Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

 ಪ್ರಶ್ನೆ ಪರಿಹಾರ

Thursday, 22.02.2018, 3:02 AM       No Comments

| ಮಹಾಬಲಮೂರ್ತಿ ಕೊಡ್ಲೆಕೆರೆ

# ಗುರೂಜಿ, ನನಗೆ ಮಾತಿನ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುವುದಿಲ್ಲ. ಯಾರನ್ನೂ ನೋಯಿಸಬೇಕು ಎಂದು ಹೋಗುವುದಿಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಬಾಧೆ ಕೊಡುತ್ತಾರೆ. ಬಂದು ಪೀಡಿಸಿ ಮಾತು ಪಡೆಯುತ್ತಾರೆ. ಈಡೇರಿಸುವುದು ಅನಿವಾರ್ಯವಾಗುತ್ತದೆ. ಹಣ ಕಳೆದುಕೊಂಡಿದ್ದೇನೆ. ಪರಿಹಾರ ಇದೆಯೆ?

| ರಾಜಾನಂದ ಜಾಗಣ್ಣ ಕಿರವತ್ತಿ, ಹುಬ್ಬಳ್ಳಿ

ನಿಮ್ಮ ಜಾತಕದಲ್ಲಿನ ಕೇತು ಹಾಗೂ ರಾಹುಗಳು ಪೀಡೆ ತರುತ್ತಿದ್ದಾರೆ. ಮಾತನಾಡುವುದನ್ನು ನಿಯಂತ್ರಿಸಲಾಗದು. ಆದರೂ ಆಡಬೇಕಾದುದನ್ನು ಆಡುವಾಗ ಸಾಧ್ಯವಿರದುದನ್ನು, ಮುಖ್ಯವಾಗಿ ಹಣಕಾಸಿನ ವಿಚಾರವಾಗಿ ಯೋಚಿಸದೆ ಒಪ್ಪುವುದನ್ನು ಮಾಡಬೇಡಿ. ‘ಇಲ್ಲ’ ಎನ್ನಲು ಕಲಿಯಿರಿ. ನರಸಿಂಹ ಕವಚ ಎಂಬ ಮಂತ್ರಭಾಗವನ್ನು ಓದಿ, ರಾಹುವಿನ ಕಾರಣವಾಗಿ ಉಲ್ಬಣಗೊಳ್ಳುವ ಆತುರವನ್ನು ನಿಯಂತ್ರಿಸಿ. ನಿಮಗೆ ಭಾಗ್ಯಕಾರಕನಾದ ಶನೈಶ್ಚರನನ್ನು ಲಾಭಾಧಿಪತಿಯಾದ ಕುಜನು ನಿಯಂತ್ರಿಸಿದ್ದಾನೆ. ಕುಜನನ್ನು ಶನೈಶ್ಚರ ನಿಯಂತ್ರಿಸಿದ್ದಾನೆ. ಹೀಗಾಗಿ ಆತುರದಿಂದಾಗಿ ಕಳೆದುಕೊಳ್ಳುತ್ತೀರಿ, ಪರಿತಪಿಸುತ್ತೀರಿ. ಮನಸ್ಸನ್ನು ಸುಲಭವಾಗಿ ಸ್ತಿಮಿತದಲ್ಲಿಡಲು ಮಹಾಭಾರತ ಕಥೆಯನ್ನು ಶಾಂತವಾಗಿ ಓದಿ. ದುರ್ಗೆಯನ್ನು ಆರಾಧಿಸಿ.

# ದಿವ್ಯ ತೇಜಸ್ಸಿನ ಒಬ್ಬ ವ್ಯಕ್ತಿಯು ಯಾವಾಗಲೂ ಕನಸಿನಲ್ಲಿ ಕಾಣಿಸಿಕೊಳ್ಳುತ್ತ, ಇದು ಸರಿಯಲ್ಲ, ಇದು ಸರಿಯಲ್ಲ ಎಂದು ಹೇಳುತ್ತಿರುತ್ತಾನೆ. ಮೊದಲಿಗೆ ಎಲ್ಲವೂ ಸ್ನೇಹಶೀಲ ವಾತಾವರಣದಲ್ಲಿದ್ದಂತೆ ಇರುತ್ತದೆ. ನಂತರ ವಿಕಾರ ಮುಖ ಮಾಡಿಕೊಳ್ಳುತ್ತಾನೆ. ಭಯದಿಂದ ಕಂಗಾಲಾದಾಗ ಎಚ್ಚರವಾಗುತ್ತದೆ. ಒಮ್ಮೆಗೇ ಸಮಾಧಾನವಾದರೂ ಒಂದರ್ಧ ಘಂಟೆ ಭಯವೆನಿಸುತ್ತದೆ. ಯಾವ ತೊಂದರೆ ಇದು? ಪರಿಹಾರ ಏನು?

