Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಪ್ರಶ್ನೆ ಪರಿಹಾರ

Thursday, 07.12.2017, 3:01 AM       No Comments

| ಮಹಾಬಲಮೂರ್ತಿ ಕೊಡ್ಲೆಕೆರೆ

# ನನ್ನ ಮಗ ಅಮೆರಿಕದಲ್ಲಿದ್ದಾನೆ. ಉತ್ಸಾಹದಿಂದಲೇ ಅಮೆರಿಕಕ್ಕೆ ಹೋಗಿದ್ದಾನೆ. ಹುಬ್ಬಳ್ಳಿ ಕಡೆಯ ಸಂಸಾರ ಒಂದು ಅಲ್ಲಿಯೇ ಇತ್ತು. ಅವನು ಆ ಸಂಸಾರದ ಹಿರಿಯರ ಹೆಂಡತಿಯ ತಂಗಿಯನ್ನೇ ಮೆಚ್ಚಿ ಮದುವೆಯಾದ. ಮದುವೆಯಾದಲ್ಲಿಂದ ನನ್ನ ಮಗ ನಿಶ್ಚಿತ ನೆಲೆ ಕಳೆದುಕೊಂಡಿದ್ದಾನೆ. ಹೆಂಡತಿ ಬಳಿಯಿದ್ದಾಗ, ತನ್ನನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎಂಬ ಭಾವನೆ ಬರುತ್ತದೆ ಎಂದು ಹೇಳುತ್ತಾನೆ. ‘ಹೆಂಡತಿಯ ತಪ್ಪು ಏನೂ ಇಲ್ಲ, ಚೆನ್ನಾಗಿಯೇ ಇದ್ದಾಳೆ. ಆದರೆ ಅವಳ ಬಳಿ ರಾತ್ರಿಯ ಹೊತ್ತು ವಿಚಿತ್ರ ಅನ್ಯಶಕ್ತಿ ಇದ್ದಂತೆ, ಕೈಕಾಲುಗಳು ನಿಶ್ಚಲವಾದಂತೆ ಅನಿಸುತ್ತದೆ. ದಿಕ್ಕು ತೋಚದು’ ಎನ್ನುತ್ತಾನೆ. ಪರಿಹಾರ ತಿಳಿಸಿ.

| ಮನೋಹರ ಕಣಕಣ್ಣವರ್ ಖಾಂಡ್ವಾ, ಮಧ್ಯಪ್ರದೇಶ

ನೀವು ಸೊಸೆಯ ಜಾತಕ ಕಳಿಸಿದ್ದರೆ ಒಳ್ಳೆಯದಿತ್ತು. ನಿಮ್ಮ ಮಗನ ಜಾತಕದಲ್ಲಿ ಪಂಚಮಾರಿಷ್ಟ ದೋಷ ಗುರುತರವಾಗಿದೆ. ಕ್ಷೀಣ ಚಂದ್ರ ಮತ್ತು ಸೂರ್ಯರ ಮೇಲೆ ಕುಜ ಮತ್ತು ಶನೈಶ್ಚರರ ಒಗ್ಗೂಡಿದ ಸ್ಥಿತಿಯೊಂದಿಗಿನ ದೃಷ್ಟಿ ಅವ್ಯಕ್ತ ಭಯವನ್ನು ಸೃಷ್ಟಿಸುತ್ತಿದೆ. ಬದುಕಿನ ಸಂದರ್ಭದಲ್ಲಿ ಪುನಃ ಪುನಃ ಒದಗಿಬರುವ ಸೋಲುಗಳು ಘಾಸಿಸಿದಂತೆ; ಜಯಗಳೂ ಭಿನ್ನ ಕಾರಣಗಳಿಗಾಗಿ ತದನಂತರದ ಸೋಲುಗಳನ್ನು ತರುತ್ತವೆ. ನಿಮ್ಮ ಬಳಿ ಹಂಚಿಕೊಳ್ಳಲಾಗದ ದೋಷವೊಂದು ಸೊಸೆಯಿಂದ ಮಗನ ಪಾಲಿಗೆ ಕಾಣಿಸಿಕೊಂಡಿದೆ. ಮಗನಿಂದ ಬುಧನ ಬಗೆಗಿನ ಸ್ತುತಿ, ಆರಾಧನೆ ಆಗಬೇಕು (ಬುಧ ಪೀಡಾ ನಿವಾರಣಾ ಸ್ತೋತ್ರವನ್ನು ಸೊಸೆ ಓದಿದರೆ ಒಳಿತು). ಕ್ಷೀಣ ಚಂದ್ರ, ಸೂರ್ಯ ಸಂಯೋಜನೆಗಳ ಘಾತಕಶಕ್ತಿ ನಿವಾರಣೆಗೆ ವಿಷ್ಣುಸಹಸ್ರನಾಮ, ದತ್ತಸ್ತೋತ್ರ ಪಠಿಸಲಿ.

