Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಪ್ರಶ್ನೆ-ಪರಿಹಾರ

Thursday, 04.01.2018, 3:02 AM       No Comments

|ಮಹಾಬಲಮೂರ್ತಿ ಕೊಡ್ಲೆಕೆರೆ

*ನಿರಂತರವಾದ ಶ್ರದ್ಧೆ, ಶ್ರಮ, ನಂಬಿಕೆಗಳಿಂದ ಮಾಡಿದ ಕೆಲಸಗಳು ಫಲ ಕೊಡುತ್ತಲೇ ಇಲ್ಲ. ಕೆಲಸ ಕೊಡುವೆ ಎಂದು ಯಾರೋ ಮುಂಬೈಗೆ ಕರೆದರು. ಕಾಯಾ ವಾಚಾ ಮನಸಾ ಶ್ರದ್ಧೆಯಿಂದ ಮಾಡಿದೆ. ಆದರೂ ಕೆಲಸ ಬಿಡಬೇಕಾಯಿತು. ಕೆಲಸವಿರುವಾಗಲೇ ಮದುವೆಯೂ ಆಯ್ತು. ಈಗ ಪತ್ನಿಯ ಸಂಬಳದಲ್ಲೇ ಜೀವನ ಸಾಗಿದೆ. ಚಿಕ್ಕಪುಟ್ಟ ಕೆಲಸ ಮಾಡುತ್ತಿದ್ದೇನೆ. ಏನೋ ಅಲ್ಪಸ್ವಲ್ಪ ಹಣವೂ ಸಿಗುತ್ತದೆ. ಆದರೆ ಏನಾಗಬೇಕು ಎಂದುಕೊಂಡಿದ್ದೆನೋ ಅದು ಆಗಲಿಲ್ಲ. ವೈದಿಕ ವೃತ್ತಿಯಲ್ಲಿ ತೊಡಗಬಹುದೆ? ತಂದೆಯ ವೃತ್ತಿಯೂ ಇದೇ ಆಗಿತ್ತು.

| ನಾರಾಯಣ ಭಟ್ಟ ಶೃಂಗೇರಿ

ನಿಮ್ಮ ಪ್ರಶ್ನೆಯಲ್ಲಿ ವೈದಿಕ ವೃತ್ತಿಗೆ ತೊಡಗಿಸಿಕೊಳ್ಳಲು ಏನೋ ಮುಜುಗರ ಇದ್ದಂತಿದೆ. ನಿಮ್ಮ ಅನುಭವಗಳೇನು ಎಂಬುದನ್ನು ತಿಳಿಸಿಲ್ಲ. ತಂದೆಯದು ವೈದಿಕ ವೃತ್ತಿಯಾಗಿತ್ತು ಎಂಬುದೇ ನಿಮ್ಮ ಅರ್ಹತೆ ಆಗಬಾರದು. ನಿಮ್ಮ ಜಾತಕಕುಂಡಲಿಯಲ್ಲಿ ವೈದಿಕ ಜ್ಞಾನ ಹೆಚ್ಚಿಸುವ ರಾಹುವಿಗೆ ಸಾಮರ್ಥ್ಯವಿದ್ದು, 2018ರ ಮಾರ್ಚ್​ನಲ್ಲಿ ಕುಜದಶಾ ಮುಗಿಸಿ ರಾಹುದಶಾಕ್ಕೆ ಪ್ರವೇಶ ಪ್ರಾರಂಭವಾಗಲಿದೆ. ರವಿ-ಬುಧರು ಒಗ್ಗೂಡಿದ್ದರೂ ನೀಚ ಬುಧನ ಉಪಸ್ಥಿತಿಯು ಕರ್ಮಸ್ಥಾನದಲ್ಲಿ ಅಸ್ತಂಗತ ದೋಷವನ್ನು ಪಡೆದಿದೆ. ಎಚ್ಚರಿಕೆಯಿಂದ ಶಾಸ್ತ್ರಾಭ್ಯಾಸ ನಡೆಸಿ. ದಿಗ್ಬಲ ಪಡೆದ ಸೂರ್ಯನಿಂದ ಮಹತ್ವದ ತಿರುವಿಗೆ ಅವಕಾಶವಿದೆ. ಮೇಧಾ ದಕ್ಷಿಣಾಮೂರ್ತಿಯನ್ನು, ಮಹಾವಿಷ್ಣುವನ್ನು ಆರಾಧಿಸಿ. ಸ್ವಸಾಮರ್ಥ್ಯದ ಅರಿವಿಗೆ ದಾರಿ ಇದೆ. ನಿಷ್ಠೆ ನಿಮ್ಮಲ್ಲಿದೆ. ಹಿಂದಕ್ಕೆ ಅಡಿ ಇಡದಿರಿ.