| ಉಮಾಕಾಂತ ಶ್ರೀನಾಥಯ್ಯ ಮೊಳಕಾಲ್ಮೂರು

ಸದ್ಯದ ಕಾಲಘಟ್ಟ ರಾಹುವಿನಿಂದ ಆವೃತವಾದ ಚಂದ್ರನ ಕಾಲಘಟ್ಟ. ರವಿ ಬುಧರೂ ಜೊತೆಗಿದ್ದು ಯೋಗವನ್ನೂ, ದೌರ್ಬಲ್ಯವನ್ನೂ ರಾಹುಚಂದ್ರರ ಜತೆ ಹೆಣೆದಿದ್ದಾರೆ. ಆದರೆ ಯೋಗದ ಶಕ್ತಿಯು ವಿಷಮಯವಾದ ರಾಹುವಿನ ಹೆಡೆಯಲ್ಲಿ ಬಂಧಿತವಾಗಿದೆ. ಪ್ರತಿ ಗುರುವಾರ ಒಂದು ಮುಷ್ಟಿ ಅಕ್ಕಿ, ಒಂದು ಮುಷ್ಟಿ ಉದ್ದಿನ ಬೇಳೆ, 7 ರೂಪಾಯಿಗಳೊಂದಿಗೆ ಪ್ರತ್ಯೇಕ ಬಾಳೆದೊನ್ನೆಯಲ್ಲಿರಿಸಿ ದಾನ ಕೊಡಿ. ಮುಂದಿನ ನೂರು ವಾರಗಳ ಕಾಲ ಇದನ್ನು ಪೂರೈಸಿ. ಹೆದರಬೇಡಿ, ಕಾಲಭೈರವ ಅಷ್ಟೋತ್ತರವನ್ನು ಪಠಿಸಿ. ಕ್ಷೇಮ.

# ಎಲ್ಲವೂ ಸರಿಯಾಗಿಯೇ ಇತ್ತು ಎಂದಾಗ, ನಮ್ಮ ವ್ಯಾಪಾರ (ಗಿಫ್ಟ್ ಐಟಮ್್ಸ)ದ ಸ್ಥಳವನ್ನು ನಮ್ಮ ಮಾಲೀಕರು (ಬಾಡಿಗೆಗೆ ಕೊಟ್ಟವರು) ಬಿಡಬೇಕು ಎಂದು ಆಗ್ರಹಿಸಿದರು. ನಮ್ಮದು ಚೆನ್ನಾಗಿ ನಡೆಯುತ್ತಿರುವುದರಿಂದ ಅವರಿಗೆ ತಾವೇ ಅದನ್ನು ನಡೆಸೋಣ ಎಂಬ ಹುನ್ನಾರ. ನಮಗೆ ಬಿಡಲೇಬೇಕಾದ ಸಂದರ್ಭ ಬಂತು. ಕಾಯ್ದೆ ಕಾನೂನು, ಹೋರಾಟ ಇತ್ಯಾದಿ ಒಂದು ತಲೆನೋವು ಎಂದುಕೊಂಡು ಸ್ಥಳ ಬಿಟ್ಟೆವು. ಈಗ ಹೊಸ ಸ್ಥಳದಲ್ಲಿ ವ್ಯಾಪಾರ ಕುಸಿದಿದೆ. ಏನು ಮಾಡುವುದೆಂದು ತಿಳಿಯುತ್ತಿಲ್ಲ. ಪರಿಹಾರ ತಿಳಿಸುವಿರಾ?

