ಪ್ರವಾಹ ನಿರ್ವಹಣೆಗೆ ಸಿದ್ಧರಾಗಿರಿ

ಗದಗ: ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು ಈಗಾಗಲೇ ಜಿಲ್ಲಾಡಳಿತ ಸೂಚಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳಲು ಹಾಗೂ ತಾಲೂಕು ಸಹಾಯವಾಣಿ ಪ್ರಾರಂಭಿಸಲು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವಹಾನಿ ಸಂದರ್ಭದಲ್ಲಿ ವಿಳಂಬ ಮಾಡದೆ ಪರಿಹಾರ ವಿತರಣೆಗೆ ತಹಸೀಲ್ದಾರರು ಕ್ರಮ ಜರುಗಿಸಬೇಕು. ಗದಗ ಹೊರತುಪಡಿಸಿ ಎಲ್ಲ ತಹಸೀಲ್ದಾರ್ ಕಚೇರಿಗಳು ಬೋಟ್ ಹೊಂದಿದ್ದು, ಅಗತ್ಯಬಿದ್ದಾಗ ಉಪಯೋಗಕ್ಕೆ ಬರುವಂತೆ ಅಗತ್ಯ ದುರಸ್ತಿ ಮಾಡಿಸಿ ಸನ್ನದ್ಧವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಈ ಹಿಂದಿನ ಸಂದರ್ಭಗಳಲ್ಲಿ ಮಳೆ, ಪ್ರವಾಹದಿಂದ ಬಾಧಿತವಾಗುವ ಗ್ರಾಮಗಳನ್ನು ಗುರುತಿಸಿ ಅವುಗಳ ಮೇಲೆ ನಿಗಾ ಇಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಜಾಗೃತಿ ಮೂಡಿಸಬೇಕು. ನಗರ ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆ, ಸೊಳ್ಳೆ ನಿಯಂತ್ರಕ ಫಾಗಿಂಗ್ ಕಾರ್ಯಗಳನ್ನು ನಿಯಮಿತವಾಗಿ ಜರುಗಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ನಗರ ಹಾಗೂ ಗ್ರಾಮ ಪಂಚಾಯಿತಿಗಳ ಸಮನ್ವಯತೆಯ ಮೂಲಕ ಅಗತ್ಯದ ಮುನ್ನೆಚ್ಚರಿಕೆ ಕೈಕೊಳ್ಳಬೇಕು. ಮಳೆ ಬಿರುಗಾಳಿ ಮುಂತಾದ ಪ್ರಕೃತಿ ವಿಕೋಪಗಳಿಂದ ಹಾನಿಯಾಗುವ ಗ್ರಾಮಗಳಲ್ಲಿ ಕಂದಾಯ ನಿರೀಕ್ಷಕರು ತಕ್ಷಣ ಭೇಟಿ ನೀಡಿ ತಹಸೀಲ್ದಾರರಿಗೆ ಅಗತ್ಯ ಮಾಹಿತಿ ನೀಡಬೇಕು. ಎಲ್ಲ ತಹಸೀಲ್ದಾರರಿಗೆ ವಿಪತ್ತು ನಿರ್ವಹಣೆಗೆ ಸರಾಸರಿ 25 ಲಕ್ಷ ರೂ. ಇರುವಂತೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.

ರೈತ ಸಮ್ಮಾನ ಯೋಜನೆಯಡಿ ಭೂಮಿ ಹೊಂದಿರುವ ಸಂಘ-ಸಂಸ್ಥೆಗಳು, ಮಾಜಿ ಹಾಗೂ ಹಾಲಿ ಸಂವಿಧಾನಿಕ ಹುದ್ದೆ ಹೊಂದಿದ ಕುಟುಂಬಗಳು, ಕೇಂದ್ರ ಹಾಗೂ ರಾಜ್ಯ ಹಾಲಿ ಹಾಗೂ ಮಾಜಿ ಸಚಿವರು, ಸಂಸದರು, ಶಾಸಕರು, ನಗರಸಭೆ-ಪುರಸಭೆ ಅಧ್ಯಕ್ಷರು, ಗ್ರುಪ್ ಡಿ ಹೊರತುಪಡಿಸಿ ಸರ್ಕಾರಿ ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಹಾಲಿ ಹಾಗೂ ಮಾಜಿ ಸಂಸ್ಥೆಗಳ ಅಧಿಕಾರಿ ಹಾಗೂ ಸಿಬ್ಬಂದಿ, 10 ಸಾವಿರಕ್ಕೂ ಹೆಚ್ಚಿನ ಪಿಂಚಣಿ ಪಡೆಯುತ್ತಿರುವವರು, ತೆರಿಗೆ ಪಾವತಿದಾರರು, ವೃತ್ತಿಪರ ಉದ್ಯೋಗ ನಡೆಸುತ್ತಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ, ಗ್ರಾಪಂ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ, ನಾಡಕಚೇರಿ ಹಾಗೂ ನಾಗರಿಕ ಸೇವಾ ಕೇಂದ್ರಗಳನ್ನು ಸಂರ್ಪಸಬೇಕು ಎಂದರು.

ಜಿಪಂ ಸಿಇಒ ಮಂಜುನಾಥ ಚವ್ಹಾಣ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಜಿಪಂ ಯೋಜನಾ ನಿರ್ದೇಶಕ ಟಿ. ದಿನೇಶ, ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಲಕ್ಷ ರೈತರಿಂದ ನೋಂದಣಿರೈತ ಸಮ್ಮಾನ ಯೋಜನೆಯ ಅರ್ಜಿಯ ಜೊತೆಗೆ ಘೊಷಣಾ ಪತ್ರ ಅಗತ್ಯವಾಗಿದ್ದು, ಜಿಲ್ಲೆಯಲ್ಲಿ 1.79 ಲಕ್ಷ ರೈತರ ಪೈಕಿ ಈಗಾಗಲೇ 1 ಲಕ್ಷಕ್ಕೂ ಹೆಚ್ಚಿನ ರೈತರು ನೋಂದಣಿಯಾಗಿದ್ದಾರೆ ಎಂದು ಎಂ.ಜಿ. ಹಿರೇಮಠ ಹೇಳಿದರು. ಇನ್ನುಳಿದ 79 ಸಾವಿರ ರೈತರು ಜೂ. 28ರೊಳಗಾಗಿ ನೋಂದಣಿಯಾಗುವಂತೆ ತಹಸೀಲ್ದಾರರು, ತಾಪಂ ಇಒಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಚುರುಕಿನಿಂದ ಕಾರ್ಯ ನಿರ್ವಹಿಸಬೇಕು. 2018ರ ಮುಂಗಾರು ಬೆಳೆ ಹಾನಿಯ ಇನ್​ಪುಟ್ ಸಬ್ಸಿಡಿ ಪಡೆಯಬೇಕಾಗಿರುವ ಜಿಲ್ಲೆಯ ಬಾಕಿ ರೈತರ ಮಾಹಿತಿಯನ್ನು ತಕ್ಷಣ ಅಪ್​ಲೋಡ್ ಮಾಡಬೇಕು. ವಿಳಂಬವಾದಲ್ಲಿ ಅವರೇ ಹೊಣೆಗಾರರರು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *