ಪ್ರವಾಹ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಮುಂಡರಗಿ: ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಹೆಚ್ಚಾಗಿ ಜಲಾವೃತವಾಗಿದ್ದ ವಿಠಲಾಪುರ, ಹಳೇಶಿಂಗಟಾಲೂರ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಎದುರು ಸಮಸ್ಯೆ ಹೇಳಿಕೊಂಡ ಹಳೇ ಶಿಂಗಟಾಲೂರು ಗ್ರಾಮಸ್ಥರು, ‘1992ರಲ್ಲಿ ತುಂಗಭದ್ರಾ ನದಿಯಲ್ಲಿ ಉಂಟಾದ ಭಾರಿ ಪ್ರವಾಹಕ್ಕೆ ಹಳೇಶಿಂಗಟಾಲೂರ ಗ್ರಾಮ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಗ್ರಾಮ ಸ್ಥಳಾಂತರಕ್ಕೆ ಅಂದಿನ ಸರ್ಕಾರ ಅಲ್ಪ-ಸ್ವಲ್ಪ ಹಣ ನೀಡಿದ್ದರಿಂದ ಮನೆಗಳನ್ನು ನಿರ್ವಿುಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಹೊಸ ಶಿಂಗಟಾಲೂರ ಗ್ರಾಮದಲ್ಲಿ ಮನೆ ನಿರ್ವಿುಸಿಕೊಳ್ಳಲು ಹಳೇಶಿಂಗಟಾಲೂರ ಗ್ರಾಮಸ್ಥರಿಗೆ ಹೆಚ್ಚಿನ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾಮದಲ್ಲಿ 15 ಕುಟುಂಬದವರು ವಾಸವಾಗಿದ್ದಾರೆ. ಪ್ರವಾಹ ಬಂದಾಗ ಎಲ್ಲ ಅಧಿಕಾರಿಗಳು ಬಂದು ಹೋಗುತ್ತಾರೆ ಆದರೆ, ಇದುವರೆಗೂ ನಮ್ಮ ಸಮಸ್ಯೆಗಳು ಪರಿಹಾರವಾಗಿಲ್ಲ ಎಂದು ಹಳೇಶಿಂಗಟಾಲೂರ ಗ್ರಾಮಸ್ಥ ಫಕೀರಶೆಟ್ಟಿ ಶೆಟ್ಟರ್ ದೂರಿದರು.

ಗ್ರಾಮದ ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ಪರಿಶೀಲಿಸಿ ಮಾತನಾಡಿದ ಜಿಲ್ಲಾಧಿಕಾರಿ, ‘ಪ್ರಕೃತಿ ವಿಕೋಪದಡಿ ಹೊಸ ಶಿಂಗಟಾಲೂರಿನಲ್ಲಿ ಶೆಡ್ ನಿರ್ವಿುಸಿಕೊಡಲಾಗುತ್ತದೆ. ಗ್ರಾ.ಪಂ. ವತಿಯಿಂದ ಬಸವ ವಸತಿ ಯೋಜನೆಯಡಿ ಹಳೇಶಿಂಗಟಾಲೂರ ಗ್ರಾಮಸ್ಥರಿಗೆ ಮನೆಗಳನ್ನು ಕಟ್ಟಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಅಲ್ಲದೆ, ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ತಹಸೀಲ್ದಾರ್​ಗೆ ಸೂಚಿಸಿದರು. ಗ್ರಾ.ಪಂ.ವತಿಯಿಂದ ಬಸವ ವಸತಿಯಲ್ಲಿ ಅನುದಾನ ನೀಡಬೇಕು ಎಂದು ಸೂಚಿಸಿದರು. ಶಿಂಗಟಾಲೂರ ಗ್ರಾ.ಪಂ. ಅಧ್ಯಕ್ಷ ಮಂಜುನಾಥ ಮುಂಡವಾಡ ಪ್ರತಿಕ್ರಿಯಿಸಿ, ‘ಹಳೇ ಶಿಂಗಟಾಲೂರಿನಲ್ಲಿ ಮೊದಲು 25 ಕುಟುಂಬದವರು ವಾಸವಿದ್ದರು. ಅದರಲ್ಲಿ 10 ಕುಟುಂಬದವರಿಗೆ ಹೊಸ ಶಿಂಗಟಾಲೂರಿನಲ್ಲಿ ಮನೆ ಕಟ್ಟಿಕೊಳ್ಳಲು ಬಸವ ವಸತಿಯಲ್ಲಿ ಅನುದಾನ ನೀಡಲಾಗಿದೆ. ಈಗಾಗಲೇ ಕೆಲವರು ಮನೆ ನಿರ್ವಿುಸಿಕೊಳ್ಳುತ್ತಿದ್ದಾರೆ. ಉಳಿದ ಕಟುಂಬದವರಿಗೆ ಶೀಘ್ರವೇ ಮನೆ ಕಟ್ಟಿಕೊಳ್ಳಲು ಅನುದಾನ ನೀಡಲಾಗುತ್ತದೆ’ ಎಂದರು.