| ಕುಸುಮಾ ಶಂಕರನಾರಾಯಣ ಕಾಂಚಿಪುರ

ನಿಮ್ಮ ಸ್ಥಿತಿ ನಿಜಕ್ಕೂ ದುಃಖಕರ. ನಿಮ್ಮ ಇಬ್ಬರ ಜಾತಕದಲ್ಲೂ (ಸತಿಪತಿಗಳು)ಈಗ ಶನೈಶ್ಚರನ ಕಾಟವಿದೆ. ಶನೈಶ್ಚರ ನಿಮ್ಮ ಜಾತಕದಲ್ಲಿ ಸುಖಸ್ಥಾನ ಆಕ್ರಮಿಸಿದ್ದಾನೆ. ನಿಮ್ಮ ಮನೆಯವರ ಜಾತಕದಲ್ಲಿ ಕುಜನ ಜತೆ ಕುಜನ ಮನೆಯಲ್ಲಿಯೇ ಇದ್ದಾನೆ. ಇವು ಕ್ರಮವಾಗಿ ಶನಿಕಾಟದ ಸಂದರ್ಭದಲ್ಲಿ ಚಂದ್ರನ ಹೊಳಪನ್ನು ಕರಗಿಸಿದ್ದಾನೆ. ಹೀಗಾಗಿ ಪ್ರಸ್ತುತದ ಶನಿಕಾಟ ನಿವಾರಣೆ, ಸವಕಳಿಯಾದ ಸುಖವನ್ನು ಗಟ್ಟಿಗೊಳಿಸುವ ವಿಚಾರವಾಗಿ ಶನೈಶ್ಚರ, ಕುಜ, ಚಂದ್ರ ಸಂಘರ್ಷ ದಮನಕ್ಕಾಗಿ ಶ್ರೀರಾಮರಕ್ಷಾ ಸ್ತೋತ್ರ ಓದಿ. 27 ಬಾರಿ ಮಂಗಳ ಚಂಡಿಕಾ ಜಪ ಮಾಡಿ. ಮನೆಯವರು ಪ್ರತಿದಿನ ವಿಷ್ಣು ಸಹಸ್ರನಾಮಾವಳಿ ಓದಿ. ಜತೆಗೆ ನಿಮ್ಮಿಂದ ಕುಬೇರ ಅಷ್ಟೋತ್ತರ ನಾಮಾವಳಿ ಓದಲ್ಪಡಲಿ.

# ಪದೇಪದೆ ನಮ್ಮ ಮಗನು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾನೆ. ಈಗ ಹದಿನೈದು ದಿನಗಳ ಹಿಂದೆ ಮಂಚದಿಂದ ಕೆಳಕ್ಕೆ ಬಿದ್ದು ಕಾಲಿಗೆ ಪ್ರ್ಯಾಕ್ಚರ್ ಆಗಿದೆ. ಎಲ್ಲ ವಿಚಾರಗಳೂ ಭಯವನ್ನು ಹುಟ್ಟಿಸುತ್ತಿರುತ್ತವೆ. ಸಮಾಧಾನ ಮಾಡಿಕೊಳ್ಳೋಣ ಎಂದರೆ ಸಾಧ್ಯವಾಗದು. ನಮ್ಮ ಯಜಮಾನರು ಒಂದು ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್. ಅವರಿಗೆ ಸಮಯದ ಅಭಾವ. ನನಗೆ ಒತ್ತಡ. ಏನು ಪರಿಹಾರ?

| ಸ್ವಪ್ನ ಬಿಳಿವಳ್ಳಿ ಗಾಝಿಯಾಬಾದ್

ಹಣಕಾಸಿನ ವಿಚಾರದಲ್ಲಿ ನಿಮಗೆ ತೊಂದರೆಗಳು ಏಳಲಾರವು. ಆದರೆ ಸದ್ಯ ನಿಮ್ಮ ಮೂವರ ಜಾತಕಗಳಲ್ಲೂ ಬಾಧಕ ಗ್ರಹಗಳ ದಶಾಕಾಲವಿದ್ದು ಮಗನಿಗೆ ರಾಹು ದಶಾದಲ್ಲೀಗ ಶನಿಕಾಟ ಏರಿದೆ. ಹುಟ್ಟಿನ ಸಮಯದಲ್ಲಿ ಐದು ಗ್ರಹಗಳ ಪ್ರಭಾವ ಜನ್ಮಭಾವಕ್ಕೆ (ಅಪರಿಮಿತ ಉತ್ಸಾಹ, ಸರ್ರೆಂದು ಕುಪ್ಪಳಿಸುವ ತಹತಹ) ಸಮ್ಮಿಳಿತವಾಗಿದೆ. ಲೌಕಿಕದಲ್ಲಿ ವೈದ್ಯರ ಜತೆಯೂ ಸಲಹೆ ಪಡೆಯಿರಿ. ನವಗ್ರಹ ಪೀಡಾ ನಿವಾರಣಾ ಸ್ತೋತ್ರ (7 ಬಾರಿ ಓದಿ. 20 ನಿಮಿಷಗಳು ಸಾಕು.) ಓದಬೇಕು. ಹನುಮಾನ್ ಚಾಲೀಸಾ ಓದಿ. ತುಳಸಿದಳಗಳಿಗೆ ರಕ್ತಚಂದನ ಸವರಿ, ವಿಷ್ಣು ಅಥವಾ ನರಸಿಂಹನ ವಿಗ್ರಹದಡಿ ಪಾದಕ್ಕೆ ಸಮರ್ಪಿಸಿ. ಏಕಾಗ್ರತೆಯಿಂದ ಎಲ್ಲದರಲ್ಲೂ ತೊಡಗಿಕೊಳ್ಳಲು ನಿಧಾನವಾಗಿ, ಮೃದುವಾಗಿ ಅವನನ್ನು ಓಲೈಸಿ ಅವಕಾಶ ಮಾಡಿಕೊಡಿ. ಒಂದು ಸವಾಲನ್ನು ಎದುರಿಸುವ ಸಂದರ್ಭವಿದೆ. ಮನೆಯವರೂ ನಿಮ್ಮ ಜತೆ ಕೈಜೋಡಿಸಲಿ. ನಿಧಾನವಾಗಿ ಒಂದು ಹಿಡಿತ ಸಾಧ್ಯ.