*ನಮ್ಮ ಪಾಲಿಗೆ ನಮ್ಮದೇ ಆದ ಮಗುವನ್ನು ಪಡೆಯುವ ಭಾಗ್ಯ ಸಿಗಲಿಲ್ಲ. ನನ್ನ ಪತ್ನಿಯ ಜಾತಕಕುಂಡಲಿಯನ್ನು ಕೂಡ ಕಳಿಸಿದ್ದೇನೆ. ನಾವು ದತ್ತು ಪಡೆದುಕೊಂಡ ಹೆಣ್ಣುಮಗಳಿಗೀಗ 13 ವರ್ಷ. ನಮ್ಮ ಬಳಿ ಅವಳ ಜಾತಕಕುಂಡಲಿ ಇಲ್ಲ. ಅರಿವಿಗೆ ಬರದೆ ಉಳಿದ ವಿಷಯವದು. ನಾವು ತಂದಾಗ ಇದ್ದ ಎರಡು ವರ್ಷದ ಮಗು ಅವಳು ಎಂಬ ಆನಂದವೇ ಈಗಲೂ ಎದೆಗವಚಿಕೊಂಡಾಗ ಮೂಡುತ್ತದೆ. ಆದರೆ ಅವಳ ಬೌದ್ಧಿಕ ಬೆಳವಣಿಗೆಗೆ ಅಡೆತಡೆಗಳಿವೆ. ಮುಂದೆ ಹೇಗೋ ಏನೋ ಎಂಬ ಅತಂತ್ರ ಸ್ಥಿತಿ ನಮಗೆ. ಆ ಮಗುವಿಗೆ ಪ್ರಬುದ್ಧತೆ ಬರಬಹುದೆ? ಏನು ಮಾಡಿದರೆ ಪರಿಹಾರವಾಗಬಹುದು? ದಯವಿಟ್ಟು ತಿಳಿಸಿ.

| ಶ್ರೇಯಸ್ ಶೆಟ್ಟಿಗಾರ್ ವಿಜಯಪುರ

ಸಮಸ್ಯೆ ಆಳವಾಗಿದೆ. ‘ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ ನಿರಾನಂದಮಾನಂದಮದ್ವೆ ೖತಪೂರ್ಣಂ ಪರಂ ನಿರ್ಗಣಂ ನಿರ್ವಿಶೇಷಂ ನಿರೀಹಂ ಪರಬ್ರಹ್ಮರೂಪಂ ಗಣೇಶಂ ಭಜೇಮ ||’ ಈ ಸಾಲುಗಳನ್ನು ಒದಿ. ಜನನ-ಮರಣಗಳಿಗೆ ಕಾರಣವಾಗುವ ಶಕ್ತಿಯೊಂದು ಹೇಗಿರಬಹುದು ಎಂಬುದನ್ನು ಅರ್ಥೈಸಲು ಸಾರ್ಥಕವಾದ ಮಂತ್ರ ಇದೆ. ಗಣೇಶನನ್ನು ಭಜಿಸಿ ಹಲವು ಪವಾಡಗಳನ್ನು ಸೃಷ್ಟಿಸಿಕೊಳ್ಳಬಹುದಾದ ಮಂತ್ರ ಇದು. ಪ್ರಾರ್ಥಿಸಿ, ಅಳಲನ್ನು ತೋಡಿಕೊಳ್ಳಿ. ನಿಮ್ಮನ್ನು ಅನುಗ್ರಹಿಸಲು ಇದು ಅನನ್ಯವಾಗಿದೆ. ಲೌಕಿಕದಲ್ಲಿ ಸುಮ್ಮನಿರಬೇಡಿ. ಮಕ್ಕಳ ತಜ್ಞರು, ಮಾನಸಿಕ ತಜ್ಞರನ್ನು ಬಿಡದೆ ಸಂದರ್ಶಿಸಿ, ಸಲಹೆ ಪಡೆದುಕೊಳ್ಳಿ.

*ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ಎಲ್ಲೆಲ್ಲಿಗೆಲ್ಲ ಅಲೆದಾಡಿದೆ ಎಂಬುದನ್ನು ವರ್ಣಿಸಲು ಶಬ್ದಗಳಿಲ್ಲ. ಅದೆಷ್ಟು ರೀತಿ ಯಾತನೆ ಅನುಭವಿಸಿದೆ ಎಂದು ಹೇಳಲೂ ಜಿಗುಪ್ಸೆ ಬಂದಿದೆ. ಈಗ ಬದುಕಿನ ಗಾಡಿ ಎಲ್ಲಿಗೆ ಬಂದು ನಿಂತಿದೆ ಎಂದರೆ, ಈಗ ಹಿರಿಯರೊಬ್ಬರು ನನ್ನನ್ನು ಸಂಧಿಸಿದಾಗ ಒಂದು ಪ್ರಶ್ನೆ ಮುಂದಿಟ್ಟರು. ನನ್ನ ಕಥೆ ಕೇಳಿದ ಅವರಿಗೆ ಅವರ ಕಥೆ ಹೇಳುವ ಮನಸ್ಸಾಯ್ತು. ಈಗ ನನ್ನ ಮತ್ತು ಹುಡುಗಿಯ ಜಾತಕಗಳನ್ನು ಕಳಿಸಿದ್ದೇನೆ. ಸಂಧಿಸಿದ ಹಿರಿಯರು ದೊಡ್ಡ ಶ್ರೀಮಂತರು. ಮಗಳನ್ನು ಮದುವೆಯಾಗು ಎಂದು ಕಣ್ಣೀರಿಟ್ಟು ಕೇಳಿದರು. ಹುಡುಗಿ ತುಂಬ ಸುಂದರಿ. ದುರದೃಷ್ಟ ಎಂದರೆ ಅವಳಿಗೆ ಅಪಘಾತದಿಂದಾಗಿ ಎರಡೂ ಕಾಲುಗಳಿಲ್ಲ. ಈ ಬದುಕನ್ನು ಸ್ವೀಕರಿಸಲೆ?

| ಋತ್ವಿಕ್ ಶೆಟ್ಟಿ ಹೈದರಾಬಾದ್

ಜಾತಕಗಳ ಪರಿಶೀಲನೆ ನಡೆಸಿದೆ. ಮದುವೆಯಾಗಲು ತೊಂದರೆ ಇಲ್ಲ ಎಂಬುದು ಸ್ಪಷ್ಟ. ಈ ಹುಡುಗಿಯನ್ನು ಸ್ವೀಕರಿಸಲೆ ಎಂಬ ಪ್ರಶ್ನೆಯನ್ನು ಕೇಳಿದ್ದೀರಿ. ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂದು ಮನೆ ಬಿಟ್ಟು ಹೊರಟ ನಿಮಗೆ ಯಾತನೆ ಅನುಭವಿಸಿದೆ ಎಂಬ ಉದ್ಗಾರವನ್ನು ಬದುಕು ಹೊರಡಿಸಿದೆ. ಬಹಳಷ್ಟು ಎಡರುತೊಡರುಗಳನ್ನು ಎದುರಿಸಿದ್ದೀರಿ. ಧೈರ್ಯದಿಂದಲೂ, ಅಂಗವೈಕಲ್ಯದಿಂದಾಗಿ ಅಸಹಾಯಕಳಾಗಿರುವ ಒಬ್ಬ ಹುಡುಗಿಗೆ ಬಾಳು ಕೊಡುತ್ತಿರುವೆ ಎಂಬ ಉದಾರತೆಯನ್ನು ಪ್ರದರ್ಶಿಸಿ. ದುರ್ಗಾಳನ್ನು, ವಿಷ್ಣುವನ್ನು ಆರಾಧಿಸಿ. ‘ಮನಸು ಕಾರಣವಯ್ಯ’ ಎಂಬುದನ್ನು ನೆನಪಿಡಿ. ಗೆಲ್ಲುತ್ತೀರಿ.