# ಮದುವೆಯಾಗಿ ಐದು ವರ್ಷಗಳಾದವು. ಮೊದಲು ತಿಳಿದಿರಲಿಲ್ಲ. ನನ್ನ ಪತ್ನಿ ಚಿಕ್ಕ ವಯಸ್ಸಿನಿಂದಲೇ ಮಧುಮೇಹ ಪೀಡಿತಳು. ಅವಳ ಬಗೆಗೆ ನನಗೆ ಇಷ್ಟಾದರೂ ಬೇಸರವಿಲ್ಲ. ಏನೋ ಅಸಹಾಯಕ ಸ್ಥಿತಿ ಇದ್ದವಳ ಬದುಕನ್ನು ಈಗ ಬೀದಿಗೆ ದೂಡುವ ಮನಸ್ಸು ನನ್ನದಲ್ಲ. ಆದರೆ ಮಕ್ಕಳೇ ಬೇಡ ಎನ್ನುತ್ತಾಳೆ. ಅವರಿಗೂ ತನ್ನ ಪ್ರಾರಬ್ಧ ಅಂಟಿದರೆ ಎಂಬ ಭೀತಿ ಅವಳಿಗೆ. ಬರುವ ಹಸುಗೂಸುಗಳಿಗೆ ಕಷ್ಟ ಬೇಡ ಎಂಬ ಅವಳ ಮಾತು ಸರಿ. ಆದರೆ ಬದುಕಿನಲ್ಲಿ ಬಂದದ್ದು ಬಂದಂತೆ ಎದುರಿಸುವಾ ಎಂಬುದು ನನ್ನಾಸೆ. ಪರಿಹಾರ ಇದೆಯೇ?

| ಸುರೇಶಗೌಡ, ಹಾಸನ

ನೀವು ಕೇಳಿದ ಪ್ರಶ್ನೆಗೆ ಉತ್ತರ ಒಂದೇ. ಅನ್ಯಾಯ ಮಾಡದ ದೇವರು ಎಂದು ನಾವು ತಿಳಿದ ಸರ್ವಶಕ್ತನ ಬಳಿ ಕಾಪಾಡು ಎಂದು ಮೊರೆ ಇಡುವುದು. ‘ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ | ತಸ್ಮಾತ್ ಕಾರುಣ್ಯಭಾವೇನ ರಕ್ಷ ರಕ್ಷ ಮಹೇಶ್ವರ’ ಎಂದು ಆ ಸರ್ವೆಶ್ವರನಿಗೆ ಶರಣಾಗಿ. ಶಿವ ಕ್ಷಮಾಪಣಾ ಸ್ತೋತ್ರ, ಪಂಚಶಕ್ತಿ ಒಗ್ಗೂಡಿ ಅಭಯ ಕೊಡಬಹುದಾದ ಶ್ರೀಲಲಿತಾಳನ್ನು ಆರಾಧಿಸಿ. ಅನಿಷ್ಟಗಳು ಬರಲಾರವು.

# ನಾನು ಇಂಜಿನಿಯರ್. ನಮ್ಮ ಮನೆಯವರು ಸರ್ಕಾರಿ ಕೆಲಸದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಯಾವ ಕೆಟ್ಟ ಗಳಿಗೆಯೋ ತಿಳಿಯದು. ನಾನು ವಿವಾಹೇತರ ಸಂಬಂಧದ ಸಂಕೋಲೆಯಲ್ಲಿ ನರಳಿದೆ. ಇದು ತಪ್ಪಾಯ್ತು ಎಂದು ಈಗ ನನಗೇ ಅನಿಸಿ ಯಾತನಾಮಯವಾದ ಪಶ್ಚಾತ್ತಾಪದಲ್ಲಿ ಬೇಯುತ್ತಿದ್ದೇನೆ. ಈಗ ನಾನು ಗರ್ಭಿಣಿ. ಇದು ನನ್ನ ಪತಿಯಿಂದಲೇ ರೂಪುಗೊಂಡಿದ್ದು ಎಂದು ನನಗೆ ಚೆನ್ನಾಗಿ ಗೊತ್ತು. ಆದರೆ ಗಂಗೆಯ ನೀರಿನಂತೆ ಸ್ವಚ್ಛವಾಗಿರುವ ನನ್ನವರ ಅಂಶವನ್ನು ಭ್ರಷ್ಟೆಯಾದ ನಾನು ಹೊರುವುದು ಸೂಕ್ತವೇ ಎಂದು ಮನಸ್ಸು ಕ್ಷೋಭೆಗೊಂಡಿದೆ. ಅನ್ಯಸಂಬಂಧ ತೊರೆದಿದ್ದೇನೆ. ಆದರೆ ಏನೋ ಒಂದು ನನ್ನನ್ನು ಬಿಡದೆ ಕಿತ್ತು ತಿನ್ನುತ್ತಿದೆ. ನನಗೆ ಆತ್ಮಹತ್ಯೆಯ, ಗರ್ಭ ನಿವಾರಿಸುವ ಯೋಚನೆಗಳು ಬರುತ್ತಿವೆ. ಏನು ಮಾಡಲಿ?

| ಅನಿತಾ ರಂಗಮೂರ್ತಿ ಮಂಗಳೂರು

ಪಶ್ಚಾತ್ತಾಪ ಎಲ್ಲ ಪಾಪಗಳನ್ನೂ ಕರಗಿಸುವ ಶಕ್ತಿ ಹೊಂದಿದೆ ಎಂದು ಪ್ರಾಜ್ಞರು ಹೇಳುತ್ತಾರೆ. ನೀವೀಗ ಹೊತ್ತ ಗರ್ಭ ಕೈಹಿಡಿದ ಪತಿಯದ್ದೇ ಎಂಬ ವಿಚಾರದಲ್ಲಿ ನಿಮಗೆ ಅನುಮಾನಗಳಿಲ್ಲವಾದರೂ ಪಾಪಪ್ರಜ್ಞೆಯ ಕರಿನೆರಳು ಬಾಧಿಸುತ್ತಿದೆ. ನಿಮ್ಮ ಮತ್ತು ನಿಮ್ಮ ಪತಿಯ ಜಾತಕಗಳು ತಿಳಿಸುತ್ತಿರುವ ಮಾಹಿತಿಗಳ ಆಧಾರದಿಂದ ಹೇಳುವುದಾದರೆ ಮಕ್ಕಳಿಗೆ ಬಾಧೆಗಳು ಬಾರದು ಎಂದು ಸ್ಪಷ್ಟಪಡಿಸಬಹುದು. ಭಾರತೀಯ ಜ್ಯೋತಿಷ್ಯ ವಿಚಾರದ ನೆಲೆಯಲ್ಲಿ ನಿಮ್ಮ ಪಾಪಪ್ರಜ್ಞೆಯನ್ನು ನಿವಾರಿಸುವ ಬಗೆಗೆ ನೇರವಾದ ಪ್ರಸ್ತಾಪ ಎಂದರೆ ಜಗದೀಶ್ವರನಾದ (ಅವನು ಶಿವನೋ, ವಿಷ್ಣುವೋ ನಿಮಗೆ ಸಂಬಂಧಿಸಿದ ವಿಚಾರ) ಪುರುಷೋತ್ತಮನನ್ನು ನೆನೆಯುವುದು. ಪತಿಯ ಬಳಿ ತಪ್ಪು ಮಾಡಿದ್ದ ವಿಚಾರ ತಿಳಿಸುವ ನಿರ್ಧಾರ ಜಟಿಲವಾಗಿದೆ. ಶ್ರೀ ಲಲಿತಾಳನ್ನು ಸ್ತುತಿಸಿ.

# ಕೆಲಸದ ಸ್ಥಳದಲ್ಲಿ ಬಾಧೆಯಾಗಿದೆ. ಎರಡು ಸಹೋದ್ಯೋಗಿಗಳು ಯಾಕೋ ಏನೋ ನನ್ನ ಸಕಾರಾತ್ಮಕ ಶಕ್ತಿಯನ್ನು ಅಸ್ತವ್ಯಸ್ತಗೊಳಿಸುತ್ತಾರೆ ಎಂದು ಹೆದರಿಕೆಯಾಗುತ್ತಿದೆ (ನೇರವಾಗಿ ಮಾಡುವುದಿಲ್ಲ. ಆದರೆ ವಿನಾಕಾರಣ ಕೆಲವು ಅಸಹಾಯಕ ಸ್ಥಿತಿ ನಿರ್ವಿುಸುತ್ತಾರೆ). ನನ್ನ ಟೇಬಲ್ ಮೇಲೆ ನಿಂಬೆಹಣ್ಣು, ಕುಂಕುಮ, ಇದ್ದಿಲುಪುಡಿ ಬಂದು ಬಿದ್ದಿರುತ್ತದೆ. ಹೌದು, ಇವೆಲ್ಲ ಏನೂ ಮಾಡದು ಎಂದು ಒಳಹೃದಯ ಗಟ್ಟಿಯಾಗಿ ಹೇಳುತ್ತದಾದರೂ ಎಲ್ಲೋ ಒಂದೆಡೆ ಭಯ ತತ್ತರಿಸುವಂತೆ ಮಾಡಿ ಎಲ್ಲದರಿಂದಲೂ ದೂರ ಸರಿಸಿ ನಿಲ್ಲಿಸುತ್ತದೆ. ಜರ್ಮನಿಯಿಂದ ಕರೆ ಇದೆ. ಉನ್ನತ ವ್ಯಾಸಂಗ ಸಾಧ್ಯವಾದೀತೆ? ದಾರಿ ತಿಳಿಸಿ.

| ಚಂದ್ರಶೇಖರ ಎಸ್.ಆರ್., ಕರಾಡ್

ಹೆದರಬೇಡಿ. ಹಲ್ಲು ಉಜ್ಜಿ ಹಳೆಯದಾದ ಒಂದು ಬ್ರಷ್​ನಿಂದ ಟೇಬಲ್​ಗೆ ತಂದಿಡುವ ಲಿಂಬುವನ್ನು ಲಾಕ್ ಮಾಡಬಹುದಾದ ಪ್ಲಾಸ್ಟಿಕ್ ಪ್ಯಾಕೆಟ್​ಗೆ ತಳ್ಳಿ. ಕುಂಕುಮ, ಇದ್ದಿಲಪುಡಿಯನ್ನು ಎಡಗೈಯಿಂದ ಒಂದು ಕಾಗದಕ್ಕೆ (ಅದೇ ಬ್ರಷ್​ನಿಂದ ಪ್ಯಾಕೆಟ್​ಗೆ ಸರಿಸಿದರೂ ಸರಿ) ತಳ್ಳಿ ಮುದ್ದೆ ಕಟ್ಟಿ ಪ್ಯಾಕೆಟ್​ಗೆ ತಳ್ಳಿ. ನಿಮ್ಮ ಮನೆಯ ದಾರಿಯ ಒಂದೆಡೆ ಇರುವ ದೊಡ್ಡ ಮರದ ಬುಡಕ್ಕೆ ಆ ಪ್ಯಾಕೆಟ್ ಎಸೆಯಿರಿ. ಕಾಲಭೈರವಾಷ್ಟಕ ಓದಿ. ಕುಹಕಿಗಳು ಸಿಕ್ಕಿಬೀಳುತ್ತಾರೆ. ಉನ್ನತ ವ್ಯಾಸಂಗ ಕೈಗೊಳ್ಳಿ. ಒಳಿತಿದೆ.