# ಊರು ಕಾಸರಗೋಡು ಕಡೆಯ ಹಳ್ಳಿ. ಊರಿಗೆ ಹೋಗಿದ್ದಾಗ ಜಾತಕವನ್ನು ಒಬ್ಬರಿಗೆ ತೋರಿಸಿದ್ದೆ. ಕುಜನು ಪೀಡಾಕಾರಕ ಎಂದರು. ಕುಜನ ಕುರಿತಾಗಿ ಕೆಲವು ಮಂತ್ರಪಠಣ ನಡೆದಿದೆ. ನಮ್ಮ ಯಜಮಾನರಿಗೆ ನಿವೃತ್ತಿಯಾಗಿ ಈಗ ಎರಡು ವರ್ಷ. ನಿರಂತರವಾದ ಉತ್ಸಾಹದ ಚಿಲುಮೆಯಾಗಿದ್ದವರು ಪುಪ್ಪುಸದ ಬಾಧೆಗೊಳಗಾಗಿ ಈಗ ನಿರಂತರವಾಗಿ ಆಕ್ಸಿಜನ್ ಸರಬರಾಜಾಗುವ ಉಪಕರಣದೊಂದಿಗೇ ಇರಬೇಕಾಗುತ್ತದೆ. ಕಲ್ನಾರು ಧೂಳಿನ ಪ್ರಭಾವದಿಂದ ಈ ಸ್ಥಿತಿ ಎಂದು ವೈದ್ಯರು ತಿಳಿಸಿದ್ದು, ಒಟ್ಟಿನಲ್ಲಿ ಎಲ್ಲವೂ ಎಷ್ಟು ಸುರಕ್ಷಿತ ಎಂಬುದು ತಿಳಿಯುತ್ತಿಲ್ಲ. ಇವರ ಆರೋಗ್ಯದ ಸ್ಥಿತಿ ಸುಧಾರಿಸಬಹುದೆ? ಮಕ್ಕಳು ಚಿಕ್ಕವರು. ಪರಿಹಾರ ಹೇಗೆ?

| ಪೂರ್ಣಿಮಾ ಕೆ.ಪಿ. ಸಾಗರ (ಉತ್ತರ ಪ್ರದೇಶ)