*ಕೋಟ್ಯಂತರ ರೂಪಾಯಿಗಳ ಜಮೀನು, ಸೈಟು, ತೋಟಗಳು ಈಗ ಅತಂತ್ರ ಸ್ಥಿತಿಯಲ್ಲಿರಬೇಕಾದ ಬವಣೆಯನ್ನು ನಿರ್ವಿುಸಿವೆ. ಅತಿಶಯೋಕ್ತಿಯಲ್ಲ, ನ್ಯಾಯವಾಗಿ ನನಗೆ ಮತ್ತು ನನ್ನ ತಮ್ಮ ಇಬ್ಬರಿಗೂ ಆಸ್ತಿ ಸೇರಬೇಕು. ನಮ್ಮ ತಂದೆಯ ತಮ್ಮನ ಮಕ್ಕಳು ವ್ಯಾಜ್ಯ ಹೂಡಿದ್ದಾರೆ. ದಿಕ್ಕು ತೋರುತ್ತಿಲ್ಲ. ‘ದುಡಿದದ್ದೋ, ಪಡೆದದ್ದೋ… ಯಾವುದು ಮುಖ್ಯ?’ ಎಂಬ ವಿಚಾರ ಬಂದಾಗ ವೇದನೆಯಾಗುತ್ತದೆ. ಇಳಿವಯಸ್ಸಿನ ತಾಯಿಯ ನಿಟ್ಟುಸಿರು ನೋಡಿದಾಗ ಸಂಕಟವಾಗುತ್ತದೆ. ಪರಿಹಾರ ಇದೆಯೆ?

| ವಿನಾಯಕರಾವ್ ಗಾಯಕವಾಡ್ ಪುಣೆ

ದೋಷದ ಕಾವು ಕಿತ್ತು ತಿನ್ನುವಂತಹ ಯಾತನೆಯನ್ನು ತರುತ್ತಿರುತ್ತದೆ. ನಿಮ್ಮ ಜಾತಕದ ಚಂದ್ರನಿಂದಾಗಿ ಎಲ್ಲವೂ ಅಲ್ಲೋಲಕಲ್ಲೋಲವಾಗಿದೆ. ನಿಮ್ಮ ತಮ್ಮನ ಜಾತಕದಲ್ಲಿ ರವಿ-ಶುಕ್ರರ ಸಂಘರ್ಷವಿದೆ. ಅದರಿಂದಾಗಿ ನೆರಳಿರದ ಬಿಸಿಲಿನಲ್ಲಿ ಏರುಜಾಗದ ರಸ್ತೆಗೆ ದಣಿವಿರದೆ ಮುನ್ನುಗ್ಗು ಎಂದು ಹೇಳುತ್ತ ದಾರಿ ತಪ್ಪಿಸುವ ಶ್ರಮದಿಂದ ಕೂಡಿದ ವರ್ತಮಾನವನ್ನು ಎದುರಿಗೆ ತಂದಿಟ್ಟಿದೆ. ನೀವಿಬ್ಬರೂ ಸಹೋದರರು ರವಿ ಅಷ್ಟೋತ್ತರ, ಭೂವರಾಹಸ್ವಾಮಿ ಸ್ತೋತ್ರ ಪಠಣ, ಲಕ್ಷ್ಮೀನಾರಾಯಣ ಸಹಸ್ರ ನಾಮಾವಳಿಗಳನ್ನು ಓದಿ ಪ್ರಾರಬ್ಧದ ಗಂಟುಗಳನ್ನು ಜಾಣ್ಮೆಯಿಂದ, ತಾಳ್ಮೆಯಿಂದ ಬಿಡಿಸಿಕೊಳ್ಳಿ. ವಯೋವೃದ್ಧರ ಸಹಾಯದಿಂದ ವ್ಯಾಜ್ಯ ಬಗೆಹರಿಯುತ್ತದೆ. 2020ರ ಜನವರಿ ತಿಂಗಳಿನ ಸಂದರ್ಭದಲ್ಲಿ ಶನೈಶ್ಚರಸ್ವಾಮಿಯು ಮಕರರಾಶಿಗೆ ಬಂದಮೇಲೆ ತಡೆಯಲ್ಪಟ್ಟಿರುವ ಕುಬೇರನ ದಾರಿಗೆ ಬಿಡುಗಡೆ ಸಾಧ್ಯ. ಕಾಲದ ನಿರೀಕ್ಷೆಯಲ್ಲಿರಿ. ಒಳಿತಿಗೆ ದಾರಿ ನಿಶ್ಚಿತ.