ಉಪ ವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ತಾ.ಪಂ. ಇಒ ಸಿ.ಆರ್. ಮುಂಡರಗಿ, ಕಂದಾಯ ನಿರೀಕ್ಷಕ ಎಸ್.ಎಸ್ .ಬಿಚ್ಚಾಲಿ, ಎಚ್.ಟಿ. ಸ್ವಾಗಿ, ಲೋಕೇಶ ಶೆಟ್ಟರ್, ಮತ್ತಿತರರು ಇದ್ದರು.

ಗ್ರಾಮ ಸ್ಥಳಾಂತರಕ್ಕೆ ಕ್ರಮ: ನಂತರ ಜಿಲ್ಲಾಧಿಕಾರಿಗಳು ವಿಠಲಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ರ್ಚಚಿಸಿದರು. ‘ಪ್ರತಿ ಬಾರಿ ನೆರೆ ಬಂದಾಗ ವಿಠಲಾಪುರ ಗ್ರಾಮದ ಬಹುತೇಕ ಮನೆಗಳು ಜಲಾವೃತಗೊಳ್ಳುತ್ತವೆ. ಇದರಿಂದಾಗಿ ಗ್ರಾಮದ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ’ ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು. ಹಮ್ಮಿಗಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಈ ಭಾಗದ ಬಿದರಹಳ್ಳಿ, ಗುಮ್ಮಗೋಳ, ವಿಠಲಾಪುರ ಗ್ರಾಮವನ್ನು ಮುಳಗಡೆ ಪ್ರದೇಶವೆಂದು ಘೊಷಿಸಲಾಗಿತ್ತು. ಬಿದರಹಳ್ಳಿ, ಗುಮ್ಮಗೋಳ ಗ್ರಾಮಕ್ಕೆ ಪುನರ್​ವಸತಿ ಕಲ್ಪಿಸಲಾಗಿದೆ. ಆದರೆ, ವಿಠಲಾಪುರ ಗ್ರಾಮಕ್ಕೆ ಇದುವರೆಗೂ ಪುನರ್ ವಸತಿ ಕಲ್ಪಿಸುವ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಗ್ರಾಮಸ್ಥರಿಗೆ ಪರಿಹಾರವೂ ಬಂದಿಲ್ಲ. ಆದ್ದರಿಂದ ಶೀಘ್ರವೇ ವಿಠಲಾಪುರ ಗ್ರಾಮವನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ವಿಠಲಾಪುರ ಗ್ರಾಮದ ಪುನರ್ ವಸತಿಗೆ ಶೀಘ್ರವೇ ನಿವೇಶ ಖರೀದಿಸಲಾಗುತ್ತದೆ. ಈಗಾಗಲೇ ಭೂಮಿ ಖರೀದಿ ಪ್ರಕ್ರಿಯೆ ನಡೆದಿದೆ. ನಿವೇಶನ ಕಲ್ಪಿಸಿದ ನಂತರ ಪರಿಹಾರ ಕೊಡಲಾಗುತ್ತದೆ ಎಂದರು.