ಪರಿಣಾಮ, ಪರಿಹಾರ ಇತ್ಯಾದಿಗಳೆಲ್ಲ ಲೌಕಿಕದ ಘಟ್ಟದಲ್ಲಿ ಸಂಭವಿಸಿದೆ, ನಡೆಯುತ್ತದೆ. ವೈದ್ಯರ ಅಭಿಪ್ರಾಯದಂತೆ ಆಕ್ಸಿಜನ್ ಸರಬರಾಜು ಅಬಾಧಿತವಾಗಿರುವುದು ಸರಿಯೇ ಇದೆ. 2019ರ ಅಕ್ಟೋಬರ್ ಭಾಗದಲ್ಲಿ ಸ್ವಲ್ಪ ಎಚ್ಚರಿಕೆ ಬೇಕು. ನೀವು (ಸೂಕ್ತವಾದವರ ಬಳಿ) ಶುಕ್ರಾದಿತ್ಯ ಸಂಧಿ ಶಾಂತಿಯನ್ನು ಹಾಗೂ ಮನೆಯವರು (ಈಗಲೂ ನಡೆದರೆ ತಪ್ಪೇನಿಲ್ಲ. ನಿಮಗೆ 2019 ಬರಬೇಕು) ವನಸ್ಪತಿ ಶಾಂತಿ, ಧನ್ವಂತರಿ ಹೋಮ ಪೂರೈಸಿಕೊಳ್ಳುವುದು ಸೂಕ್ತ. ಪ್ರತಿದಿನ ರುದ್ರಪಠಣ, ಚಮಕ ಪಠಣ ಅಥವಾ ಶ್ರವಣ ಸೂಕ್ತ. ಓಂಕಾರ, ಹ್ರೀಂಕಾರಗಳನ್ನೂ ಮನೆಯವರು ಕೇಳಿಸಿಕೊಳ್ಳಲಿ. ನೀವು ಚಂಡಿಕಾಳನ್ನು ಆರಾಧಿಸಿ.

# ಪ್ರತಿ ರಾತ್ರಿ ಎಚ್ಚರವಾಗುವ ಮುನ್ನ ಕನಸಿನಲ್ಲಿ ಒಂದು ಬಿಳಿಯ ಬಣ್ಣದ ಸರ್ಪದ ಹೆಡೆ ಕಾಣಿಸಿಕೊಂಡಂತಾಗಿ ಅದು ಬಾಲವನ್ನು ಮೇಲೆತ್ತಲಾಗದೆ ನೋವನ್ನು ಅನುಭವಿಸಿದಂತೆ ಅನಿಸುತ್ತದೆ. ಸರ್ಪವನ್ನು ಮೇಲೆತ್ತಲು ನನಗೇ ತಿಳಿಯದ ಎಲ್ಲಿಂದಲೋ ಏನೋ ಒಂದಿಷ್ಟು ಸಲಕರಣಗಳನ್ನು ತಂದು ರಾಶಿ ಮಾಡಿಕೊಳ್ಳುತ್ತಿರುವಾಗ ಯಾವುದೂ ಸೂಕ್ತವಾಗಿ ಮುಗಿದಂತಾಗದೆ ಅವ್ಯವಸ್ಥೆ ಆಗುತ್ತಿರುವಾಗ ಎಚ್ಚರವಾಗುತ್ತದೆ. ಒಂದೇ ರೀತಿಯ ಸ್ವಪ್ನ. ನನಗೆ ಮದುವೆ ಆಗಿಲ್ಲ. ಮದುವೆಯ ಪ್ರಯತ್ನಗಳೂ ಸೋಲುತ್ತಿವೆ. ಇದೊಂದು ಸ್ವಪ್ನದ ಬಾಧೆ. ಇದನ್ನು ನಿರ್ಲಕ್ಷಿಸಬಹುದೆ?

| ಶ್ರೀನಿವಾಸ ಚಕ್ರವರ್ತಿ ಬೆಳಗಾವಿ

ನಿರ್ಲಕ್ಷಿಸಬಹುದು. ಮದುವೆಯ ಬಗೆಗೆ ಶುಕ್ರನು ಸೂರ್ಯನ ಜತೆಗಿದ್ದು ಬಿಕ್ಕಟ್ಟು ಉದ್ಭವಿಸಿದೆ. ಕೇತುದೋಷವಿದೆ. ಗಣೇಶನನ್ನು ಸ್ತುತಿಸಿ. ಪ್ರತಿ ಗುರುವಾರ ಉದ್ದಿನ ಹಿಟ್ಟಿನ ಬೇಯಿಸಿದ ಮುದ್ದೆಯನ್ನು ಗೋಲಿ ಗಾತ್ರದ ಸುಮಾರು 24 ಚಿಕ್ಕಚಿಕ್ಕ ತುಂಡು ಮಾಡಿ ಮನೆಯ ಹೊರ ಆವರಣದ ಈಶಾನ್ಯ ಭಾಗದಲ್ಲಿ ಯಾರೂ ತುಳಿಯದ ಜಾಗೆಗೆ ಚೆಲ್ಲಿ. ಅಂಬಾಭವಾನಿಯನ್ನೂ ಸ್ತುತಿಸಿ. ರಕ್ಷೆಗೆ ದಾರಿ ಇದೆ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top