*ಹಣದ ತೊಂದರೆ ಇಲ್ಲ ಎಂದಲ್ಲ. ಆದರೆ ಪತಿಯನ್ನು ಬದುಕಿಸುವುದು ನನಗೆ ಮುಖ್ಯ. ಎಷ್ಟೇ ಪ್ರಯತ್ನಿಸಿದರೂ ಹತೋಟಿಗೆ ಬರದ ಮಧುಮೇಹವು ಅವರ ಮೂತ್ರಪಿಂಡಗಳನ್ನು ನಿಷ್ಕ್ರಿಯಗೊಳಿಸಿದೆ. ನಾನು ಮತ್ತು ನನ್ನ ಇಬ್ಬರು ಮಕ್ಕಳು ಬದಲಿ ಮೂತ್ರಪಿಂಡ ಕೊಡಲು ಸಿದ್ಧರಿದ್ದರೂ ಯಜಮಾನರು ಒಪ್ಪುತ್ತಿಲ್ಲ. ‘ನನಗೆ ಇನ್ನೇನು ಬಾಕಿ ಇದೆ? ಈ ಪ್ರಪಂಚದಿಂದ ಮುಕ್ತವಾಗಲು ಅವಕಾಶ ಕೊಡಿ ಎಂದು ಹಠ ಹಿಡಿಯುತ್ತಾರೆ. ನನ್ನಿಂದಾಗಿ ನಿಮಗೆ ತೊಂದರೆಯಾಗಕೂಡದು ಎಂಬ ಹಠ. ಏನು ಮಾಡಲಿ?

| ರಾಧಾಬಾಯಿ ಅವರ್ಸೆಕರ್ ಮಾಂಡವಿ, ಗೋವಾ

ಬದುಕಿನ ಯಾನದ ಕೊನೆಯ ಘಟ್ಟದಲ್ಲಿದ್ದಾರೆ ಎಂದು ಅನಿಸುತ್ತಿಲ್ಲ. ಗಜಕೇಸರಿಯೋಗದ ಸಿದ್ಧಿಯಿಂದಾಗಿ ಮೃತ್ಯುಂಜಯನ ಬೆಂಬಲ ಅಬಾಧಿತವಾಗಿರುವ ಕಾಲಘಟ್ಟವಿದು. ಧನ್ವಂತರಿ ಶಾಂತಿಮಂತ್ರ, ವನಸ್ಪತಿ ಶಾಂತಿಮಂತ್ರ ಪಠಿಸಿ. ಜಾತಕದ ರಾಹುವಿನ ಶಕ್ತಿ ಹೇಗಿದೆ ಎಂದರೆ ವಿಷದ ಹೆಡೆ ಇರದ ಅಮೃತಮಯ ರಾಹುವು ಚೈತನ್ಯದ ಬುಗ್ಗೆಯಾಗಿದ್ದಾನೆ. ಆದರೂ ಇಂದು ವಕ್ಕರಿಸಿರುವಂತಹ ದೈನ್ಯದ ಸ್ಥಿತಿಗೆ ವ್ಯಯಸ್ಥಾನದಲ್ಲಿರುವ ಸನ್ಮಂಗಳಕಾರಕ ಶನೈಶ್ಚರನು ಹೇತುವಾಗಿದ್ದಾನೆ. ಪವಾಡಗಳು ಅಸಂಭವ ಎಂದೇನಿಲ್ಲ. ಒಂದು ಚಿಕ್ಕ ಕಡ್ಡಿಯ ರೂಪದಲ್ಲಿ ಹುಲ್ಲು ಸಿಕ್ಕಿದರೂ ರಕ್ಷೆಯ ಭರವಸೆ ಇದ್ದೇ ಇರುತ್ತದೆ. ಮೃತ್ಯುಂಜಯ ಜಪ ನಡೆಯಲಿ. ಅದೃಷ್ಟವು ಅಮೃತವನ್ನು ಕೊಡಲಿದೆ. ವಿಷವನ್ನು ಈಶ್ವರ ನುಂಗಲಿದ್ದಾನೆ. ಮುಂದಿನ ಮೂರು ತಿಂಗಳಲ್ಲಿ ಪವಾಡ ಸಾಧ್ಯವಾಗಲಿದೆ.

 

Leave a Reply

Your email address will not be published. Required fields are marked *

Back To Top