ದರಿದ್ರವಲ್ಲದ ದಾರಿದ್ರ್ಯ ನೀರಸ ಕಾಲಛೇದನಗಳಿಗೆ ಇದರಿಂದ ದಾರಿ ಇದೆ.

ಸೇವಾವಧಿಯ ಹಿರಿತನವಿದ್ದೂ ನಾನಿರುವ ಕೆಲಸದ ಸ್ಥಳದಲ್ಲಿ ಪ್ರಮೋಷನ್ ನೀಡಿಲ್ಲ. ನಾನು ಈ ವಿಚಾರವಾಗಿ ಕಾಯ್ದೆಯ ರೀತ್ಯ ಕ್ರಮ ಜರುಗಿಸಬೇಕೆಂದುಕೊಂಡಿದ್ದೇನೆ. ಜಾತಿಯ ಆಧಾರದಿಂದಾಗಲೀ, ಹಣದ ವಿಚಾರದಲ್ಲಿ ಓಲೈಸುವುದಾಗಲೀ ಸಾಧ್ಯವಾಗುತ್ತಿಲ್ಲ. ಬದುಕಿನಲ್ಲಿ ಬರೀ ವೇದನೆ ಅನುಭವಿಸಿದ್ದೇ ಆಯ್ತು. ಪರಿಹಾರ ತಿಳಿಸಿ.

-ವೇದವ್ಯಾಸ ಜಕ್ಕಣಾಚಾರಿ ಹಟ್ಟಿ ಗೋಲ್ಡ್​ಫೀಲ್ಡ್

ನಿಮ್ಮ ಜಾತಕದಲ್ಲಿ ಕಾಯ್ದೆ ಕಾನೂನಿನಡಿ ಗೆಲ್ಲಲು ಅವಕಾಶಗಳಿವೆ. ನ್ಯಾಯ ಸಿಗಬೇಕಾದರೂ ಒಂದು ವಿನಯ ಬೇಕು. ಸತ್ಯದ ದಾರಿಯಲ್ಲಿದ್ದೇನೆ, ಗೆಲುವು ಬರಲೇಬೇಕು ಎಂದು ಅವಸರ, ಆಕ್ರೋಶ ಮಾಡದಿರಿ. ಸೂಕ್ತ ನ್ಯಾಯವಾದಿಗಳನ್ನು ಸಂರ್ಪಸಿ. ಕೇತುದೋಷದಿಂದಾಗಿ ಸುಲಭವಾಗಿ ಶೋಷಣೆಗೆ ಸಿಲುಕುವ ಸಾಧ್ಯತೆಗಳು ಹೇರಳ. ಹಣ ಎತ್ತುವವರು ಇರುತ್ತಾರೆ. ನಿಮಗಿಂತ ಹಿರಿಯ ಮಹಿಳಾ ನ್ಯಾಯವಾದಿಗಳು ಬೆಂಬಲಕ್ಕೆ ಬರಬಹುದು. ನಿಮಗೆ ಸುಲಭದ, ಹೆಚ್ಚಿನ ಶುಲ್ಕದ ಭಾರವಿರದಂತೆ ನ್ಯಾಯ ಒದಗಿಸಿಕೊಡಬಲ್ಲರು. ನೀಲಿ ಬಣ್ಣದ ಉಡುಪು ಧರಿಸದಿರಿ. ರಾಹು-ಕೇತು ಸ್ತೋತ್ರ ಪಠಿಸಿ.