# ನಮ್ಮ ಮದುವೆಯಾಗಿ ಐದು ವರ್ಷಗಳೇ ಕಳೆದಿವೆ. ಮಕ್ಕಳಾಗಿಲ್ಲ. ಮದುವೆಯಾದ ಹೊಸತರಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಗ ಒಬ್ಬ ಬೈರಾಗಿ ಎದುರಿಗೆ ಬಂದುನಿಂತು ಪರಿಚಯ, ಗುರುತು ಇರದಿದ್ದರೂ ‘ನಮಸ್ಕಾರ, ಎಷ್ಟು ಮಕ್ಕಳು’ ಎಂದು ಕೇಳುತ್ತ ಉತ್ತರ ಕೊಡುವುದರ ಒಳಗೇ ವಿಚಿತ್ರವಾಗಿ ವ್ಯಂಗ್ಯದಿಂದ ನಕ್ಕು ಹೊರಟುಹೋದ. ಇದೆಂಥ ಕಾಕತಾಳೀಯವೋ ಏನೋ? ನಮ್ಮ ಮನೆಯವರು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಮಂಕು ಕವಿದಂತೆ ಇರುತ್ತಾರೆ. ಏನೋ ಪ್ರಮಾದವಾಗಿದೆ ಎಂದು ಹೇಳುತ್ತಲೇ ಇರುತ್ತಾರೆ. ಯಾವುದೂ ತಿಳಿಯದಾಗಿದೆ. ಮಕ್ಕಳ ಯೋಗ ಇದೆಯೇ?

| ವಿಜಯಾ ನರಸಿಂಗರಾಯ, ಕಾಕಿನಾಡು

ಇಂಥ ಸಾವಿರ ಬೈರಾಗಿಗಳು ಬರುತ್ತಾರೆ, ಹೋಗುತ್ತಾರೆ. ಏನನ್ನೋ ಹೇಳುತ್ತಾರೆ. ಇಲ್ಲದ್ದನ್ನು ಹೇಳಿ ಹೋಗುತ್ತಾರೆ. ಜೀವನದಲ್ಲಿ ಶೇಕಡಾ 70ರಷ್ಟು ಜನ ನಾಟಕ ಮಾಡುತ್ತಲೇ ಇರುತ್ತಾರೆ ಎಂಬುದನ್ನು ತಿಳಿದಿರಿ. ನಿಮ್ಮಿಬ್ಬರ ಜಾತಕದಲ್ಲಿ ಮಕ್ಕಳ ಯೋಗವಿದೆ. ರಾಹುದಶಾ ಕಾಲದಲ್ಲಿರುವ ನಿಮ್ಮ ಪತಿ ಸದ್ಯ ಒಂದು ಭ್ರಾಮಕ ಸ್ಥಿತಿಗೆ ತುತ್ತಾಗುವ ಕಾಲಘಟ್ಟವಿತ್ತು. ಅದೀಗ ಮುಗಿದಿದೆ. ಸರ್ವಮಂಗಳೆಯಾದ ಮಹಾಗೌರಿಯನ್ನು ಮಹಾಶಕ್ತಿಯಾದ ಶಿವನನ್ನು ಆರಾಧಿಸಿ. ಬರುವ ಹತ್ತು ತಿಂಗಳುಗಳ ಕಾಲ ನಿಮ್ಮ ಸಿದ್ಧಿಯ ಚೌಕಟ್ಟಿಗೆ ಹೊಸ ಸಂಪನ್ನತೆ ತರುವ ವರ್ತಮಾನದಲ್ಲಿ ದುರ್ಗಾಳ ಸ್ವರೂಪವಾದ ಶುಕ್ರನು ಶುಭದಾಯಕನಾಗಿದ್ದಾನೆ. ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾಂ | ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿ ನಮೋಸ್ತುತೇ || ಎಂದು ಪ್ರತಿದಿನ 27 ಬಾರಿ ಪಠಿಸುತ್ತ, ಸೂರ್ಯಾಸ್ತದ ನಂತರದ ಎಪ್ಪತ್ತು ನಿಮಿಷಗಳ ಅವಧಿಯಲ್ಲಿ ಮನೆಯ ದೇವರೆದುರು ಒಂದು ಪುಟ್ಟ ದೀಪ ಬೆಳಗಿ, ಕತ್ತಲನ್ನು ಕಳೆಯುವ ಬೆಳಕಿನ ದಿವ್ಯಸ್ಥಿತಿ ನಿಮ್ಮ ಮನದ ಸಂಕಲ್ಪವನ್ನು ಈಡೇರಿಸಲು ಸಫಲವಾಗುತ್ತದೆ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top