ಪ್ರವಾಹ ತಡೆಗೆ ತಕ್ಷಣ ಕ್ರಮಕೈಗೊಳ್ಳಿ

ಬೆಂಗಳೂರು: ಮಳೆಯಿಂದಾಗಿ ಪ್ರವಾಹ ಉಂಟಾದ ಪ್ರದೇಶಗಳಿಗೆ ಮೇಯರ್ ಗಂಗಾಂಬಿಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಮುಂದಿನ ದಿನಗಳಲ್ಲಿ ಪ್ರವಾಹ ಉಂಟಾಗುವುದನ್ನು ತಡೆಯಲು ತಕ್ಷಣ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸೋಮವಾರ ಸಂಜೆ ಸುರಿದ ಮಳೆಯಿಂದ ಬನ್ನೇರುಘಟ್ಟ ಮುಖ್ಯರಸ್ತೆ, ಕೋಡಿಚಿಕ್ಕನಹಳ್ಳಿ, ಬಿಟಿಎಂ ಲೇಔಟ್ 6ನೇ ಹಂತ ಸೇರಿ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಅವಾಂತರ ಸೃಷ್ಟಿಯಾಗಿತ್ತು.

ಮನೆಗಳಿಗೆ ನುಗ್ಗಿದ ನೀರು ಖಾಲಿ ಮಾಡಲು ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿತ್ತು.

ಮಳೆಯಿಂದಾದ ಹಾನಿ ಕುರಿತು ವರದಿ ನೀಡುವಂತೆ ಮೇಯರ್ ಸೂಚಿಸಿದರು. ಮೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಪ್ರವಾಹ ಉಂಟಾಗಿತ್ತು. ಆಗ ಏನೆಲ್ಲ ಕ್ರಮ ಕೈಗೊಳ್ಳಲಾಗಿತ್ತು ಎಂಬ ಬಗ್ಗೆ ಮಾಹಿತಿ ಪಡೆದರು. ಪ್ರವಾಹ ತಡೆಯಲು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಎನ್.ಎಸ್. ಪಾಳ್ಯ ಮತ್ತು ಕೋಡಿಚಿಕ್ಕನಹಳ್ಳಿ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು. ಮೇಯರ್ ಎದುರೇ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ದೂರಿದರು. ಮುಂದೆ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳುವುದಾಗಿ ಗಂಗಾಂಬಿಕೆ ಭರವಸೆ ನೀಡಿದರು. ಬಿಟಿಎಂ ಲೇಔಟ್​ನ 13ನೇ ಅಡ್ಡರಸ್ತೆಯಲ್ಲಿ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ಗಮನಿಸಿ ಸರಿಪಡಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲೆಲ್ಲಿ ಒಳಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ ಎಂಬುದನ್ನು ಪರಿಶೀಲಿಸಿ ಪರಿಹರಿಸುವಂತೆಯೂ ನಿರ್ದೇಶನ ನೀಡಿದರು.

Leave a Reply

Your email address will not be published. Required fields are marked *