ನಮ್ಮ ಮಗ ಅನಿರುದ್ಧನ ಜಾತಕ ಕುಂಡಲಿ ಕಳಿಸಿದ್ದೇನೆ. ಹುಣ್ಣಿಮೆಯಂದು ನಿಶ್ಚಿತ. (ಕೆಲವು ಸಲ ಅಮಾವಾಸ್ಯೆಯಂದು ಸಂಭವಿಸಿದ್ದೂ ಇದೆ.) ರಾತ್ರಿ ನಿದ್ದೆಗಣ್ಣಿನಲ್ಲಿ (ನಾವು ನಿದ್ರಿಸಿರುತ್ತೇವೆ. ನಮಗೆ ತಿಳಿಯುವುದಿಲ್ಲ.) ಅವನಿಗೇ ಅರಿವಿರದಂತೆ ಕಾರು ಓಡಾಡಿಸಿಕೊಂಡು ತಿರುಗಿ ಬಂದು ಮಲಗಿರುತ್ತಾನೆ. ಮನೆಯ ಹೊರವಲಯದಲ್ಲಿ (ಗರಾಜ್​ನಲ್ಲಿ ಅಲ್ಲ) ಕಾರು ಇರುತ್ತದೆ. ಕೀ ಅವನ ಹಾಸಿಗೆಯಲ್ಲಿ ಸಿಗುತ್ತದೆ. ತನಗೇನೂ ತಿಳಿಯದು ಎನ್ನುತ್ತಾನೆ. ಇದು ಏನು ತೊಂದರೆ? ದಿಗಿಲು ಬಿದ್ದಿದ್ದೇವೆ.

-ಮಂಜಪ್ಪ ಬಿಡದಿ ಶುಂಠಿಕೊಪ್ಪ

ವೈದ್ಯಕೀಯ ಚಿಕಿತ್ಸೆಗೆ ಕೂಡ ಹೋಗಬಹುದು. ಕ್ಷೀಣ ಚಂದ್ರ, ಉದ್ರೇಕಿಸುವ ಶನೈಶ್ಚರ, ವಿಷ ತುಂಬುವ ರಾಹು, ಉರಿಯೆಬ್ಬಿಸುತ್ತಿರುವ ಸೂರ್ಯರ ಸಂಯೋಜನೆಯನ್ನು ಕುಜ ವೀಕ್ಷಿಸಿದ್ದಾನೆ. ಕುಜನನ್ನು ಶನೈಶ್ಚರ ವೀಕ್ಷಿಸುತ್ತಿದ್ದಾನೆ. ಈ ಎಲ್ಲಾ ದೃಷ್ಟಿ ತಿಕ್ಕಾಟ, ಸಂಯೋಜನೆಗಳು ನಿಮ್ಮ ಮಗನಿಗೆ ಪ್ರಸ್ತುತದಲ್ಲಿ ಹೆಚ್ಚಿನ ತೊಂದರೆ ತಂದುಕೊಡುತ್ತಿವೆ. ಸ್ವಲ್ಪ ಎಚ್ಚರ ಬೇಕು. ಇದು ಸೂಕ್ಷ್ಮ ಕಾಲಘಟ್ಟ. ಒಮ್ಮೆ ನೀವು ಮುಖತಃ ಕಂಡಲ್ಲಿ ಕೆಲವು ವಿಚಾರಗಳನ್ನು ತಿಳಿಸುವುದು ಸುಲಭ. ಮಗನನ್ನು ಮೊದಲ ಸಲ ಕರೆತರಬೇಡಿ. ಸುದರ್ಶನ, ರವಿ, ಶನೈಶ್ಚರ, ಕುಜ ಅಷ್ಟೋತ್ತರ ಪಠಿಸಿ. ಬೇಕಿರದ ಜನರನ್ನು ಹತ್ತಿರಕ್ಕೆ ಸೇರಿಸಬಾರದು. ಮುಂದಿನ ಮೂರು ತಿಂಗಳು ರಾತ್ರಿ ಪಾಳಿಯ ಸಹಾಯಕರಿದ್ದರೆ ಕ್ಷೇಮ.

