ಪ್ರಶಸ್ತಿಗಳು ಉನ್ನತ ಸಾಧನೆಗೆ ಮೆಟ್ಟಿಲು

ರಾಯಚೂರು: ಸಮಾಜದಲ್ಲಿ ಸಾಧಕರು ವಿರಳ. ಅವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ. ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವುದರಿಂದ ಅವರು ಮತ್ತಷ್ಟು ಸಾಧನೆ ಮಾಡಲು ಸಾಧ್ಯ ಎಂದು ಎಂಎಲ್ಸಿ ಎನ್.ಎಸ್.ಬೋಸರಾಜು ಹೇಳಿದರು.

ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ಹಳೆಯ ಮಧುರಗೀತೆಗಳ ಗಾಯನದ ಮೂಕ ಹಕ್ಕಿ ಹಾಡುತ್ತಿದೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ರಾಯಚೂರು ಜಿಲ್ಲೆ ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದು, ಕಲಾವಿದರು ತಮ್ಮ ವೈಶಿಷ್ಟತೆಯಿಂದ ಹೆಸರುವಾಸಿಯಾಗಿದ್ದಾರೆ. ಅಪರೂಪ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕಲಾ ಸಂಕುಲ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಮಟಮಾರಿ ಶಿವಾನಂದ ಮಠದ ಜ್ಞಾನಾನಂದ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಸಂಸದ ಬಿ.ವಿ.ನಾಯಕ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಬೆಂಗಳೂರಿನ ಗಾಯಕರಾದ ಜ್ಯೋತಿ ರವಿಪ್ರಕಾಶ, ದ್ರಾಕ್ಷಾಯಿಣಿ, ಎಚ್.ಎನ್. ಶ್ರೀನಿವಾಸಮೂರ್ತಿ ಅವರಿಂದ ಮಧುರ ಗೀತೆಗಳ ಗಾಯನ ನಡೆಯಿತು. ನಗರಸಭೆ ಸದಸ್ಯರಾದ ಜಯಣ್ಣ, ಬಿ.ರಮೇಶ, ಬಸವರಾಜ ದರೂರ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ, ಸಾಹಿತಿ ಡಾ.ದಸ್ತಗೀರ್‌ಸಾಬ್ ದಿನ್ನಿ, ಬಿ.ನೀಲಮ್ಮ, ಕಲಾ ಸಂಕುಲ ಸಂಸ್ಥೆ ಅಧ್ಯಕ್ಷೆ ರೇಖಾ ಬಡಿಗೇರ ಇದ್ದರು. ಮಾರುತಿ ಬಡಿಗೇರ ಸ್ವಾಗತಿಸಿದರು. ಸಾರ್ಥವಳ್ಳಿ ನಾರಾಯಣ ಸ್ವಾಮಿ ನಿರೂಪಿಸಿದರು.