ನಮ್ಮ ಮಗ ಬಿಇ ಮಾಡಿದ್ದಾನೆ. ಒಂದು ದೊಡ್ಡ ಆಫರ್ ಬಂತು ಎಂದು ತನ್ನ ವಿಷಯದ್ದಲ್ಲದ ಬೇರೊಂದು ವಿಷಯದ ಜತೆ ಕೊಂಡಿ ಕೂಡಿಕೊಂಡ ಕೆಲಸಕ್ಕೆ ಸೇರಿದ. ನಾಲ್ಕು ವರ್ಷ ಕಳೆದವು. ಆದರೆ ಈ ಕಂಪನಿಯವರು ಕೆಲಸದ ಅಸೈನ್​ವೆುಂಟ್ ಮುಗಿಯಿತು ಎಂದು ನನ್ನ ಮಗನನ್ನು ಕೆಲಸದಿಂದ ತೆಗೆದರು. ಕಳೆದ 10 ತಿಂಗಳಿನಿಂದ ಕೆಲಸವಿಲ್ಲದೆ ಮಂಕಾಗಿದ್ದಾನೆ. ನಮ್ಮ ವೇದನೆ ಅಪಾರ. ಪರಿಹಾರ ಏನಿದೆ?

-ಪ್ರೇಮಲತಾ ಸದಾಶಿವರಾವ್ ಉಡುಪಿ

ಎತ್ತರಕ್ಕೆ ಏರಿಸಿ ಕೆಳಗಿಳಿಸುವ ರಾಹುಗ್ರಹ ತನ್ನ ದುಷ್ಟತನ ಮಾಡಿ ಮುಗಿಸಿದ್ದಾನೆ. ಈಗ ನಿಮ್ಮ ಮಗ ತಾಳ್ಮೆಯಿಂದಲೇ ಜೀವನದ ಭದ್ರತೆಯ ಬಗೆಗೆ ಯೋಚಿಸಬೇಕಾಗಿದೆ. ರಾಹುವಿನ ಸಂಬಂಧ ಕೆಂಪು ಹೂಗಳಿಗೆ ಹಸುವಿನ ತುಪ್ಪ ಸವರಿ, ನಾಗದೇವರಿಗೆ ಅರ್ಪಿಸಬೇಕು. ನಾಗರ ಆರಾಧನೆಯ ಜತೆ ಷಣ್ಮುಖನನ್ನೂ ಆರಾಧಿಸಬೇಕು. ಪ್ರತಿ ಗುರುವಾರ ಅಥವಾ ಶನಿವಾರಕ್ಕೊಮ್ಮೆ ರಾಹುವಿನ ತೃಪ್ತಿಗಾಗಿ ಉದ್ದಿನ ಅನ್ನದ ನೈವೇದ್ಯ ಕೂಡ ಮಾಡಿ. ಈಗ ಸದ್ಯ ಕೆಲವು ಹೊಂದಾಣಿಕೆಗಳೊಂದಿಗೆ ದೊರಕಬಹುದಾದ (ಪ್ರಧಾನವಾದ ಸಂಬಳ, ವರ್ಚಸ್ಸು ಹೆಚ್ಚಿಸದಿದ್ದರೂ) ಕೆಲಸಕ್ಕೆ ಸೇರಬೇಕು. 2018ರ ನವೆಂಬರ್ ಹೊತ್ತಿಗೆ ರಾಹು-ಬೃಹಸ್ಪತಿ ಸಂಧಿ ಶಾಂತಿಹೋಮ ಆಗಲೇಬೇಕು. ಚಿಕ್ಕ ಬಜೆಟ್​ನಲ್ಲಿ ಪೂರೈಸಿ. ನಂತರ ಬರುವ ಗುರುದಶಾಕಾಲದಲ್ಲಿ ಉತ್ತಮ ಸಂಬಳದೊಂದಿಗೆ ವಿದೇಶಕ್ಕೆ ಕೂಡ ಕಳಿಸಬಹುದಾಗಿದೆ.

Leave a Reply

Your email address will not be published. Required fields are marked *

Back To Top